ಇದು ನಂಬಲು ಕಷ್ಟಸಾಧ್ಯವಾದರೂ ಸರ್ಕಾರವೇ ಕಳೆದ ಬೆಳಗಾವಿ ಅಧಿವೇಶನದಲ್ಲಿ ನೀಡಿರುವ ಅಧಿಕೃತ ಉತ್ತರ. ನನ್ನೊಬ್ಬನ ವಿರುದ್ಧವೇ 60ಕ್ಕೂ ಹೆಚ್ಚು ಪ್ರಕರಣಗಳಿವೆ. ಇನ್ನು ಕರವೇಯ ಇತರೆ ಮುಖಂಡರು, ಕಾರ್ಯಕರ್ತರ ವಿರುದ್ಧ 1300ಕ್ಕೂ ಹೆಚ್ಚು ಪ್ರಕರಣಗಳಿವೆ. ಹೀಗಿರುವಾಗ ಸರ್ಕಾರದ ಉತ್ತರವನ್ನು ಒಪ್ಪಲು ಹೇಗೆ ಸಾಧ್ಯ?: ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ

ಲಿಂಗರಾಜು ಕೋರಾ

ಬೆಂಗಳೂರು(ಡಿ.31): ರಾಜ್ಯದ ಕನ್ನಡಪರ ಸಂಘಟನೆಗಳ ಮುಖಂಡರು, ರೈತಪರ ಸಂಘಟನೆಗಳ ನಾಯಕರು ಹೇಳುತ್ತಿರುವ ಪ್ರಕಾರ ತಮ್ಮ ಹಾಗೂ ತಮ್ಮ ಸಂಘಟನೆಗಳ ಕಾರ್ಯಕರ್ತರ ಮೇಲಿರುವ ಪ್ರಕರಣಗಳ ಸಂಖ್ಯೆ 3000ಕ್ಕೂ ಹೆಚ್ಚು. ಆದರೆ, ಸರ್ಕಾರದ ಲೆಕ್ಕದಲ್ಲಿ ಬರೀ 46 ಮಾತ್ರ.

ಹೌದು ಇದು ನಂಬಲು ಕಷ್ಟಸಾಧ್ಯವಾದರೂ ಸರ್ಕಾರವೇ ಕಳೆದ ಬೆಳಗಾವಿ ಅಧಿವೇಶನದಲ್ಲಿ ನೀಡಿರುವ ಅಧಿಕೃತ ಉತ್ತರ. ನನ್ನೊಬ್ಬನ ವಿರುದ್ಧವೇ 60ಕ್ಕೂ ಹೆಚ್ಚು ಪ್ರಕರಣಗಳಿವೆ. ಇನ್ನು ಕರವೇಯ ಇತರೆ ಮುಖಂಡರು, ಕಾರ್ಯಕರ್ತರ ವಿರುದ್ಧ 1300ಕ್ಕೂ ಹೆಚ್ಚು ಪ್ರಕರಣಗಳಿವೆ. ಹೀಗಿರುವಾಗ ಸರ್ಕಾರದ ಉತ್ತರವನ್ನು ಒಪ್ಪಲು ಹೇಗೆ ಸಾಧ್ಯ? ಎನ್ನುತ್ತಾರೆ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ.

ಕನ್ನಡ ಕಾರ್ಯಕರ್ತರ ಬಂಧನದಿಂದ ದುಃಖ: ಮಾಜಿ ಸಿಎಂ ಬೊಮ್ಮಾಯಿ

ಅದೇ ರೀತಿ ಕರವೇ(ಪ್ರವೀಣ್‌ ಶೆಟ್ಟಿ ಬಣ) ಅಧ್ಯಕ್ಷ ಪ್ರವೀಣ್‌ ಶೆಟ್ಟಿ, ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್‌ ನಾಗರಾಜ, ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌ ಅವರು ಕೂಡ ನಮ್ಮ ಒಬ್ಬೊಬ್ಬರ ಮೇಲೇ 15ರಿಂದ 20 ಪ್ರಕರಣಗಳಿವೆ. ಹತ್ತಾರು ವರ್ಷಗಳಿಂದ ಕೋರ್ಟುಗಳಿಗೆ ಅಲೆಯುತ್ತಿದ್ದೇವೆ. ಇನ್ನು ನಮ್ಮ ಸಂಘಟನೆಯ ಇತರ ಕಾರ್ಯಕರ್ತರ ಮೇಲಿನ ಕೇಸುಗಳನ್ನು ಲೆಕ್ಕ ಹಾಕಿಸದರೆ ನೂರಾರು ಸಂಖ್ಯೆಯಲ್ಲಿವೆ. ಹಾಗಾಗಿ ಸರ್ಕಾರದ ಉತ್ತರ ಒಪ್ಪಲು ಸಾಧ್ಯವಿಲ್ಲ ಎನ್ನುತ್ತಾರೆ.

ಸರ್ಕಾರ ಉದ್ದೇಶಪೂರ್ವಕವಾಗಿ ಹೋರಾಟಗಾರರ ಮೇಲಿನ ಕೇಸುಗಳನ್ನು ಮುಚ್ಚಿಡುತ್ತಿದೆ. ಇಲ್ಲವೇ ಅಧಿಕಾರಿಗಳು ಸರಿಯಾದ ಉತ್ತರ ನೀಡದೆ ಸರ್ಕಾರವನ್ನು ದಾರಿತಪ್ಪಿಸಿದ್ದಾರೆ. ತಪ್ಪಿದರೆ ಸರ್ಕಾರ ಮೇಕೆದಾಟು ಪಾದಯಾತ್ರೆ ಸೇರಿದಂತೆ ಕೆಲ ಹೋರಾಟಗಳ ಸಂಬಂಧದ ತಮ್ಮ ಪಕ್ಷದ ಕೆಲ ಹಾಲಿ ಸಚಿವರೂ ಸೇರಿದಂತೆ ಶಾಸಕರು, ಪ್ರಮುಖ ಮುಖಂಡರು ಸೇರಿದಂತೆ ಹತ್ತಾರು ಜನರ ಮೇಲೆ ದಾಖಲಿಸಿದ್ದ ಪ್ರಕರಣಗಳನ್ನು ಮಾತ್ರ ವಾಪಸ್‌ ಪಡೆದಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲೂ 61 ಶಾಸಕರು, ಪಕ್ಷದ ನಾಯಕರ ಮೇಲಿನ ಪ್ರಕರಣಗಳನ್ನು ವಾಪಸ್‌ ಪಡೆಯಲಾಯಿತು. ಬಹುಶಃ ರಾಜಕೀಯ ಪಕ್ಷಗಳ ನಾಯಕರ ಮೇಲೆ ಉಳಿದಿರುವ ಕೇಸುಗಳನ್ನು ಮಾತ್ರ ಉತ್ತರದಲ್ಲಿ ನೀಡಿರಬೇಕು ಎಂದು ಕನ್ನಡಪರ, ರೈತಪರ ಹೋರಾಟಗಾರರು ಅನುಮಾನ ವ್ಯಕ್ತಪಡಿಸಿದ್ದಾರೆ.

ಮಾಹಿತಿ ಮುಚ್ಚಿಡುವ ಅಧಿಕಾರಿಗಳು:

ಈ ಮಧ್ಯೆ, ‘ಕನ್ನಡಪ್ರಭ’ ಕೂಡ ವಿಧಾನಸೌಧದಲ್ಲಿರುವ ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಕಚೇರಿಯಿಂದ ಹಿಡಿದು ಉಪ ಕಾರ್ಯದರ್ಶಿ, ಎಂ.ಎಸ್‌.ಬಿಲ್ಡಿಂಗ್‌ನಲ್ಲಿರುವ ಇಲಾಖೆಯ ಅಧೀನ ಕಾರ್ಯದರ್ಶಿಗಳ ಹಂತದವರೆಗೂ ಈ ಮಾಹಿತಿಯನ್ನು ಕೇಳಿದರೂ ಎಲ್ಲೂ ಉತ್ತರ ದೊರೆಯಲಿಲ್ಲ. ಈ ಮಾಹಿತಿ ನಮ್ಮಲ್ಲಿ ಇಲ್ಲ ಉಪ ಕಾರ್ಯದರ್ಶಿ ಕಚೇರಿಯಲ್ಲಿ ಕೇಳಿ ಎಂದು ಎಸಿಎಸ್‌ ಕಚೇರಿಯವರು, ಉಪ ಕಾರ್ಯದರ್ಶಿ ಕಚೇರಿಯಲ್ಲಿ ಕೇಳಿದರೆ ಅಧೀನ ಕಾರ್ಯದರ್ಶಿ ಕಚೇರಿಯಲ್ಲಿ ಕೇಳಿ ಎಂದು ಸುತ್ತಾರಿಸಿದ್ದು ಬಿಟ್ಟರೆ ಮಾಹಿತಿ ನೀಡಲೇ ಇಲ್ಲ. ಕೊನೆಗೆ ಅಧೀನ ಕಾರ್ಯದರ್ಶಿ ಅವರ ಕಚೇರಿಯಲ್ಲಿ ನಮ್ಮ ಬಳಿ ಈ ಬಗ್ಗೆ ಮಾಹಿತಿ ಇಲ್ಲ. ಆರ್‌ಟಿಐನಲ್ಲಿ ಅರ್ಜಿ ಸಲ್ಲಿಸಿದರೆ ರಾಜ್ಯದ ಎಲ್ಲ ಜಿಲ್ಲೆಗಳಿಂದ ಮಾಹಿತಿ ಸಂಗ್ರಹಿಸಿ ನೀಡುತ್ತೇವೆ. ಇದಕ್ಕೆ ಸಮಯ ಬೇಕಾಗುತ್ತದೆ ಎಂದರು. ಹಾಗಾಗಿ ಇದೇ ಗೃಹ ಇಲಾಖೆ ಸದನದಲ್ಲಿ ನೀಡಿದ 46 ಪ್ರಕರಣಗಳ ಉತ್ತರ ಎಲ್ಲಿಂದ ಬಂತು ಎನ್ನುವುದು ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ.

ಗೃಹ ಸಚಿ‍ವರೇ ಸದನಕ್ಕೆ ನೀಡಿದ ಮಾಹಿತಿ:

ಬೆಳಗಾವಿ ಅಧಿವೇಶನದ ವೇಳೆ ವಿಧಾನಪರಿಷತ್‌ನ ಆಡಳಿತಪಕ್ಷ ಕಾಂಗ್ರೆಸ್‌ ಸದಸ್ಯರೇ ಆದ ಕನ್ನಡ ಚಳವಳಿ ಹಿನ್ನೆಲೆಯುಳ್ಳ ಎಂ.ನಾಗರಾಜು (ನಾಗರಾಜ್‌ ಯಾದವ್) ಅವರು ಈ ಬಗ್ಗೆ ಸರ್ಕಾರಕ್ಕೆ ಪ್ರಶ್ನೆ ಕೇಳಿದ್ದಾರೆ. ರಾಜ್ಯದಲ್ಲಿ ರೈತರ ಸಮಸ್ಯೆಗಳಿಗೆ ಹೋರಾಟ ನಡೆಸಿರುವ ರೈತರು ಮತ್ತು ಕನ್ನಡ ಭಾಷೆ, ನೆಲ, ಜಲ ರಕ್ಷಣೆಗಾಗಿ ಹೋರಾಟ ನಡೆಸಿರುವ ಕನ್ನಡ ಪರ ಚಳವಳಿ ಹೋರಾಟಗಾರರ ವಿರುದ್ಧ ಬಾಕಿ ಇರುವ ಪ್ರಕರಣಗಳೆಷ್ಟು ಎಂದು ಕೇಳಿರುವ ಪ್ರಶ್ನೆಗೆ, ಸ್ವತಃ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರೇ ಉತ್ತರ ನೀಡಿ ಒಟ್ಟು 46 ಪ್ರಕರಣಗಳು ದಾಖಲಾಗಿರುತ್ತವೆ ಎಂದು ತಿಳಿಸಿದ್ದಾರೆ.

ಅಲ್ಲದೆ, ಇದೇ ವೇಳೆ ನಾಗರಾಜು ಅವರು ಈ ರೈತರು, ಕನ್ನಡಪರ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಹಿಂಪಡೆಯಲು ಸರ್ಕಾರ ಚಿಂತಿಸಿದೆಯೇ ಎಂಬ ಪ್ರಶ್ನೆಯನ್ನೂ ಹೇಳಿದ್ದು, ಇದಕ್ಕೆ ಸಚಿವರು ಈ ಹೋರಾಟಗಾರರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯುವ ಕುರಿತು ಪ್ರಸ್ತಾವನೆಗಳು ಸ್ವೀಕೃತವಾದಲ್ಲಿ ನಿಯಮಾನುಸಾರ ಪರಿಶೀಲಿಸಲಾಗುವುದು ಎಂದು ಉತ್ತರ ನೀಡಿದ್ದಾರೆ.

ಈ ಸರ್ಕಾರದ ಈ ಉತ್ತರ ಇದುವರೆಗೆ ಯಾರೂ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ವಾಪಸ್‌ ಪಡೆಯಲು ಮನವಿ, ಪ್ರಸ್ತಾವನೆಯನ್ನೇ ನೀಡಿಲ್ಲ ಎನ್ನುವಂತಿದೆ ಎಂದು ಕನ್ನಡ ಸಂಘಟನೆಗಳ ಮುಖಂಡರು ಆರೋಪಿಸುತ್ತಾರೆ. ಕರ್ನಾಟಕ ರಕ್ಷಣಾ ವೇದಿಕೆ, ರಾಜ್ಯ ರೈತ ಸಂಘ ಸೇರಿದಂತೆ ಪ್ರತಿಯೊಂದು ಸಂಘಟನೆಗಳ ಮುಖಂಡರು ಕೇಸ್ ವಾಪಸ್‌ ಪಡೆಯುವಂತೆ ಒಂದಲ್ಲ ಹತ್ತು ಬಾರಿ ನಾವು ಈ ಬಗ್ಗೆ ಮನವಿ ಕೊಟ್ಟಿದ್ದೇವೆ. ಆದರೆ, ಸರ್ಕಾರಕ್ಕೆ ರೈತರು, ಕನ್ನಡಪರ ಸಂಘಟನೆಗಳು ಹೋರಾಟ ನಡೆಸುವುದು ಬೇಕಿಲ್ಲ. ಹಾಗಾಗಿ ಪ್ರಕರಣಗಳನ್ನು ಮುಚ್ಚಿಟ್ಟು, ಪ್ರಸ್ತಾವನೆಯೇ ಇಲ್ಲ ಎನ್ನುವಂತೆ ಉತ್ತರ ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಕನ್ನಡ ಸಂಘಟನೆಗಳನ್ನು ಒಗ್ಗೂಡಿಸಿದ ಫಲಕ ಚಳವಳಿ!

ರೈತರು, ಕನ್ನಡಪರ ಹೋರಾಟಗಾರರ ವಿರುದ್ಧ ಬಾಕಿ ಇರುವ ಪ್ರಕರಣಗಳ ಬಗ್ಗೆ ನಾನು ಕೇಳಿದ್ದ ಪ್ರಶ್ನೆಗೆ ಸರ್ಕಾರ 46 ಎಂದು ಉತ್ತರಿಸಿರುವುದರಿಂದ ಇಷ್ಟೇನಾ ಎಂಬ ಯಕ್ಷ ಪ್ರಶ್ನೆ ಸಾಮಾನ್ಯವಾಗಿ ಉದ್ಭವಿಸುತ್ತದೆ. ಹೋರಾಟಗಾರರು ತಮ್ಮ ವಿರುದ್ಧ ಸಾವಿರಾರು ಪ್ರಕರಣಗಳಿವೆ ಎಂದು ಹೇಳುತ್ತಿರುವುದುನ್ನು ಗಮನಿಸಿದ್ದೇನೆ. ಹಾಗಾಗಿ ಸರ್ಕಾರ ತನ್ನ ಉತ್ತರವನ್ನು ಮರುಪರಿಶೀಲಿಸಬೇಕು ಮತ್ತು ಈ ಹೋರಾಟಗಾರರ ಮೇಲಿನ ಎಲ್ಲ ಪ್ರಕರಣಗಳನ್ನು ವಾಪಸ್‌ ಪಡೆಯಬೇಕು ಎಂದು ಒತ್ತಾಯಿಸುತ್ತೇನೆ ಎಂದು ವಿಧಾನ ಪರಿಷತ್‌ನ ಕಾಂಗ್ರೆಸ್‌ ಸದಸ್ಯ ಎಂ.ನಾಗರಾಜು ಹೇಳಿದ್ದಾರೆ. 

ನಮ್ಮ ಕರ್ನಾಟಕ ಸಾಹಿತ್ಯ ಪರಿಷತ್‌ನ ಗೌರವ ಕಾರ್ಯದರ್ಶಿ ರಾಮಲಿಂಗಶೆಟ್ಟಿ ಅವರ ವಿರುದ್ಧವೇ ಕನ್ನಡಪರ ಹೋರಾಟಗಳಿಗೆ ಸಂಬಂಧಿಸಿದಂತೆ 23 ಪ್ರಕರಣಗಳಿವೆ. ಹೀಗಿರುವಾಗ ಸರ್ಕಾರ ಇಡೀ ರಾಜ್ಯದಲ್ಲಿ ಕನ್ನಡ, ರೈತಪರ ಹೋರಾಟಗಾರರ ಮೇಲೆ 46 ಪ್ರಕರಣಗಳಿವೆ ಎನ್ನುವುದು ಸರಿ ಇಲ್ಲ. ಈ ಹೋರಾಟಗಾರರು ಸ್ವಹಿತಾಸಕ್ತಿ, ವಂಚನೆ, ಕಳ್ಳತನ, ದರೋಡೆ ಮಾಡುವವರಲ್ಲ. ಅವರ ಮೇಲಿನ ಪ್ರಕರಣಗಳನ್ನು ಬೇಷರತ್ತಾಗಿ ಹಿಂಪಡೆಯಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಸಾಹಿತ್ಯ ಪರಿಷತ್ತು ಡಾ.ಮಹೇಶ್‌ ಜೋಶಿ ತಿಳಿಸಿದ್ದಾರೆ.