ಬೆಂಗಳೂರು(ಮೇ.25): ಕೊರೋನಾ ನಿಯಂತ್ರಣಕ್ಕೆ ಹಗಲಿರುಳು ಶ್ರಮಿಸುತ್ತಿರುವ ರಾಜ್ಯ ಪೊಲೀಸರ ಪಾಲಿಗಿದು ಆಘಾತಕಾರಿ ಸುದ್ದಿ. ರಾಜ್ಯ ಪೊಲೀಸ್‌ ಇಲಾಖೆಯ ಒಟ್ಟು ಆರು ಸಿಬ್ಬಂದಿಗೆ ಭಾನುವಾರ ಕೊರೋನಾ ಸೋಂಕು ದೃಢಪಟ್ಟಿದೆ. ಈ ಸಂಬಂಧ ರಾಜ್ಯದ 200ಕ್ಕೂ ಅಧಿಕ ಪೊಲೀಸರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ 3, ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಮತ್ತು ಹಾಸನದಿಂದ ತಲಾ ಒಬ್ಬ ಪೊಲೀಸ್‌ ಸಿಬ್ಬಂದಿಗೆ ಸೋಂಕು ತಗುಲಿದ ಪ್ರಕರಣಗಳು ವರದಿಯಾಗಿದ್ದು, ಒಟ್ಟು 6 ಪೊಲೀಸ್‌ ಠಾಣೆಗಳನ್ನು ಸೀಲ್‌ಡೌನ್‌ ಮಾಡಲಾಗಿದೆ.

ಕೊರೋನಾ ವಾರಿಯರ್ಸ್ ಮೇಲೆ ಮತ್ತೆ ದಾಳಿ, ಮಸೀದಿ ಮುಂದೆ ಪೊಲೀಸರ ಅಟ್ಯಾಕ್

ಉಡುಪಿ ಜಿಲ್ಲೆಯ ಚೆಕ್‌ಪೋಸ್ಟ್‌ಗಳಲ್ಲಿ ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಬರುವವರನ್ನು ತಪಾಸಣೆ ನಡೆಸುತ್ತಿದ್ದ ಬ್ರಹ್ಮಾವರ, ಅಜೆಕಾರು ಮತ್ತು ಕಾರ್ಕಳ ಗ್ರಾಮಾಂತರ ಠಾಣೆಯ ಮೂವರು ಪೊಲೀಸರಿಗೆ ಸೋಂಕು ಅಂಟಿದೆ. ಹೀಗಾಗಿ ಸೋಂಕಿತರು ಕಾರ್ಯ ನಿರ್ವಹಿಸಿರುವ ನಾಲ್ಕು ಪೊಲೀಸ್‌ ಠಾಣೆ, ಪೊಲೀಸ್‌ ಕ್ವಾರ್ಟರ್ಸ್‌ಗಳನ್ನು ಸೀಲ್‌ಡೌನ್‌ ಮಾಡಲಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಹಲವು ಪೊಲೀಸರನ್ನು ಕ್ವಾರಂಟೈನ್‌ಗೊಳಪಡಿಸಲಾಗಿದೆ.

ಇದೇ ವೇಳೆ ಮಹಾರಾಷ್ಟ್ರದಿಂದ ಬಂದಿದ್ದ ಸೋಂಕಿತ ವ್ಯಕ್ತಿಯೊಬ್ಬನ ಸಂಪರ್ಕದಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಠಾಣೆಯ ಹೆಡ್‌ಕಾನ್ಸ್‌ಟೇಬಲ್‌ ಒಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಸಂಬಂಧ ಠಾಣೆಯನ್ನು ಸ್ಯಾನಿಟೈಸ್‌ ಮಾಡಿ 13 ಸಿಬ್ಬಂದಿ ಸೇರಿ 20 ಮಂದಿಯನ್ನು ಕ್ವಾರಂಟೈನ್‌ ಮಾಡಲಾಗಿದೆ.

ಕಾರ್ಮಿಕರಿಗೆ ಸಹಾಯ ಮಾಡಿ ಮಾನವೀಯತೆ ಮೆರೆದ DCP ಚೇತನ್ ಸಿಂಗ್ ರಾಥೋಡ್‌

ಹಾಸನದಲ್ಲಿ ತೀವ್ರ ಆತಂಕ: ಇನ್ನು ಹಾಸನ ನಗರದಲ್ಲಿ ಕರ್ತವ್ಯ ನಿರ್ವಹಿಸಿದ್ದ ರಾಜ್ಯ ಪೊಲೀಸ್‌ ಮೀಸಲು ಪಡೆಯ ಕಾನ್‌ಸ್ಟೇಬಲ್‌ ಒಬ್ಬರಿಗೆ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಇವರ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ನೂರಕ್ಕೂ ಅಧಿಕ ಪೊಲೀಸ್‌ ಸಿಬ್ಬಂದಿಯನ್ನು ಹಾಸನ ಮತ್ತು ಮಡಿಕೇರಿಯಲ್ಲಿ ಕ್ವಾರಂಟೈನ್‌ಗೊಳಪಡಿಸಲಾಗಿದೆ. ಹಾಸನವೊಂದರಲ್ಲೇ 95 ಸಿಬ್ಬಂದಿಯನ್ನು ಕ್ವಾರಂಟೈನ್‌ಗೊಳಪಡಿಸಲಾಗಿದೆ. ಈ ಕಾನ್ಸ್‌ಟೇಬಲ್‌ನ ಸೋಂಕಿನ ಮೂಲ ಪತ್ತೆಯಾಗದಿರುವುದು ಜಿಲ್ಲಾಡಳಿತಕ್ಕೆ ತೀವ್ರ ತಲೆನೋವು ಸೃಷ್ಟಿಸಿದೆ. ಇವರು ಬೆಂಗಳೂರಿನ ಪಾದರಾಯನಪುರ, ಮಡಿಕೇರಿ, ರಾಮನಗರದ ಎಪಿಎಂಸಿಯಲ್ಲಿ ಬಂದೋಬಸ್‌್ತ ಕಾರ್ಯ ನಿರ್ವಹಿಸಿರುವುದರಿಂದ ಇವರ ಸಂಪರ್ಕಕ್ಕೆ ಬಂದ ಇನ್ನಷ್ಟುಮಂದಿ ಪೊಲೀಸ್‌ ಸಿಬ್ಬಂದಿಗೆ ಸೋಂಕು ಹರಡಿರೋ ಆತಂಕ ಸೃಷ್ಟಿಯಾಗಿದೆ. ಕಂಟೈನ್‌ಮೆಂಟ್‌ ಝೋನ್‌ನಲ್ಲಿದ್ದ ಪಾದರಾಯನಪುರದಲ್ಲಿ ಕರ್ತವ್ಯ ನಿರ್ವಹಿಸಿರೋ ಹಿನ್ನೆಲೆಯಲ್ಲಿ ಸೋಂಕು ತಗುಲಿತೇ ಎಂಬ ಅನುಮಾನವೂ ಈಗ ಹುಟ್ಟಿಕೊಂಡಿದೆ.

ಬೆಂಗಳೂರಲ್ಲಿ ಶನಿವಾರವಷ್ಟೇ ಇಬ್ಬರು ಪೊಲೀಸ್‌ ಸಿಬ್ಬಂದಿಗೆ ಸೋಂಕು ದೃಢಪಟ್ಟಿತ್ತು.