ಆಕ್ಸಿಜನ್‌ಗಾಗಿ ಕಾಂಗ್ರೆಸ್‌ಗೆ ಮೊರೆ ಹೋದ ನ್ಯೂಜಿಲೆಂಡ್, ಫಿಲಿಪ್ಪೀನ್ಸ್ ರಾಯಭಾರ ಕಚೇರಿ!| ಕರ್ನಾಟಕ ಕಾಂಗ್ರೆಸ್ ಮುಖಂಡ ಶ್ರೀನಿವಾಸ್‌ಗೆ ನೆರವಿನ ಕೋರಿಕೆ| ವಿದೇಶಾಂಗ ಸಚಿವಾಲಯ ಮಧ್ಯಪ್ರವೇಶ ಬಳಿಕ ಕ್ಷಮೆ ಯಾಚನೆ
ನವದೆಹಲಿ(ಮೇ.03): ಭಾರತದಲ್ಲಿ ಆಮ್ಲಜನಕದ ಬಿಕ್ಕಟ್ಟು ಸೃಷ್ಟಿ ಆಗಿರುವ ಮಧ್ಯೆಯೇ ಶಿಷ್ಟಾಚಾರವನ್ನು ಬದಿಗೊತ್ತಿ ನವದೆಹಲಿಯಲ್ಲಿರುವ ನ್ಯೂಜಿಲೆಂಡ್ ಮತ್ತು ಫಿಲಿಪ್ಪೀನ್ಸ್ ದೂತಾವಾಸ ಕಚೇರಿಗಳು ಕಾಂಗ್ರೆಸ್ ಯುವ ಘಟಕಕ್ಕೆ ವೈದ್ಯಕೀಯ ಆಮ್ಲಜನಕ ಸಿಲಿಂಡರ್ ಪೂರೈಸುವಂತೆ ಮೊರೆ ಹೋದ ಘಟನೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಭಾರತದ ವಿದೇಶಾಂಗ ಸಚಿವಾಲಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಳಿಕ, ನ್ಯೂಜಿಲೆಂಡ್ ಸರ್ಕಾರ, ಸಿಲಿಂಡರ್ ಕೋರಿ ತಾನು ಮಾಡಿದ್ದ ಟ್ವೀಟ್ ಅನ್ನು ಡಿಲೀಟ್ ಮಾಡಿ ಕ್ಷಮೆ ಕೋರಿದೆ.
ಕರ್ನಾಟಕದ ಭದ್ರಾವತಿಯ ಶ್ರೀನಿವಾಸ್ ಬಿ.ವಿ. ಅವರಿಗೆ ಟ್ವೀಟ್ ಮೂಲಕ ಕೋರಿಕೆ ಸಲ್ಲಿಸಿದ್ದ ನ್ಯೂಜಿಲೆಂಡ್ ಹೈ ಕಮಿಷನ್, ರಾಯಭಾರ ಕಚೇರಿಗೆ ಆಮ್ಲಜನಕ ಸಿಲಿಂಡರ್‌ನ ಅಗತ್ಯವಿದೆ. ನೆರವು ನೀಡುತ್ತೀರಾ ಎಂದು ಕೇಳಿಕೊಂಡಿತ್ತು. ಈ ಟ್ವೀಟ್ ಅನ್ನು ಗಮನಿಸಿದ ಶ್ರೀನಿವಾಸ್ ಅವರು ಆಮ್ಲಜನಕ ಸಿಲಿಂಡರ್ ಅನ್ನು ವ್ಯವಸ್ಥೆ ಮಾಡಿ ರಾಯಭಾರ ಕಚೇರಿಗೆ ಕಳುಹಿಸಿಕೊಟ್ಟಿದ್ದರು.
"
ಇನ್ನು ಶನಿವಾರ ರಾತ್ರಿ ಫಿಲಿಪ್ಪೀನ್ಸ್ ರಾಯಭಾರ ಕಚೇರಿ ಕೂಡಾ ಇದೇ ರೀತಿ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷರಿಗೆ ಟ್ವೀಟ್ ಮಾಡಿ ಒಂದು ಆಕ್ಸಿಜನ್ ಸಿಲಿಂಡರ್ ಪಡೆದುಕೊಂಡಿದೆ.
ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಲೇ ವಿದೇಶಾಂಗ ಸಚಿವಾಲಯ ಮಧ್ಯ ಪ್ರವೇಶಿಸಿ ವೈದ್ಯಕೀಯ ಸೇವೆಗೆ ಅಗತ್ಯವಿರುವ ಆಮ್ಲಜನಕ ಸಿಲಿಂಡರ್‌ಗಳನ್ನು ಸಂಗ್ರಹಣೆಯಲ್ಲಿ ತೊಡಗುವ ಅಗತ್ಯವಿಲ್ಲ. ಬೇಕಿದ್ದರೆ ನಮ್ಮನ್ನು ಸಂಪರ್ಕಿಸಿ ಎಂದು ಸಲಹೆ ನೀಡಿತು. ಬಳಿಕ ತನ್ನ ಟ್ವೀಟ್ ಅನ್ನು ಡಿಲೀಟ್ ಮಾಡಿರುವ ನ್ಯೂಜಿಲೆಂಡ್ ರಾಯಭಾರ ಕಚೇರಿ ಕ್ಷಮೆ ಯಾಚಿಸಿದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
