ರಾಜ್ಯದ ವಿವಿಧ ಎಸ್ಕಾಂಗಳ ವ್ಯಾಪ್ತಿಯಲ್ಲಿ ವಿದ್ಯುತ್‌ ಲಭ್ಯತೆ, ವಿದ್ಯುತ್‌ ಖರೀದಿ ವೆಚ್ಚ, ಸರಬರಾಜು ವೆಚ್ಚ ಹಾಗೂ ಆದಾಯದ ಕುರಿತು 2022-23ರಿಂದ 2025ರ ಆರ್ಥಿಕ ವರ್ಷದವರೆಗಿನ ಭವಿಷ್ಯದ ವಾರ್ಷಿಕ ಆದಾಯ ಅಗತ್ಯತೆ (ಎಆರ್‌ಆರ್‌) ವರದಿಯನ್ನು ಇಂಧನ ಇಲಾಖೆ ಸಿದ್ಧಪಡಿಸಿದೆ. 

ಶ್ರೀಕಾಂತ್‌ ಎನ್‌. ಗೌಡಸಂದ್ರ

ಬೆಂಗಳೂರು (ಫೆ.14): ರಾಜ್ಯದ ವಿವಿಧ ಎಸ್ಕಾಂಗಳ ವ್ಯಾಪ್ತಿಯಲ್ಲಿ ವಿದ್ಯುತ್‌ ಲಭ್ಯತೆ, ವಿದ್ಯುತ್‌ ಖರೀದಿ ವೆಚ್ಚ, ಸರಬರಾಜು ವೆಚ್ಚ ಹಾಗೂ ಆದಾಯದ ಕುರಿತು 2022-23ರಿಂದ 2025ರ ಆರ್ಥಿಕ ವರ್ಷದವರೆಗಿನ ಭವಿಷ್ಯದ ವಾರ್ಷಿಕ ಆದಾಯ ಅಗತ್ಯತೆ (ಎಆರ್‌ಆರ್‌) ವರದಿಯನ್ನು ಇಂಧನ ಇಲಾಖೆ ಸಿದ್ಧಪಡಿಸಿದೆ. ಅದರಲ್ಲಿ 2022-23ನೇ ಸಾಲಿನಲ್ಲಿ 4,609 ಕೋಟಿ ರು. ಆದಾಯ ಕೊರತೆ ಉಂಟಾಗಲಿದೆ ಎಂದು ತಿಳಿಸಿದೆ.

ಹೀಗಾಗಿ 2022-23ನೇ ಸಾಲಿಗೆ ಅನ್ವಯಿಸುವಂತೆ ಪ್ರತಿ ಯುನಿಟ್‌ಗೆ 1.58 ರು.ನಂತೆ ವಿದ್ಯುತ್‌ ದರ ಹೆಚ್ಚಳ ಮಾಡಬೇಕು. ಜತೆಗೆ 2023-24, 2024-25ರ ಆರ್ಥಿಕ ವರ್ಷದಲ್ಲೂ ಆಗ ಉಂಟಾಗುವ ಆದಾಯ ಕೊರತೆ ಆಧಾರದ ಮೇಲೆ ವಿದ್ಯುತ್‌ ದರ ಪರಿಷ್ಕರಣೆ ಮಾಡಬೇಕಾಗುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದ್ದು, 2022-23ರ ಸಾಲಿಗೆ ದರ ಹೆಚ್ಚಳ ಪ್ರಸ್ತಾಪದೊಂದಿಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೂ (ಕೆಇಆರ್‌ಸಿ) ಎಆರ್‌ಆರ್‌ ವರದಿಯನ್ನು ಸಲ್ಲಿಸಲಾಗಿದೆ.

ಎಆರ್‌ಆರ್‌ ವರದಿ ಪ್ರಕಾರ 2022-23ರ ಆರ್ಥಿಕ ವರ್ಷದಲ್ಲಿ ರಾಜ್ಯದ ವಿವಿಧ ಎಸ್ಕಾಂಗಳ ವ್ಯಾಪ್ತಿಯಲ್ಲಿ 71,185.49 ದಶಲಕ್ಷ ಯುನಿಟ್‌ ವಿದ್ಯುತ್‌ ಅಗತ್ಯವಿದೆ. ಇದರ ಖರೀದಿಗಾಗಿ ಪ್ರತಿ ಯುನಿಟ್‌ಗೆ ಸರಾಸರಿ 4.78 ರು.ಗಳಂತೆ 34,029 ಕೋಟಿ ರು. ವೆಚ್ಚವಾಗಲಿದೆ. ಜತೆಗೆ ವಿದ್ಯುತ್‌ ಸರಬರಾಜಿಗಾಗಿ 2,735 ಕೋಟಿ ರು. ವೆಚ್ಚವಾಗಲಿದೆ. ಹೀಗಿದ್ದರೂ ವಿದ್ಯುತ್‌ ಶುಲ್ಕ ಸಂಗ್ರಹದಿಂದ ಬರುವ ಆದಾಯದ ಹೊರತಾಗಿಯೂ 4,609 ಕೋಟಿ ರು. ಆದಾಯ ಕೊರತೆ ಉಂಟಾಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Power Tariff Hike: ವಿದ್ಯುತ್‌ ದರ ಏರಿಕೆ ಅನಿವಾರ್ಯ: ಸಚಿವ ಸುನಿಲ್‌ ಕುಮಾರ್‌

ವಿವಿಧ ಎಸ್ಕಾಂಗಳ ವಿದ್ಯುತ್‌ ಬೇಡಿಕೆ, ಖರೀದಿ ವೆಚ್ಚ: ಈ ಪೈಕಿ ಬೆಸ್ಕಾಂ ವ್ಯಾಪ್ತಿಯಲ್ಲಿ 33,688 ದಶಲಕ್ಷ ಯುನಿಟ್‌ ಬಳಕೆಯಾಗಲಿದ್ದು, ಇದರ ಖರೀದಿಗೆ ಪ್ರತಿ ಯುನಿಟ್‌ಗೆ ಸರಾಸರಿ 5.13 ರು.ಗಳಂತೆ 17,279.82 ಕೋಟಿ ರು. ಖರೀದಿ ವೆಚ್ಚ ಆಗಲಿದೆ. ಜೆಸ್ಕಾಂ (ಕಲಬುರಗಿ) ವ್ಯಾಪ್ತಿಯಲ್ಲಿ 8,899 ದಶಲಕ್ಷ ಯುನಿಟ್‌ ವಿದ್ಯುತ್‌ ಅಗತ್ಯವಿದ್ದು, ಇದರ ಖರೀದಿಗೆ ಪ್ರತಿ ಯುನಿಟ್‌ಗೆ 4.49 ರು. ಸರಾಸರಿಯಂತೆ 3,993 ಕೋಟಿ ರು. ಖರೀದಿ ವೆಚ್ಚ ತಗುಲಲಿದೆ. ಹೆಸ್ಕಾಂ (ಹುಕ್ಕೇರಿ ಸೇರಿ) ವ್ಯಾಪ್ತಿಯಲ್ಲಿ 14,718 ದಶಲಕ್ಷ ಯುನಿಟ್‌ ಅಗತ್ಯವಿದ್ದು, ಸರಾಸರಿ ಯುನಿಟ್‌ಗೆ 4.61 ರು.ಗಳಂತೆ 6,791 ಕೋಟಿ ರು. ಖರೀದಿ ವೆಚ್ಚವಾಗಲಿದೆ. 

ಮೆಸ್ಕಾಂ ವ್ಯಾಪ್ತಿಯಲ್ಲಿ 5,977 ದಶಲಕ್ಷ ಯುನಿಟ್‌ ವಿದ್ಯುತ್‌ ಖರೀದಿಗೆ 2,504 ಕೋಟಿ ರು. ವೆಚ್ಚವಾಗಲಿದೆ. ಸೆಸ್ಕ್‌ (ಚಾಮುಂಡೇಶ್ವರಿ- ಮೈಸೂರು) 7,902 ದಶಲಕ್ಷ ಯುನಿಟ್‌ ವಿದ್ಯುತ್‌ ಅಗತ್ಯವಿದ್ದು, 3,459 ಕೋಟಿ ರು. ವಿದ್ಯುತ್‌ ಖರೀದಿಗೆ ವ್ಯಯಿಸಬೇಕಾಗಿದೆ. ಹೀಗಾಗಿ ಆದಾಯ ಕೊರತೆ ಉಂಟಾಗಲಿದೆ ಎಂದು ಎಆರ್‌ಆರ್‌ಆರ್‌ ವರದಿಯಲ್ಲಿ ತಿಳಿಸಿದ್ದು, ಇಂಧನ ಇಲಾಖೆಯು ವರದಿಯನ್ನು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೂ ಸಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ.

3 ವರ್ಷಗಳ ವಿದ್ಯುತ್‌ ಬೇಡಿಕೆ ವಿವರ: 2022-23ನೇ ಸಾಲಿನಲ್ಲಿ 71,185.49 ದಶಲಕ್ಷ ಯುನಿಟ್‌, 2023-24ರ ವೇಳೆಗೆ 73,479.73 ದಶಲಕ್ಷ ಯುನಿಟ್‌, 2024-25ರ ವೇಳೆಗೆ 75,893.72 ದಶಲಕ್ಷ ಯುನಿಟ್‌ ವಿದ್ಯುತ್‌ ಬೇಡಿಕೆ ಉಂಟಾಗಲಿದೆ. ಪ್ರಸ್ತುತ ರಾಜ್ಯದ ಜಲ ವಿದ್ಯುತ್‌, ಥರ್ಮಲ್‌ ವಿದ್ಯುತ್‌, ಸೋಲಾರ್‌ ವಿದ್ಯುತ್‌, ಕೇಂದ್ರ ಗ್ರಿಡ್‌ ಸೇರಿ ಎಲ್ಲಾ ಮೂಲಗಳಿಂದ 1,04,597 ದಶಲಕ್ಷ ಯುನಿಟ್‌ ವಿದ್ಯುತ್‌ ಪಡೆಯುವ ಸಾಮರ್ಥ್ಯವಿದೆ. ಈ ಪೈಕಿ ಪ್ರಸ್ತುತ 54,662.27 ದಶಲಕ್ಷ ಯುನಿಟ್‌ ಮಾತ್ರ ಪ್ರಸ್ತುತ ಲಭ್ಯವಾಗುತ್ತಿದೆ. ಈ ವಿದ್ಯುತ್‌ನಿಂದ ನಿರ್ವಹಣೆಗೆ ತೊಂದರೆ ಇಲ್ಲದಿದ್ದರೂ ವಿದ್ಯುತ್‌ ಅಭಾವ ಉಂಟಾಗುವ ಸಮಯದಲ್ಲಿ ಮಾತ್ರ ಸಮಸ್ಯೆ ಎದುರಾಗಲಿದೆ ಎಂದು ಇಂಧನ ಇಲಾಖೆ ಅಧಿಕಾರಿಗಳು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

Electricity Bill: ವಿದ್ಯುತ್‌ ಬಿಲ್‌ ಮನ್ನಾ ವಿಚಾರ : ಸಚಿವ ಸುನೀಲ್‌ ಸ್ಪಷ್ಟನೆ

ವಿದ್ಯುತ್‌ ದರಗಳ ಪರಿಷ್ಕರಣೆ ಅನಿವಾರ್ಯ: ಇನ್ನು ಮುಂದಿನ ವರ್ಷಗಳಲ್ಲಿ ವಿದ್ಯುತ್‌ ಸರಬರಾಜು ವೆಚ್ಚವೂ ಹೆಚ್ಚಾಗಲಿದೆ. 2022-23ರಲ್ಲಿ ವಿದ್ಯುತ್‌ ಸರಬರಾಜಿಗಾಗಿ 2,735 ಕೋಟಿ ರು. ವೆಚ್ಚವಾದರೆ, 2024ರಲ್ಲಿ 3,313 ಕೋಟಿ ರು., 2025ರಲ್ಲಿ 3,919 ಕೋಟಿ ರು. ವೆಚ್ಚವಾಗಲಿದೆ. ಹೀಗಾಗಿ ಇದರ ಅನ್ವಯ ವಿದ್ಯುತ್‌ ದರಗಳ ಪರಿಷ್ಕರಣೆ ಅಗತ್ಯವಿದೆ ಎಂದು ಎಆರ್‌ಆರ್‌ ವರದಿಯಲ್ಲಿ ತಿಳಿಸಲಾಗಿದೆ.