Asianet Suvarna News Asianet Suvarna News

ಸೋಲಿಲ್ಲದ ಸರದಾರ ಬಸವರಾಜ ಹೊರಟ್ಟಿ ಮೇಲ್ಮನೆ ಪ್ರವೇಶಿಸಿ ಇಂದಿಗೆ 43 ವರ್ಷ!

ಶಿಕ್ಷಕ ಸಮುದಾಯದ ಬೆನ್ನಿಗೆ ನಿಂತು ಹೋರಾಡುವ ಮೂಲಕ ರಾಜಕೀಯ ನಾಯಕರಾಗಿ ರೂಪಗೊಂಡ ಹಾಲಿ ಸಭಾಪತಿ ಬಸವರಾಜ ಹೊರಟ್ಟಿಅವರು ವಿಧಾನಪರಿಷತ್‌ ಸದಸ್ಯರಾಗಿ ಜೂನ್‌ 30ಕ್ಕೆ ಸರಿಯಾಗಿ 43 ವರ್ಷ ತುಂಬುತ್ತವೆ.

43 years have passed today Basavaraja became a member of the Legislative Council rav
Author
First Published Jul 1, 2023, 5:55 AM IST | Last Updated Jul 1, 2023, 5:55 AM IST

ಹುಬ್ಬಳ್ಳಿ (ಜು.1):  ಶಿಕ್ಷಕ ಸಮುದಾಯದ ಬೆನ್ನಿಗೆ ನಿಂತು ಹೋರಾಡುವ ಮೂಲಕ ರಾಜಕೀಯ ನಾಯಕರಾಗಿ ರೂಪಗೊಂಡ ಹಾಲಿ ಸಭಾಪತಿ ಬಸವರಾಜ ಹೊರಟ್ಟಿಅವರು ವಿಧಾನಪರಿಷತ್‌ ಸದಸ್ಯರಾಗಿ ಜೂನ್‌ 30ಕ್ಕೆ ಸರಿಯಾಗಿ 43 ವರ್ಷ ತುಂಬುತ್ತವೆ.

1980, ಜೂನ್‌ 30 ರಂದು ಮೊದಲ ಬಾರಿಗೆ ‘ಉತ್ತರ ಮಧ್ಯ ಶಿಕ್ಷಕ ಮತಕ್ಷೇತ್ರ’ದಿಂದ ಆಯ್ಕೆಯಾಗಿ ಮೇಲ್ಮನೆ ಪ್ರವೇಶಿಸಿದರು. ತಿರುಗಿ ನೋಡಿದ್ದೇ ಇಲ್ಲ. ಸತತ 8 ಬಾರಿ ಪುನಃರಾಯ್ಕೆ ಆಗುತ್ತ ಬಂದಿದ್ದಾರೆ. ಸೋಲಿಲ್ಲದ ಸರದಾರ ಎನ್ನುವ ಅಭಿದಾನಕ್ಕೆ ಪಾತ್ರರಾಗಿದ್ದಾರೆ ಹೊರಟ್ಟಿ.

ಮುಂಬೈನಲ್ಲಿ ಶಾಸಕರ ಸಮ್ಮೇಳನ, ಬಸವರಾಜ ಹೊರಟ್ಟಿ ಭಾಗಿ

1980 ರಿಂದ ಸತತ 8 ಬಾರಿ ವಿಧಾನಪರಿಷತ್‌ ಸದಸ್ಯರಾಗಿ ಆಯ್ಕೆಯಾದ ಮತ್ತೊಬ್ಬ ನಾಯಕ ಇಡೀ ಭಾರತದಲ್ಲಿಯೇ ಇಲ್ಲ. ಈಗಾಗಲೇ ಇವರ ಹೆಸರು ‘ವಲ್ಡ್‌ರ್‍ ಬುಕ್‌ ಆಫ್‌ ರಿಕಾರ್ಡ್‌’ನಲ್ಲೂ ದಾಖಲಾಗಿದೆ. ಭಾರತೀಯ ರಾಜಕೀಯ ಇತಿಹಾಸದಲ್ಲಿ ಇದೊಂದು ಮೈಲುಗಲ್ಲು. ಇದು ಕರ್ನಾಟಕದ ಪಾಲಿಗೆ ಬಹುದೊಡ್ಡ ಹಿರಿಮೆ ಕೂಡ.

ಅನುದಾನಿತ ಶಿಕ್ಷಕರ ಪರ ಧ್ವನಿ:

70ರ ದಶಕದಲ್ಲಿ ಉತ್ತರ ಕರ್ನಾಟಕದಲ್ಲಿ ಶೇಕಡಾ 85%ರಷ್ಟುಅನುದಾನಿತ ಶಿಕ್ಷಣ ಸಂಸ್ಥೆಗಳಿದ್ದವು. 1977ರಲ್ಲಿ ಹೊರಟ್ಟಿಅವರು ಅನುದಾನಿತ ಶಿಕ್ಷಕರ ಬಗ್ಗೆ ಎತ್ತಿದ ಆ ಧ್ವನಿ ಮುಂದೊಂದು ದಿನ ಅವರೇ ಶಿಕ್ಷಕರನ್ನು ಪ್ರತಿನಿಧಿಸಿ ವಿಧಾನಪರಿಷತ್‌ ಪ್ರವೇಶಿಸುವಂತಾಯಿತು.

ಮೊದಲ ಚುನಾವಣೆಯಲ್ಲಿ ಆಗಿನ ಉತ್ತರ ಮಧ್ಯ ಶಿಕ್ಷಕ ಮತಕ್ಷೇತ್ರದ ವ್ಯಾಪ್ತಿ ದೊಡ್ಡದಾಗಿದ್ದರಿಂದ ಇಡೀ ಕ್ಷೇತ್ರ ಸಂಚರಿಸುವುದು ಸವಾಲಾಗಿತ್ತು. ಹಣ ಜೋಡಿಸುವುದು ಕಷ್ಟವಾಗಿತ್ತು. ಮಿತ್ರರೆಲ್ಲರೂ ಸೇರಿ 12 ಸಾವಿರ ರೂಪಾಯಿ ಕೂಡಿಸಿದ್ದರಂತೆ. ಆ ಹಣದಲ್ಲಿಯೇ ಚುನಾವಣಾ ಮಾಡಿ ಗೆದ್ದರು. ಅಂದಹಾಗೆ ಹೊರಟ್ಟಿಯವರು ಸ್ವತಂತ್ರವಾಗಿ ಕಣಕ್ಕಿಳಿದು ಅಂದು 1903 ಮತ ಪಡೆದಿದ್ದರು. ಇಂದಿರಾ ಕಾಂಗ್ರೆಸ್ನಿಂದ ಕೋಣಂದುರು ಲಿಂಗಪ್ಪ, ಅರಸು ಕಾಂಗ್ರೆನಿಂದ ರೇವಣಸಿದ್ದಪ್ಪ, ಮಜ್ಜಗಿ, ಜನತಾ ಪಕ್ಷದಿಂದ ಎಸ್‌.ಐ.ಶೆಟ್ಟರ ಸ್ವತಂತ್ರವಾಗಿ ಕಣಕ್ಕಿಳಿದಿದ್ದ ಕೆ. ಮಲ್ಲಪ್ಪ ಅವರಂತಹ ಘಟಾನುಘಟಿಗಳ ಎದುರು ಹೊರಟ್ಟಿಅವರು ಗೆದಿದ್ದು ಅಂದಿನ ಮಟ್ಟಿಗೆ ಇತಿಹಾಸ ನಿರ್ಮಿಸಿತ್ತು. ಆ ಬಳಿಕ ಹೊರಟ್ಟಿಸದಾ ಗೆಲುವಿನ ಮೆಟ್ಟಿಲಿನ ಮೇಲೇ ನಿಂತರು.

ಜನತಾ ಪಕ್ಷದ ಜತೆ ಪಯಣ:

ಪಕ್ಷೇತರರಾಗಿದ್ದ ಹೊರಟ್ಟಿರಾಮಕೃಷ್ಣ ಹೆಗಡೆ ಅವರ ಆದರ್ಶಗಳಿಗೆ ಮನಸೋತು ಜನತಾ ಪಕ್ಷದೊಂದಿಗೆ ತಮ್ಮ ಪಯಣ ಆರಂಭಿಸಿದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಹೆಗಡೆ ಅವರನ್ನು ಬಿಟ್ಟು ಎಚ್‌.ಡಿ. ದೇವೇಗೌಡರ ಜೆಡಿಎಸ್‌ ಸೇರಿದರು.

6 ಚುನಾವಣೆಗಳನ್ನು ಜನತಾ ಪರಿವಾರದ ಅಭ್ಯರ್ಥಿಯಾಗಿ ಗೆದ್ದುಬಂದು. ಮತ್ತೆ ರಾಜಕೀಯ ಸ್ಥಿತ್ಯಂತರ ಶುರುವಾಗಿ 8ನೇ ಚುನಾವಣೆಯನ್ನು ಬಿಜೆಪಿ ಅಭ್ಯರ್ಥಿಯಾಗಿ ಎದುರಿಸಿ ಗೆಲುವುಸಾಧಿಸಿದರು. ಶಿಕ್ಷಕರೊಬ್ಬರು ಮೂರನೇ ಬಾರಿ ಸಭಾಪತಿಯಾಗಿದ್ದು ಸಹ ಇತಿಹಾಸ.

ದಕ್ಷ ಆಡಳಿತಗಾರ:

ಈ ಸುಧೀರ್ಘ ಪಯಣದಲ್ಲಿ ಶಿಕ್ಷಣ ಸಚಿವರಾಗಿ 48313 ಶಿಕ್ಷಕ, ಉಪನ್ಯಾಸಕರ ನೇಮಕ, 1014 ಸರಕಾರಿ ಪ್ರೌಢಶಾಲೆ ಆರಂಭಿಸಿ ಹಳ್ಳಿ ಹಳ್ಳಿಯಲ್ಲಿಯೂ ಶಿಕ್ಷಣ ಸಿಗುವಂತೆ ಮಾಡಿದರು. 492 ಪದವಿಪೂರ್ವ ಕಾಲೇಜು ಸ್ಥಾಪನೆಗೆ ಮುತುವರ್ಜಿ ವಹಿಸಿದ್ದರು.

1987 ರಿಂದ 1993-94ರ ವರೆಗೆ ಅನುದಾನ ರಹಿತ ಶಾಲಾ ಕಾಲೇಜುಗಳಿಗೆ ಅನುದಾನಕ್ಕೆ ಒಳಪಡಿಸಿ 33 ಸಾವಿರ ಶಿಕ್ಷಕ ಕುಟುಂಬಗಳಿಗೆ ಆಧಾರವಾದರು. ದೇಶದಲ್ಲಿಯೇ ಮೊದಲ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡಮಿ ಸ್ಥಾಪನೆ. ಒಂದಂಕಿ ಲಾಟರಿ ನಿಷೇಧ, ಪಂಚಾಯತಿಗೊಂದು ಗ್ರಂಥಾಲಯ, ಧಾರವಾಡ, ಕಲಬುರ್ಗಿ ಹೈಕೋರ್ಚ್‌ ಪೀಠಗಳಿಗೆ ಭೂಮಿ ನೀಡಿದರು.

ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರಾಗಿ ಗ್ರಾಮೀಣ ಮಹಿಳೆಯರಲ್ಲಿ ಆತ್ಮವಿಶ್ವಾಸ ಮೂಡಿಸಿದರು. ಹಲವು ವಿಧಾಯಕ ಕಾರ್ಯಕ್ರಮ ಮೂಲಕ ಇಂದಿಗೂ ಹೊರಟ್ಟಿಮನೆಮಾತಾಗಿದ್ದಾರೆ.

ಹುಟ್ಟೂರಿನ ಋುಣ:

ಬಸವರಾಜ ಹೊರಟ್ಟಿಅಪ್ಪಟ ಹಳ್ಳಿ ಪ್ರತಿಭೆ. ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಯಡಹಳ್ಳಿ ಗ್ರಾಮದಲ್ಲಿ ಹುಟ್ಟಿಬೆಳೆದು, ಓದಿದ್ದರು. ನಂತರ ಉದೋಗ ಅರಸಿ ಹುಬ್ಬಳ್ಳಿಗೆ ಬಂದರು. ದೈಹಿಕ ಶಿಕ್ಷಕರಾಗಿ ಹೆಸರು ಮಾಡಿದರು.

ಆಕಸ್ಮಿಕ ಎಂಬಂತೆ ರಾಜಕೀಯ ಸೇರಿ ಹೊಸ ಇತಿಹಾಸವನ್ನೇ ಬರೆದರು. ಮಂತ್ರಿ, ಸಭಾಪತಿ ಏನೆಲ್ಲ ಆಗಿದ್ದರೂ ಎಂದೂ ಅವರು ತಮ್ಮ ಹುಟ್ಟೂರು ಮರೆಯಲಿಲ್ಲ. ಹುಟ್ಟೂರಾದ ಯಡಹಳ್ಳಿಯಲ್ಲಿ ದೇಶದಲ್ಲಿಯೇ ಮಾದರಿಯಾದ ಹೈಟೆಕ್‌ ಶಾಲೆ ನಿರ್ಮಿಸಿ ಹುಟ್ಟೂರಿನ ಋುಣ ತೀರಿಸಿದವರು.

ಇದ್ದದ್ದನ್ನು ಇದ್ದ ಹಾಗೆಯೇ ಹೇಳುವ ಗುಣ ಹೊರಟ್ಟಿಯವರದು. ಮಾತು ಗಡಸು, ಹೃದಯ ಕೋಮಲ. ಸದನದಲ್ಲಿ ಮಾತಿಗಿಳಿದರೆ ಎಲ್ಲರನ್ನೂ ಸೆಳೆಯುವ ಚಾಕಚಕ್ಯತೆ. ಅಷ್ಟೇ ಪ್ರಬುದ್ಧತೆ. ಪರಿಷತ್‌ ಸದಸ್ಯರು ಹೇಗಿರಬೇಕು ಎಂದು ಕಿರಿಯರಿಗೆ ಮೇಲ್ಪಂಕ್ತಿ ಹಾಕಿ ಕೊಟ್ಟಿದ್ದಾರೆ.

 

ಕೊಟ್ಟ ಭರವಸೆ ಈಡೇರಿಸುವುದು ಉತ್ತಮ: ಸರ್ಕಾರಕ್ಕೆ ಕಿವಿಮಾತು ಹೇಳಿದ ಬಸವರಾಜ ಹೊರಟ್ಟಿ

ಇಂದಿಗೆ ಸಾರ್ಥಕ 43 ವರ್ಷ ಪೂರ್ಣಗೊಳಿಸಿ ಮೂರನೇ ಬಾರಿಗೆ ಸಭಾಪತಿಯಾಗಿ ಸದನವನ್ನು ಅತ್ಯಂತ ಅರ್ಥಪೂರ್ಣವಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ನಾಲ್ಕು ದಶಕ ಶಾಸನ ಸಭೆಯಲ್ಲಿ ಇರುವುದು ಸಣ್ಣ ಮಾತೇನಲ್ಲ. ಇಂಥ ಮಹಾನ್‌ ಸಾಧನೆ ಮಾಡಿದ್ದಸು ಹೊರಟ್ಟಿಮಾಸ್ತರ್‌!

Latest Videos
Follow Us:
Download App:
  • android
  • ios