ಸೇನೆ ಮತ್ತು ಅರೆಸೇನಾ ಪಡೆಗಳ ನಡುವಿನ ಸಂಘರ್ಷಕ್ಕೆ ತುತ್ತಾಗಿರುವ ಸೂಡಾನ್‌ನಲ್ಲಿ ಸಿಲುಕಿದ್ದ 439 ಕನ್ನಡಿಗರು ಶುಕ್ರವಾರ ಮುಕ್ತಾಯಗೊಂಡ ‘ಆಪರೇಷನ್ ಕಾವೇರಿ’ ಕಾರ್ಯಾಚರಣೆ ಮೂಲಕ ತಾಯ್ನಾಡಿಗೆ ಸುರಕ್ಷಿತವಾಗಿ ಮರಳಿದ್ದಾರೆ.
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು (ಮೇ.07): ಸೇನೆ ಮತ್ತು ಅರೆಸೇನಾ ಪಡೆಗಳ ನಡುವಿನ ಸಂಘರ್ಷಕ್ಕೆ ತುತ್ತಾಗಿರುವ ಸೂಡಾನ್‌ನಲ್ಲಿ ಸಿಲುಕಿದ್ದ 439 ಕನ್ನಡಿಗರು ಶುಕ್ರವಾರ ಮುಕ್ತಾಯಗೊಂಡ ‘ಆಪರೇಷನ್ ಕಾವೇರಿ’ ಕಾರ್ಯಾಚರಣೆ ಮೂಲಕ ತಾಯ್ನಾಡಿಗೆ ಸುರಕ್ಷಿತವಾಗಿ ಮರಳಿದ್ದಾರೆ. ಕಳೆದ ಒಂದು ತಿಂಗಳಿನಿಂದ ಅಧಿಕಾರಕ್ಕಾಗಿ ಅರೆ ಸೇನಾ ಪಡೆ ಹಾಗೂ ಸೂಡಾನ್ ಸಶಸ್ತ್ರ ಪಡೆಗಳ ನಡುವೆ ನಡೆಯುತ್ತಿರುವ ಸಂಘರ್ಷದಲ್ಲಿ ಸಿಲುಕಿದ್ದ ಭಾರತೀಯನ್ನು ಸುರಕ್ಷಿತವಾಗಿ ವಾಪಸ್ ಕರೆ ತರಲು ಕೇಂದ್ರ ಸರ್ಕಾರ ಸುಮಾರು 10 ದಿನಗಳ ಕಾಲ ನಡೆಸಲಾದ ಕಾರ್ಯಾಚರಣೆಯಲ್ಲಿ ರಾಜ್ಯದ 439 ಮಂದಿ ಸೇರಿದಂತೆ ಒಟ್ಟು 3,800 ಮಂದಿ ಭಾರತೀಯನ್ನು ರಕ್ಷಿಸಿ ಕರೆತರಲಾಗಿದೆ. ರಾಜಧಾನಿ ಖಾರ್ಟೋಮ್ ಸೇರಿದಂತೆ ಸುತ್ತಮುತ್ತಲಿನ ನಗರದಲ್ಲಿ ನೆಲೆಸಿದ್ದವರನ್ನು ಬಸ್ ಮೂಲಕ ಹಾಗೂ ಹಡಗಿನ ಮೂಲಕ ಸೌದಿಯ ಜೆಡ್ಡಾಕ್ಕೆ ಕರೆತಂದು, ಅಲ್ಲಿಂದ ವಿಶೇಷ ವಿಮಾನದ ಮೂಲಕ ಭಾರತಕ್ಕೆ ಕರೆ ತರಲಾಗಿದೆ.
14 ಬ್ಯಾಚ್‌ನಲ್ಲಿ ಬಂದ ಕನ್ನಡಿಗರು: ಸೂಡಾನ್‌ನಲ್ಲಿ ಸಿಲುಕಿದ ಕನ್ನಡಿಗರು ಏ.27 ರಿಂದ ಮೇ 5 ವರೆಗೆ ಒಟ್ಟು 14 ಬ್ಯಾಚ್‌ನಲ್ಲಿ ಬಂದಿಳಿದಿದ್ದಾರೆ. ಈ ಪೈಕಿ ಐದು ಬ್ಯಾಚ್‌ಗಳು ಮುಂಬೈ, ಎರಡು ತಂಡ ದೆಹಲಿ, ಅಹಮದಾಬಾದ್, ಕೊಚ್ಚಿಗೆ ತಲಾ ಒಂದು ಬ್ಯಾಚ್ ಆಗಮಿಸಿದ್ದಾರೆ. ಬೆಂಗಳೂರಿಗೆ ಒಟ್ಟು ಐದು ಬ್ಯಾಚ್‌ಗಳಲ್ಲಿ ಕನ್ನಡಿಗರು ಬಂದಿದ್ದಾರೆ. ಕಾರ್ಯಾಚರಣೆಯ ಕೊನೆಯ ದಿನವಾದ ಶುಕ್ರವಾರ ಒಟ್ಟು ಮೂರು ಬ್ಯಾಚ್‌ನಲ್ಲಿ ಒಟ್ಟು 97 ಮಂದಿ ಕನ್ನಡಿಗರು ಆಗಮಿಸಿದ್ದಾರೆ.
ಕಾಂಗ್ರೆಸ್ ಸಮಾವೇಶದಲ್ಲಿ ‘ಜೈ ಬಜರಂಗ ಬಲಿ’ ಘೋಷಣೆ ಕೂಗಿದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
15 ಜಿಲ್ಲೆಯ 439 ಮಂದಿ: ರಾಜ್ಯದ 15 ಜಿಲ್ಲೆಯವರು ಸೂಡಾನ್‌ದಿಂದ ಬಂದಿದ್ದು, ಈ ಪೈಕಿ ಶಿವಮೊಗ್ಗ ಜಿಲ್ಲೆಯವರು (194) ಹೆಚ್ಚಾಗಿದ್ದಾರೆ. ಉಳಿದಂತೆ ಮೈಸೂರು 116, ದಾವಣಗೆರೆ 32, ಬೆಂಗಳೂರು 31, ಬೆಳಗಾವಿ 25, ಕಲಬುರಗಿ ಹಾಗೂ ದಕ್ಷಿಣ ಕನ್ನಡದ ತಲಾ ಏಳು, ಉತ್ತರ ಕನ್ನಡ ಹಾಗೂ ಕೊಡಗು ತಲಾ ಆರು, ಚಿಕ್ಕಮಗಳೂರು ನಾಲ್ವರು, ರಾಮನಗರ ಹಾಗೂ ಧಾರವಾಡ ತಲಾ ಮೂವರು, ಉಡುಪಿ ಹಾಗೂ ತುಮಕೂರಿನ ತಲಾ ಇಬ್ಬರು ಹಾಗೂ ಹಾಸನ ಜಿಲ್ಲೆಯ ಒಬ್ಬರು ವಾಪಸ್ ಆಗಿದ್ದಾರೆ.
ರಾಜ್ಯದಿಂದ ಹಲವು ಕ್ರಮ: ಸೂಡಾನ್‌ನಿಂದ ಬಂದ ಕನ್ನಡಿಗರು ಅವರ ಸ್ವಂತ ಊರುಗಳಿಗೆ ತಲುಪಿಸಲು ಸರ್ಕಾರದಿಂದ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಮಾಡಲಾಗಿತ್ತು. ಮುಂಬೈ, ದೆಹಲಿ ಸೇರಿದಂತೆ ದೇಶದ ಬೇರೆ ಬೇರೆ ನಗರಕ್ಕೆ ಆಗಮಿಸಿದ್ದ ಕನ್ನಡಿಗರನ್ನು ರಾಜ್ಯಕ್ಕೆ ತರಲು ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೇ ಆರೋಗ್ಯ ತಪಾಸಣೆ, ಪ್ರಯಾಣ ಅವಧಿಯಲ್ಲಿ ಊಟ, ವಸತಿ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಮಾಡಿದೆ ಎಂದು ಆಪರೇಷನ್ ಕಾವೇರಿ ಕಾರ್ಯಾಚರಣೆಯ ಕರ್ನಾಟಕದ ನೋಡಲ್ ಅಧಿಕಾರಿ ಮನೋಜ್ ರಾಜನ್ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.
ಚಿತ್ತಾಪುರ ಬಿಜೆಪಿ ಅಭ್ಯರ್ಥಿ ರಾಠೋಡ್‌ರಿಂದ ಖರ್ಗೆ ಕುಟುಂಬದ ಹತ್ಯೆ ಸಂಚು: ಸುರ್ಜೇವಾಲಾ ಆರೋಪ
ಕೊನೆಯ ಬ್ಯಾಚ್‌ನಿಂದ 1,800 ಕಿ.ಮೀ. ದೂರ ಬಸ್ ಪ್ರಯಾಣ!: ಸೂಡಾನ್‌ನಲ್ಲಿ ಬಸ್ ಸಮಸ್ಯೆ, ಬಸ್‌ಗೆ ಡೀಸೆಲ್ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳು ಕಾರ್ಯಾಚರಣೆ ವೇಳೆ ಎದುರಾಗಿದ್ದವು. ಶುಕ್ರವಾರ ಆಗಮಿಸಿದ ಕನ್ನಡಿಗರು ಪಶ್ಚಿಮ ಸೂಡಾನ್‌ನ ಎಲ್ ಫಾಶಿರ್‌ನಲ್ಲಿ ನೆಲೆಸಿದಿದ್ದರು. ಅತ್ಯಂತ ಕೆಟ್ಟಪರಿಸ್ಥಿತಿಯಲ್ಲಿ ಜೀವಿಸುತ್ತಿದ್ದರು. ಅಲ್ಲಿಂದ ಬಂದರು ನಗರಿ ‘ಪೋರ್ಚ್ ಸೂಡಾನ್’ ನಗರಕ್ಕೆ ಬರೋಬ್ಬರಿ 1,800 ಕಿ.ಮೀ ಪ್ರಯಾಣ ಮಾಡಬೇಕಾಗಿತ್ತು. ಎರಡು ಬಸ್‌ನಲ್ಲಿ 80 ಮಂದಿ ಸತತ 48 ಗಂಟೆಗೂ ಅಧಿಕ ಕಾಲ ಪ್ರಯಾಣ ಮಾಡಿ ಫೋರ್ಚ್ ಸೂಡಾನ್ ಸುರಕ್ಷಿತವಾಗಿ ತಲುಪಿ ಅಲ್ಲಿಂದ ಭಾರತಕ್ಕೆ ಆಗಮಿಸಿದ್ದಾರೆ. ಪ್ರಯಾಣದ ಅವಧಿಯಲ್ಲಿ ಬಸ್ ಕೆಟ್ಟು ಸುಮಾರು 200 ಕಿ.ಮೀ ಲಾರಿಯಲ್ಲಿ ಪ್ರಯಾಣ ಮಾಡಿ ಪೋರ್ಚ್ ಸೂಡಾನ್‌ಗೆ ತಲುಪಿದ್ದಾರೆ.
