ಕರಾವಳಿಯಲ್ಲಿ ಇನ್ನೂ 5 ದಿನ ಭಾರಿ ಮಳೆ: ಯೆಲ್ಲೋ ಅಲರ್ಟ್
ಕರಾವಳಿ ಜಿಲ್ಲೆಗಳಲ್ಲಿ ಮುಂದಿನ 5 ದಿನ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ‘ಯೆಲ್ಲೋ ಅಲರ್ಟ್’ ನೀಡಲಾಗಿದೆ. ಒಟ್ಟಾರೆ ಕರಾವಳಿ, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರು (ಜು.16): ಕರಾವಳಿ ಜಿಲ್ಲೆಗಳಲ್ಲಿ ಮುಂದಿನ 5 ದಿನ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ‘ಯೆಲ್ಲೋ ಅಲರ್ಟ್’ ನೀಡಲಾಗಿದೆ. ಜುಲೈ 16ರಿಂದ 20ರವರೆಗೆ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ಹಾಗೂ ಜುಲೈ 19 ಮತ್ತು 20 ರಂದು ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಮತ್ತು ಕೊಡಗು ಜಿಲ್ಲೆಗಳಿಗೆ ಮತ್ತು ಜುಲೈ 20 ರಂದು ಉತ್ತರ ಒಳನಾಡಿನ ಬೆಳಗಾವಿ, ಬೀದರ್‌ಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಒಟ್ಟಾರೆ ಕರಾವಳಿ, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಶನಿವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಶಿರಾಲಿಯಲ್ಲಿ ಅತಿ ಹೆಚ್ಚು 9 ಸೆಂ.ಮೀ ಮಳೆಯಾಗಿದೆ. ಕುಂದಾಪುರದಲ್ಲಿ 7, ಕದ್ರಾ 6, ಕಾರವಾರ, ಮಂಗಳೂರು ವಿಮಾನ ನಿಲ್ದಾಣ, ಗೋಕರ್ಣ, ಗೇರುಸೊಪ್ಪ, ಜೋಯಿಡಾ, ಪಣಂಬೂರು, ಕೋಟ ಹಾಗೂ ಉಪ್ಪಿನಂಗಡಿಯಲ್ಲಿ ತಲಾ 4, ಮಂಗಳೂರು, ಮಾಣಿ, ಅಂಕೋಲಾ, ಜಗಲಬೇಟ್, ಕುಮಟಾ, ಮಂಚಿಕೇರಿ, ಉಡುಪಿ, ಲೋಂಡಾ ಹಾಗೂ ಔರಾದ್‌ನಲ್ಲಿ ತಲಾ 3 ಸೆಂ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ನಮ್ಮ ಸರ್ಕಾರ ಭದ್ರವಾಗಿದೆ, ಕೊಟ್ಟಭರವಸೆ ಈಡೇರಿಸುತ್ತಿದೆ: ಸಚಿವ ಖಂಡ್ರೆ
ಭಾರಿ ಮಳೆಗೆ ವಿವಿಧೆಡೆ ಗುಡ್ಡ ಕುಸಿತ, ಹಾನಿ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಕೊಣಾಜೆ, ಹರೇಕಳ, ಬೆಳ್ಕ ವ್ಯಾಪ್ತಿಯ ಹಲವೆಡೆ ಗುಡ್ಡ ಕುಸಿತ, ಮನೆಗಳಿಗೆ ಹಾನಿ ಘಟನೆಗಳು ಮುಂದುವರಿದಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಗಾಳಿ ಮಳೆಯಿಂದಾಗಿ ಹರೇಕಳ ಗ್ರಾಮದ ಗುಡ್ಪಾಲ್ ಸಲಾಂ ಎಂಬವರ ಮನೆಯ ಒಂದು ಭಾಗವು ಕುಸಿದು ಬಿದ್ದು ಹಾನಿಯಾಗಿದೆ.
ಅಂಬ್ಲಮೊಗರು ಗ್ರಾಮದ ಆನಂದ ಪೂಜಾರಿ ಎಂಬವರ ಮನೆಯೂ ಗಾಳಿ ಮಳೆಗೆ ಜಖಂಗೊಂಡಿದೆ. ಬೆಳ್ಮಗ್ರಾಮದ ಅಬೂಬಕ್ಕರ್ ಎಂಬವರ ಮನೆಗೆ ಮರ ಉರುಳಿ ಬಿದ್ದ ಪರಿಣಾಮ ಮನೆಗೆ ಹಾನಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬೆಳ್ಮ ಗ್ರಾಮದ ಕಲ್ಲುಗುಡ್ಡೆ ಎಂಬ್ಲಲಿನ ಮುಸ್ತಫಾ ಎಂಬವರ ಮನೆಗೆ ಗುಡ್ಡ ಕುಸಿದು ಹಾನಿಯಾಗಿರುವ ಘಟನೆ ನಡೆದಿದೆ. ಪಜೀರುಗುತ್ತು ಎಂಬಲ್ಲಿ ರಮೇಶ್ ಎಂಬವರ ಮನೆಯ ಬಳಿ ಗುಡ್ಡ ಕುಸಿದುಬಿದ್ದಿದೆ.
ನಮಗೆ 136 ಸೀಟು ಬಂದಿದ್ದಕ್ಕೆ ಶೋಭಾಗೆ ಹೊಟ್ಟೆ ಉರಿ: ಸಚಿವ ಪರಮೇಶ್ವರ್
ಶಾರ್ಟ್ ಸಕ್ರ್ಯೂಟ್: ಇರಾ ಗ್ರಾಮದ ಪಂಜಾಜೆ ಎಂಬಲ್ಲಿರುವ ಬಯೋ-ಫುಯಲ್ಟೆಕ್ ಕಂಪನಿಯಲ್ಲಿ ಶಾರ್ಟ್ ಸಕ್ರ್ಯೂಟ್‌ನಿಂದ ವಿದ್ಯುತ್ ಅವಘಡ ಸಂಭವಿಸಿದ್ದು, ತೀವ್ರ ಮಳೆ ಇದ್ದ ಕಾರಣ ಹೆಚ್ಚಿನ ಅನಾಹುತ ತಪ್ಪಿದ್ದು, ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.