ಬೆಂಗಳೂರು(ಡಿ.17); ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆಯ ಮೊದಲ ಹಂತದಲ್ಲಿ 1,17,383 ಅಭ್ಯರ್ಥಿಗಳು ಅಂತಿಮವಾಗಿ ಚುನಾವಣಾ ಕಣದಲ್ಲಿದ್ದು, 4,377 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಡಿ.22ರಂದು ಮೊದಲ ಹಂತದ ಚುನಾವಣೆ ನಡೆಯಲಿದೆ. 3,019 ಗ್ರಾಮ ಪಂಚಾಯಿತಿಗಳಲ್ಲಿ 48,048 ಒಟ್ಟು ಸ್ಥಾನಗಳಿದ್ದು, ಈ ಪೈಕಿ 43,238 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಈಗಾಗಲೇ 4,377 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ರಾಜ್ಯ ಚುನಾವಣಾ ಆಯೋಗವು ತಿಳಿಸಿದೆ.

ಆಯೋಗವು 1,64,550 ನಾಮಪತ್ರಗಳನ್ನು ಸ್ವೀಕರಿಸಿದ್ದು, 1,57,735 ನಾಮಪತ್ರಗಳು ಕ್ರಮಬದ್ಧವಾಗಿದ್ದವು. 40,352 ಅಭ್ಯರ್ಥಿಗಳು ಉಮೇದುವಾರಿಕೆ ವಾಪಸ್‌ ಪಡೆದುಕೊಂಡಿದ್ದರು. ಚುನಾವಣೆ ನಡೆಯುವ ಗ್ರಾಮಪಂಚಾಯಿತಿಯಲ್ಲಿ ಆಯೋಗವು ಎಲ್ಲಾ ರೀತಿಯ ಸಿದ್ಧತೆಗಳನ್ನು ಕೈಗೊಂಡಿದೆ ಎಂದು ಹೇಳಿದೆ.

ಶಬರಿಮಲೆಯಲ್ಲಿ ಕೇಸರಿ ಕಮಾಲ್‌, ಎನ್‌ಡಿಎಗೆ ಬಹುಮತ!

ಗ್ರಾಮ ಪಂಚಾಯಿತಿ ಚುನಾವಣೆಗಳು ಪಕ್ಷ ರಹಿತ ಚುನಾವಣೆಯಾಗಿರುತ್ತವೆ. ರಾಜಕೀಯ ಪಕ್ಷಗಳು ಈ ಚುನಾವಣೆಯಲ್ಲಿ ಪ್ರಚಾರ ಕಾರ್ಯದಲ್ಲಿ ಭಾಗಿಯಾಗುವುದು, ಸಭೆ, ಸಮಾರಂಭಗಳನ್ನು ನಡೆಸುವ, ರಾಜಕೀಯ ಮುಖಂಡರ ಭಾವಚಿತ್ರಗಳನ್ನು ಕರಪತ್ರದಲ್ಲಿ ಮುದ್ರಿಸಿ ಪಕ್ಷಗಳ ಬಾವುಟಗಳ ಮತ್ತು ಚಿಹ್ನೆಯನ್ನು ಬಳಸುವಂತಿಲ್ಲ. ಗ್ರಾಮ ಪಂಚಾಯಿತಿಗಳ ಚುನಾವಣೆಯನ್ನು ಪಕ್ಷದ ಆಧಾರ ರಹಿತವಾಗಿ ನಡೆಸುವುದರಿಂದ ಅಭ್ಯರ್ಥಿಗಳಿಗೆ ಮುಕ್ತ ಚಿಹ್ನೆಗಳನ್ನು ಮಾತ್ರ ಹಂಚಿಕೆ ಮಾಡಲಾಗುತ್ತದೆ. ರಾಜಕೀಯ ಪಕ್ಷದ ಮುಖಂಡರು ಚುನಾವಣಾ ಪ್ರಚಾರದಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಭಾಗವಹಿಸಿದಲ್ಲಿ ಅಥವಾ ಸಭೆಗಳನ್ನು ಆಯೋಜಿಸಿದರೆ ಮತದಾರರ ಮೇಲೆ ಪ್ರಭಾವ ಬೀರಿದಂತಾಗುತ್ತದೆ. ಇದು ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ. ಹೀಗಾಗಿ ರಾಜಕೀಯ ಪಕ್ಷಗಳು ಪಕ್ಷರಹಿತವಾಗಿ, ಮುಕ್ತ ಮತ್ತು ನ್ಯಾಯಯುತವಾಗಿ ಚುನಾವಣೆ ನಡೆಸಲು ಸಹಕಾರ ನೀಡಬೇಕು ಎಂದು ತಿಳಿಸಿದೆ.