ಬೆಂಗಳೂರು(ಜು.17): ರಾಜ್ಯದಲ್ಲಿ ಕೊರೋನಾ ಸೋಂಕಿನ ಉಬ್ಬರ ದಿನದಿಂದ ದಿನಕ್ಕೆ ಅತ್ಯಂತ ವೇಗದಿಂದ ಸಾಗುತ್ತಿದೆ. ಗುರುವಾರ ದಾಖಲೆಯ 4169 ಮಂದಿಗೆ ಸೋಂಕು ದೃಢಪಟ್ಟಿದೆ. ಅಲ್ಲದೆ, ಇದೆ ಮೊದಲ ಬಾರಿ ಶತಕದ ಸಂಖ್ಯೆ ದಾಟಿ ಬರೋಬ್ಬರಿ 104 ಮಂದಿ ಮೃತಪಟ್ಟಿದ್ದಾರೆ.

"

ತನ್ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿನ ಪ್ರಮಾಣ 50 ಸಾವಿರ ಗಡಿದಾಟಿ 51,422ಕ್ಕೆ ಏರಿಕೆಯಾಗಿದ್ದರೆ, ಈ ಮಹಾಮಾರಿಗೆ ಬಲಿಯಾದರ ಸಂಖ್ಯೆ 1 ಸಾವಿರ ಗಡಿ ದಾಟಿ 1032ಕ್ಕೆ ಏರಿಕೆಯಾಗಿದೆ.

3 ದಿನ ಅಲೆದರೂ ಬೆಡ್ ಸಿಕ್ಕಿಲ್ಲ: ಚಿಕಿತ್ಸೆಗಾಗಿ ಸಿಎಂ ಮನೆಗೇ ಬಂದು ಸೋಂಕಿತ ಮೊರೆ..!

ಈ ಪೈಕಿ ಬೆಂಗಳೂರು ನಗರ ಒಂದರಲ್ಲೇ ಗುರುವಾರ 2344 ಮಂದಿಗೆ ಸೋಂಕು ದೃಢಪಟ್ಟಿದ್ದು ಒಟ್ಟು ಸೋಂಕು 25 ಸಾವಿರದ ಗಡಿ ದಾಟಿ 25288ಕ್ಕೆ ಏರಿಕೆಯಾಗಿದೆ. ಅಲ್ಲದೆ, ಒಂದೇ ದಿನ 70 ಮಂದಿ ಸೋಂಕಿಗೆ ಬಲಿಯಾಗಿದ್ದು ಬೆಂಗಳೂರಿನಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 500 ಗಡಿ ದಾಟಿ (507) ಆತಂಕ ಸೃಷ್ಟಿಸಿದೆ.

ಗುರುವಾರ ಫಲಿತಾಂಶ ಬಂದಿರುವ 23451 ಪರೀಕ್ಷಾ ವರದಿಗಳಲ್ಲಿ ಪ್ರತಿ 100 ಪರೀಕ್ಷೆಯಲ್ಲಿ ಬರೋಬ್ಬರಿ 17 ಮಂದಿ ಸೋಂಕು ದೃಢಪಟ್ಟಿದೆ. ಗುರುವಾರ 1263 ಮಂದಿ ಗುಣಮುಖರಾಗಿದ್ದು ಒಟ್ಟು 19729 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ. ಈ ಮೂಲಕ ಚೇತರಿಕೆ ಪ್ರಮಾಣ ಶೇ. 38.37 ತಲುಪಿದೆ. 30,655 ಮಂದಿ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದು ಗಂಭೀರ ಅನಾರೋಗ್ಯ ಹೊಂದಿರುವ 539 ಮಂದಿ ತುರ್ತು ನಿಗಾ ಘಟಕದಲ್ಲಿದ್ದಾರೆ.

ಕೊರೋನಾ ಸಾವಿನ ಕೇಕೆ:

ಕಳೆದ ಒಂದು ವಾರದಿಂದ (ಜು.10 ರಿಂದ) ರಾಜ್ಯದಲ್ಲಿ 18044 ಸೋಂಕು ವರದಿಯಾಗಿದ್ದು 489 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಏರುಗತಿಯಲ್ಲೇ ಸಾಗುತ್ತಿದ್ದು ಶನಿವಾರ 70, ಭಾನುವಾರ 71, ಸೋಮವಾರ 73, ಮಂಗಳವಾರ 87 ಹಾಗೂ ಬುಧವಾರ 87 ಸಾವನ್ನಪ್ಪಿದ್ದು ಗುರುವಾರ ಏಕಾಏಕಿ 104ಕ್ಕೆ ಏರಿಕೆಯಾಗಿ ತೀವ್ರ ತಲ್ಲಣ ಸೃಷ್ಟಿಸಿದೆ.

ಕರ್ತವ್ಯ ಬಹಿಷ್ಕರಿಸಿದ ಆಯುಷ್‌ ವೈದ್ಯರು: 2000 ಸರ್ಕಾರಿ ವೈದ್ಯರಿಂದ ರಾಜೀನಾಮೆ

ಬೆಂಗಳೂರಿನಲ್ಲಿ ಭಾರೀ ಸಂಖ್ಯೆಯಲ್ಲಿ ಸೋಂಕು ಹಾಗೂ ಸಾವಿನ ಪ್ರಕರಣಗಳು ವರದಿಯಾಗಿದ್ದು ಒಂದೇ ದಿನ 70 ಮಂದಿಯ ಸಾವನ್ನಪ್ಪುವ ಮೂಲಕ ಮೃತರ ಸಂಖ್ಯೆ 507ಕ್ಕೆ ಏರಿಕೆಯಾಗಿದೆ. ಉಳಿದಂತೆ ಗುರುವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 7, ಶಿವಮೊಗ್ಗ 4, ಮೈಸೂರು 3, ಕಲಬುರಗಿ 1, ಬೀದರ್‌ 2, ಬಳ್ಳಾರಿ 4, ಕೋಲಾರ 6, ಬಾಗಲಕೋಟೆ 5, ಹಾಸನ 2, ಮಂಡ್ಯ 1 ಸೇರಿ 104 ಸಾವು ವರದಿಯಾಗಿವೆ. ಇದರಿಂದ ರಾಜ್ಯದಲ್ಲಿ ಕಳೆದ 1 ವಾರದ ಹಿಂದೆ ಶೇ.1.61 ರಷ್ಟಿದ್ದ ಸಾವಿನ ದರ ಸಾವಿನ ದರ ಬರೋಬ್ಬರಿ 2.06ಕ್ಕೆ ಏರಿಕೆಯಾಗಿದೆ.

ಮುಂದುವರೆದ ಸೋಂಕಿನ ವೇಗ:

ರಾಜ್ಯಾದ್ಯಂತ ಪ್ರಕರಣಗಳು ಜೋರಾಗುತ್ತಿದ್ದು ಈವರೆಗೆ ನಡೆಸಿರುವ 9.25 ಲಕ್ಷ ಪರೀಕ್ಷೆಗಳಲ್ಲಿ ಶೇ.5.5 ರಷ್ಟುಮಂದಿ ಸೋಂಕು ದೃಢಪಟ್ಟಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 238, ಧಾರವಾಡದಲ್ಲಿ 176, ವಿಜಯಪುರದಲ್ಲಿ 144, ಮೈಸೂರಿನಲ್ಲಿ 130, ಕಲಬುರಗಿಯಲ್ಲಿ 123, ಉಡುಪಿಯಲ್ಲಿ 113, ರಾಯಚೂರಿನಲ್ಲಿ 101 ಪ್ರಕರಣ, ಬೆಳಗಾವಿ 92, ಉತ್ತರ ಕನ್ನಡ 79, ಚಿಕ್ಕಬಳ್ಳಾಪುರ 77, ಬೀದರ್‌ 53, ಶಿವಮೊಗ್ಗ 46, ಗದಗ 44, ಕೋಲಾರ 43, ಬಾಗಲಕೋಟೆ 39, ಯಾದಗಿರಿ 34, ಕೊಪ್ಪಳ 32, ಹಾಸನ, ಬೆಂಗಳೂರು ಗ್ರಾಮಾಂತರ ತಲಾ 31, ಚಿಕ್ಕಮಗಳೂರು 30, ದಾವಣಗೆರೆ 25, ಚಿತ್ರದುರ್ಗ 21, ಹಾವೇರಿ, ಕೊಡಗು ತಲಾ 18, ಚಾಮರಾಜನಗರ 16, ತುಮಕೂರು 12, ಮಂಡ್ಯ 11 ಹಾಗೂ ರಾಮನಗರ 4 ಪ್ರಕರಣ ವರದಿಯಾಗಿವೆ.

ಕೊರೋನಾ ಅಂಕಿ-ಅಂಶ

ಒಟ್ಟು ಸೋಂಕು 51,422

ಕೊರೋನಾ ಸಾವು 1,032

ಅನ್ಯಕಾರಣದಿಂದ ಸಾವು 06

ಗುಣಮುಖರಾದವರು 19,729

ಸಕ್ರಿಯ ಸೋಂಕಿತರು 30,655

ಐಸಿಯುನಲ್ಲಿರುವವರು 539