ಬೆಂಗಳೂರು (ಫೆ.03):  ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯ ಗಡಿಗಳಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ರಾಜ್ಯದ ಸಾವಿರಾರು ರೈತರು ಪಾಲ್ಗೊಳ್ಳಲಿದ್ದಾರೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ದೆಹಲಿಯ ಮೂರು ಗಡಿಗಳಲ್ಲಿ ಫೆ.5 ರಿಂದ 7ರವರೆಗೆ ರೈತರ ಹೋರಾಟ ಮತ್ತೆ ತೀವ್ರಗೊಳ್ಳಲಿದೆ. ಪ್ರತಿಭಟನಾ ನಿರತ ರೈತರನ್ನು ಬೆಂಬಲಿಸಿ ರಾಜ್ಯದ ಸುಮಾರು ನಾಲ್ಕು ಸಾವಿರ ರೈತರು ದೆಹಲಿಗೆ ಮಂಗಳವಾರದಿಂದಲೇ ಪ್ರಯಾಣ ಬೆಳೆಸಿದ್ದಾರೆ. ಫೆ.7ರವರೆಗೂ ಹಂತ ಹಂತವಾಗಿ ರೈತರು ರಾಷ್ಟ್ರ ರಾಜಧಾನಿ ತಲುಪಲಿದ್ದಾರೆ. ಬುಧವಾರ ತಾವು ದೆಹಲಿಗೆ ತೆರಳುವುದಾಗಿ ಹೇಳಿದರು.

ಫೆ.6ಕ್ಕೆ ಭಾರತ್ ಬಂದ್? ಏನಿದು ರೈತರು ಘೋಷಿಸಿದ ಚಕ್ಕಾ ಜಾಮ್ ಪ್ರತಿಭಟನೆ? .

ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ನಡೆದ ಟ್ರ್ಯಾಕ್ಟರ್‌ ಪರೇಡ್‌ ವೇಳೆ ರೈತ ಹೋರಾಟಕ್ಕೆ ಕೆಟ್ಟಹೆಸರು ತರಲು ಉದ್ದೇಶಪೂರ್ವಕವಾಗಿ ಪುಂಡರು ಗಲಾಟೆ ನಡೆಸಿದರು. ರೈತರನ್ನು ಚದುರಿಸಲು ಹಮ್ಮಿಕೊಂಡ ಪೂರ್ವನಿಯೋಜಿತ ಕೃತ್ಯ ಇದಾಗಿದೆ. ಘಟನೆ ಕುರಿತು ಸೂಕ್ತ ತನಿಖೆ ನಡೆಸಬೇಕು. ರೈತರಿಗೆ ಕಳಂಕ ತಂದ ದುಷ್ಕರ್ಮಿಗಳಿಗೆ ಸೂಕ್ತ ಶಿಕ್ಷೆ ನೀಡಬೇಕು ಎಂದು ಅವರು ಒತ್ತಾಯಿಸಿದರು.