PSI Recruitment Scam: ಫೆಬ್ರವರಿಯಲ್ಲಿ ನಡೆಯಬೇಕಿದ್ದ 402 ಪಿಎಸ್‌ಐ ನೇಮಕದಲ್ಲೂ ಅಕ್ರಮ?
* 545 ಅಷ್ಟೇ ಅಲ್ಲ, 402 ಪಿಎಸೈ ಹುದ್ದೆಗಳಿಗೂ ಅಕ್ರಮದ ಸ್ಕೆಚ್ ?
* ಮೊಬೈಲ್ ಸಂಭಾಷಣೆ ಬಿಚ್ಚಿತು ಭವಿಷ್ಯದ ಹೂರಣ ?
* ಪ್ರಶ್ನೆ ಪತ್ರಿಕೆ-1ರ ಬಗ್ಗೆಯೂ ಅನುಮಾನ
ಆನಂದ್ ಎಂ. ಸೌದಿ
ಯಾದಗಿರಿ(ಏ.23): ಈಗಿನ 545 ಪಿಎಸೈ(PSI) ಅಷ್ಟೇ ಅಲ್ಲ, ಮುಂಬರುವ 402 ಹುದ್ದೆಗಳ ಪಿಎಸೈ (Civil) ನೇಮಕಾತಿ ವೇಳೆಯೂ ಅಕ್ರಮದ ಸ್ಕೆಚ್ಚು ಹಾಕಲಾಗಿತ್ತೇ ಅನ್ನೋ ಅನುಮಾನಗಳು ಮೂಡಿ ಬರುತ್ತಿವೆ. ಕಳೆದ ವರ್ಷ ಹೊರಡಿಸಿದ್ದ ಅಧಿಸೂಚನೆಯಂತೆ, ಇದೇ ಫೆಬ್ರವರಿ ಕೊನೆಯ ವಾರದಲ್ಲಿ ನಡೆಯಲಿದ್ದ 402 ಹುದ್ದೆಗಳ ಪಿಎಸೈ ನೇಮಕಾತಿಯನ್ನು(Recruitment) ಅನಿರ್ದಿಷ್ಟಾವಧಿವರೆಗೆ ಮುಂದೂಡಲಾಗಿತ್ತು. 545 ಪಿಎಸೈ ನೇಮಕದಲ್ಲಿನ ಅಪಸ್ವರಗಳು ಇದಕ್ಕೆ ಕಾರಣ ಎನ್ನಲಾಗಿತ್ತು.
ಪಿಎಸೈ ನೇಮಕ ಅಕ್ರಮದ(Scam) ಕುರಿತದ್ದು ಎನ್ನಲಾದ ಧ್ವನಿಮುದ್ರಿಕೆಯೊಂದು (Audio Conversation) ನೊಂದ ಅಭ್ಯರ್ಥಿಗಳ ವಾಟ್ಸಾಪ್(WhatsApp) ವಲಯದಲ್ಲಿ ವೈರಲ್ ಆಗುತ್ತಿದೆ. ‘ಕನ್ನಡಪ್ರಭ’ಕ್ಕೆ(Kannada Prabha) ಲಭ್ಯ ಇಂತಹುದ್ದೊಂದು ಆಡಿಯೋ ಸಂಭಾಷಣೆಯ ಒಂದಿಷ್ಟು ತುಣುಕುಗಳನ್ನು ಇಲ್ಲಿ ಪ್ರಕಟಿಸಲಾಗಿದ್ದು, ಇದರ ನಿಖರತೆ ಖಚಿತಪಡಿಸಿಕೊಳ್ಳಬೇಕಿದೆ.
ಪಿಎಸ್ಸೈ ಪರೀಕ್ಷೆ: ಬ್ಲೂಟೂತ್ ಅಕ್ರಮದ ತನಿಖೆ ಆಗ್ರಹ
ಅಕ್ರಮದಲ್ಲಿ ದೊಡ್ಡವರು ಭಾಗಿ?
ಇಬ್ಬರು ವ್ಯಕ್ತಿಗಳು ಮಾತನಾಡಿದ ಈ ಆಡಿಯೋದಲ್ಲಿ ಪಿಎಸೈ ಆಗಬೇಕೆಂದು ತಮ್ಮವರೊಬ್ಬರು ಬಯಸಿದ್ದು, ಎಷ್ಟುಬೇಕಾದರೂ ಹಣ ಕೊಡಲು ಸಿದ್ಧರಿದ್ದಾರೆ, ಒಳ್ಳೇ ಶ್ರೀಮಂತರು ಎಂಬ ಮಾತುಗಳು ಕೇಳಿಬರುತ್ತವೆ. ಮತ್ತೊಂದು ದನಿ, ಏನೂ ಆಗೋಲ್ಲ, ದೊಡ್ಡ ದೊಡ್ಡವರೇ ಇದರಲ್ಲಿದ್ದಾರೆ, ಜಾಸ್ತಿ ಅವರೇ ಶಾಮೀಲಾಗಿರೋದು ಎಂದು ಉತ್ತರಿಸುತ್ತದೆ.
ಈ 545 ಪಿಎಸೈ ನೋಟಿಫಿಕೇಶನ್ ಮುಗಿದಿದೆ, 402ರಲ್ಲಿ ಮಾಡೋಣ ಎಂಬ ಮಾತುಗಳ ಜೊತೆಗೆ, ಪರೀಕ್ಷಾ ಕೇಂದ್ರವನ್ನೇ ಮೊದಲು ಬುಕ್ ಮಾಡಲು ಅರ್ಜಿ ಸಂಖ್ಯೆಯನ್ನು ಬೇಗನೆ ಕಳುಹಿಸಿ ಎಂಬುದಾಗಿ ಹೇಳುವ ದನಿ, ಆಯ್ತು ಪಿಎಸೈ ಮಾಡೋಣ ಎನ್ನುತ್ತ ಕುಶಲೋಪರಿ ವಿಚಾರಿಸುತ್ತಾರೆ. ಪ್ರಶ್ನೆ ಪತ್ರಿಕೆ-1ರ ಬಗ್ಗೆಯೂ ಇಲ್ಲಿ ಅನುಮಾನಗಳ ಮಾತುಗಳು ನುಸುಳುತ್ತವೆ.
ವ್ಯಕ್ತಿ-1 : ನಮಸ್ಕಾರ್ರೀ ಸರ...
ವ್ಯಕ್ತಿ-2 : ನಮಸ್ಕಾರ್ ಪಿಎಸೈ ಸಾಬ್ರಿಗೆ..
ವ್ಯಕ್ತಿ-1 : ಎಚ್ಕೆದವರು ಕೋರ್ಟಿಗೆ ಹೋಗಿದ್ದಾರಂತೆ ?
ವ್ಯಕ್ತಿ-2 : ವರ್ಷಾ ಇದ್ದುದ್ದೇ, ಅದೇನೂ ಆಗೋಲ್ಲ
ವ್ಯಕ್ತಿ-1 : 2014 ರ ಕೆಎಎಸ್ ನಲ್ಲಿ ಆದಂತೆ ಮತ್ತೇನಾದರೂ...
ವ್ಯಕ್ತಿ-2 : ಏನೂ ಆಗೋಲ್ಲ, ಎಲ್ಲಿ ಎಲ್ಲಾ ದೊಡ್ಡವರಿದ್ದಾರೆ, ಜಾಸ್ತಿಯಿದ್ದಾರೆ, ದೊಡ್ಡವರೇ ಶಾಮೀಲಾಗಿದ್ದಾರೆ. ಗೌಡ್ರೆ, ನಮ್ಮವರೂ ಒಬ್ರರಿದ್ದಾರೆ, ದುಡ್ಡು ಸಾಕಷ್ಟಿದೆ.
ವ್ಯಕ್ತಿ-1 : ಈ ಸರ್ತಿ ಆಗೋಲ್ಲ, 402ಗೆ ಹಾಕಿ.. ಬೇಗ ಅಪ್ಲಿಕೇಶನ್ ನಂಬರ್ ವಾಟ್ಸಾಪ್ ಮಾಡ್ಲಿಕ್ಕೆ ಹೇಳಿ, ಬೇತೆ ನಂಬರಿಂದ ಮಾಡಲಿ. ಸೆಂಟರ್ ಹಾಕಿಸಿಕೊಂಡು ಬರಬೇಕು..
ವ್ಯಕ್ತಿ-2 : ಮುಂದಿನ ಪ್ರೋಸೀಜರ್ ಹೇಳ್ತೇನೆ, ಅಪ್ಲಿಕೇಶನ್ ನಂಬರ್‌ನಲ್ಲಿ ಹಾಕಿದ್ದ ಮೊಬೈಲ್ ನಂಬರ್ ಬಿಟ್ಟು ಬೇರೆ ನಂಬರಿನಿಂದ ಅಪ್ಲಿಕೇಶನ್ ನಂಬರ್ ಕಳುಹಿಸಲು ಹೇಳಿ..
ವ್ಯಕ್ತಿ-1 : ಆಯ್ತು..