*  ಸಚಿವ ಗೋವಿಂದ ಕಾರಜೋಳ ರಾಜೀನಾಮೆಗೆ ಆಗ್ರಹ*  ಕಾಮಗಾರಿ ಮಾಡದೇ ಬಿಲ್‌ ಪಡೆದ ಗುತ್ತಿಗೆದಾರರು*  ಅಕ್ರಮದಲ್ಲಿ ಸರ್ಕಾರವೂ ಶಾಮೀಲು 

ಬೆಂಗಳೂರು(ಮೇ.19):  ನಾರಾಯಣಪುರ ಬಲದಂಡೆ ಕಾಲುವೆ ಆಧುನೀಕರಣ ನೆಪದಲ್ಲಿ ಕಾಮಗಾರಿ ಮಾಡದೆ ಗುತ್ತಿಗೆದಾರರು 425 ಕೋಟಿ ರು. ಬಿಲ್‌ ತೆಗೆದುಕೊಂಡಿದ್ದು ಅವ್ಯವಹಾರದಲ್ಲಿ ಸರ್ಕಾರ ಶಾಮೀಲಾಗಿದೆ. ಆದ್ದರಿಂದ ತನಿಖೆಗೆ ಸದನ ಸಮಿತಿ ರಚಿಸಬೇಕು. ನೈತಿಕ ಹೊಣೆ ಹೊತ್ತು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ರಾಜೀನಾಮೆ ನೀಡಬೇಕು ಎಂದು ವಿಧಾನ ಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.

ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಯಚೂರು ಜಿಲ್ಲೆ ಲಿಂಗಸಗೂರು ಮತ್ತು ದೇವದುರ್ಗ ತಾಲೂಕಿನಲ್ಲಿ ನಾರಾಯಣಪುರ ಬಲದಂಡೆ ಕಾಲುವೆ ಆಧುನೀಕರಣ ಮಾಡಲು ಜುಲೈ 2021 ರಲ್ಲಿ 1619 ಕೋಟಿ ರು. ವೆಚ್ಚದಲ್ಲಿ 2 ಪ್ಯಾಕೇಜ್‌ ಮಾಡಿ ಗುತ್ತಿಗೆ ನೀಡಲಾಗಿತ್ತು. ಇದರಲ್ಲಿ ಕಾಮಗಾರಿ ನಡೆಸದೇ ಬಿಲ್‌ ಪಡೆಯಲಾಗಿದೆ. ಅಕ್ರಮದಲ್ಲಿ ಸರ್ಕಾರದ ಪ್ರಮುಖರು ಶಾಮೀಲಾಗಿದ್ದು, ತನಿಖೆಗೆ ಸದನ ಸಮಿತಿ ರಚಿಸಬೇಕು. ಗೋವಿಂದ ಕಾರಜೋಳ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದರು.

Mandya: ಕಾಂಗ್ರೆಸ್‌ ಪಕ್ಷದಲ್ಲಿ ಎರಡು ಗುಂಪುಗಳಿವೆ: ಸಂಸದ ಪ್ರತಾಪ್‌ ಸಿಂಹ ಟೀಕೆ!

ಸೋದರನ ಹೆಸರಲ್ಲಿ ವಜ್ಜಲ್‌ ಟೆಂಡರ್‌:

‘1ರಿಂದ 15 ನೇ ವಿತರಣಾ ನಾಲೆಗಳನ್ನು ಆಧುನೀಕರಣ ಮಾಡಲು 828 ಕೋಟಿ ರು. ಹಾಗೂ 2 ನೇ ಪ್ಯಾಕೇಜ್‌ನಲ್ಲಿ 16 ರಿಂದ 18 ನೇ ನಾಲೆ ಆಧುನೀಕರಣಕ್ಕೆ 791 ಕೋಟಿ ರು. ವೆಚ್ಚದಲ್ಲಿ ಟೆಂಡರ್‌ ಕರೆಯಲಾಗಿದೆ. ಈ ಎರಡೂ ಟೆಂಡರ್‌ ಅನ್ನು ಬಿಜೆಪಿಯ ಮಾಜಿ ಶಾಸಕ ಮಾನಪ್ಪ ವಜ್ಜಲ್‌ ಸಹೋದರ ಎಂ.ಡಿ.ವಡ್ಡರ್‌ ಅವರಿಗೆ ನೀಡಲಾಗಿದೆ. ವಡ್ಡರ್‌ ಹೆಸರಿನಲ್ಲಿ ಮಾನಪ್ಪ ವಜ್ಜಲ್‌ ಅವರೇ ಟೆಂಡರ್‌ ಪಡೆದಿದ್ದಾರೆ. ಕೆಲಸ ಮಾಡದೆ 425 ಕೋಟಿ ರು. ಬಿಲ್‌ ಪಾವತಿಸಲಾಗಿದೆ’ ಎಂದು ಆರೋಪಿಸಿದರು.

ರಾಜ್ಯದಿಂದಲೇ ಶುರುನಾ "ಪ್ರಿಯಾಂಕಾ" ರಾಜಕೀಯದಾಟ? ಸಿದ್ದು ಸಿಎಂ ವ್ಯೂಹ.. ಡಿಕೆ "ಗಾಂಧಿ"ವ್ಯೂಹ..!

‘ಕಾಮಗಾರಿ ನಡೆಸದೇ ಬಿಲ್‌ ಪಡೆದಿರುವುದು ಗಮನಕ್ಕೆ ಬಂದು ಕಾಂಗ್ರೆಸ್‌ ಶಾಸಕ ಹುಲಿಗೇರಿ ಅವರು ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ, ಕೇಂದ್ರ ಹಾಗೂ ರಾಜ್ಯದ ನೀರಾವರಿ ಸಚಿವರಿಗೆ ಪತ್ರ ಬರೆದಿದ್ದು, ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಲು ಸೂಚಿಸಿದ್ದರು. ನಂತರ ತಾಂತ್ರಿಕ ಸಮಿತಿ ರಚಿಸಲಾಗಿದೆ. ಈ ಸಮಿತಿ ಸ್ಥಳ ಪರಿಶೀಲನೆ ನಡೆಸಿದಾಗ, ಕೆಂಪು ಮಣ್ಣು ಇರುವ ಕಡೆ ಗ್ರಾವೆಲ್‌ ಹಾಕಿದ್ದೇವೆ ಎಂದು ಗುತ್ತಿಗೆದಾರರು ಸುಳ್ಳು ಲೆಕ್ಕ ತೋರಿಸಿರುವುದು ಪತ್ತೆಯಾಗಿದೆ’ ಎಂದು ವಿವರಿಸಿದರು.

ಅಂದಾಜು ಸಮಿತಿಗೆ ಅಡ್ಡಿ:

‘ಅಂದಾಜು ಸಮಿತಿಯವರು ಸ್ಥಳ ಪರಿಶೀಲನೆಗೆ ಹೋದಾಗ ಗೂಂಡಾಗಳು ಅಡ್ಡಿಪಡಿಸಿದ್ದಾರೆ. ಸರ್ಕಾರದ ಕುಮ್ಮಕ್ಕು ಇಲ್ಲದಿದ್ದರೆ ಈ ರೀತಿ ಮಾಡಲು ಸಾಧ್ಯವಿಲ್ಲ. ಶಾಸಕ ಶಿವನಗೌಡ ನಾಯಕ ಅವರಿಗೆ ಹಣ ಸಿಗದಿರುವುದರಿಂದ ಎಂಜನಿಯರ್‌ಗೆ ಅವಾಚ್ಯವಾಗಿ ನಿಂದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸದನ ಸಮಿತಿ ರಚಿಸಿ ಪೊಲೀಸ್‌ ಭದ್ರತೆಯಲ್ಲಿ ಸ್ಥಳ ಪರಿಶೀಲನೆ ನಡೆಸಬೇಕು. ಗುತ್ತಿಗೆದಾರರಿಂದ ಹಣ ವಸೂಲಿ ಮಾಡಿ ಕಪ್ಪು ಪಟ್ಟಿಗೆ ಸೇರಿಸಿ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು’ ಎಂದು ಆಗ್ರಹಿಸಿದರು.

‘ಗುತ್ತಿಗೆದಾರರಿಗೆ ಬಿಲ್‌ ಪಾವತಿ ಮಾಡಲು ಕಮಿಷನ್‌ ಪಡೆಯಲಾಗುತ್ತಿದೆ ಎಂದು ಆರೋಪಿಸಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಯಾರು ಎಂದು ನನಗೆ ಗೊತ್ತಿಲ್ಲ. ಅವರ ಜೊತೆ ಮಾತನಾಡಿಯೂ ಇಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾದ ನಂತರ ಕೆಂಪಣ್ಣ ಮೌನವಾಗಿದ್ದಾರೆ. ಒಳಗೆ ಏನು ಒಪ್ಪಂದವಾಗಿದೆಯೋ ಗೊತ್ತಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.