ರಾಜ್ಯದಲ್ಲಿ ಹೆಚ್ಚಾಗುತ್ತಿದೆ ಬ್ಲಾಕ್ ಫಂಗಸ್ ಸೋಂಕು ಬ್ಲಾಕ್ ಫಂಗಸ್ ಸೋಂಕಿನಿಂದ ಭಾನುವಾರ ರಾಜ್ಯದಲ್ಲಿ ಐವರು ಮರಣ ದಿನದಿನವು ಏರುತ್ತಿರುವ ಬ್ಲಾಕ್ ಫಂಗಸ್

ಬೆಂಗಳೂರು (ಮೇ.24): ಕೊರೋನಾ ಮಹಾಮಾರಿಯ ನಡುವೆ ಬ್ಲ್ಯಾಕ್‌ ಫಂಗಸ್‌ ಸೋಂಕು ಈಗ ರಾಜ್ಯದ ಜನರನ್ನು ಹೆದರಿಸಲು ಆರಂಭಿಸಿದೆ. ಬ್ಲ್ಯಾಕ್‌ ಫಂಗಸ್‌ ಭಾನುವಾರ ರಾಜ್ಯದಲ್ಲಿ ಐವರು ಮರಣ ಹೊಂದಿದ್ದಾರೆ.ರಾಯಚೂರು ಜಿಲ್ಲೆಯಲ್ಲಿ ಮೂರು ಸಾವನ್ನಪ್ಪಿದ್ದಾರೆ. ಆದರೆ ಜಿಲ್ಲಾಡಳಿತ ಒಬ್ಬರು ಮಾತ್ರ ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದೆ. ಇನ್ನು ತುಮಕೂರು ಜಿಲ್ಲೆಯಲ್ಲಿ ಇಬ್ಬರು ಜೀವ ತೆತ್ತಿದ್ದಾರೆ.

ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ವೃದ್ಧ ರಿಮ್ಸ್‌ ಬೋಧಕ ಆಸ್ಪತ್ರೆಯಲ್ಲಿ ಶನಿವಾರ ರಾತ್ರಿ ಸಾವನ್ನಪ್ಪಿದ್ದು, ಉಳಿದಂತೆ ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದ ಯುವಕ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಇನ್ನು ಜಿಲ್ಲೆ ಸಿರವಾರ ತಾಲೂಕಿನ ಯುವಕ ಕಲಬುರಗಿ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.

ವೈಟ್‌ ಫಂಗಸ್‌ ಸೋಂಕು: ರಾಜ್ಯದಲ್ಲಿ ಮೊದಲ ಬಲಿ? ..

ಇನ್ನು ತುಮಕೂರು ಜಿಲ್ಲೆಯ ಕುಣಿಗಲ್‌ನ ಗ್ರಾಮ ಪಂಚಾಯಿತಿ ಸದಸ್ಯ ಸೇರಿ ಇಬ್ಬರು ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ 90 ಮಂದಿಯಲ್ಲಿ ಬ್ಲ್ಯಾಕ್‌ ಫಂಗಸ್‌ ಕಾಣಿಸಿಕೊಂಡಿದೆ. ತುಮಕೂರು ಜಿಲ್ಲೆಯಲ್ಲಿ 18, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 6, ಬೆಳಗಾವಿಯಲ್ಲಿ 9, ಧಾರವಾಡ ಜಿಲ್ಲೆಯಲ್ಲಿ 16, ಬಳ್ಳಾರಿ ಜಿಲ್ಲೆಯಲ್ಲಿ 10, ಯಾದಗಿರಿ-ಕೊಪ್ಪಳ ಜಿಲ್ಲೆಯಲ್ಲಿ ತಲಾ ಇಬ್ಬರು, ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಓರ್ವನಲ್ಲಿ ರೋಗ ಕಂಡು ಬಂದಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona