ರಾಜಕಾಲುವೆ, ಕೆರೆ ಒತ್ತುವರಿ ಮಾಡಿದ 600 ಕಟ್ಟಡಗಳಿಗೆ ಬಿಬಿಎಂಪಿ ನೋಟಿಸ್‌ ನೀಡಿದೆ. ಕೆರೆ, ಕಾಲುವೆ ಕಂದಾಯ ಇಲಾಖೆಯದ್ದು, ಹಾಗಾಗಿ ನೋಟಿಸ್‌ ನೀಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಹೇಳಿದ್ದಾರೆ.  

ಬೆಂಗಳೂರು (ಸೆ.13): ರಾಜಧಾನಿ ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಗೆ ಪ್ರವಾಹ ಪರಿಸ್ಥಿತಿಯುಂಟಾಗಿ ಹಲವು ಬಡಾವಣೆಗಳಲ್ಲಿ ಜನಜೀವನ ಸಂಕಷ್ಟಕ್ಕೆ ಸಿಲುಕಿದ ನಂತರ ಎಚ್ಚೆತ್ತಿರುವ ಬಿಬಿಎಂಪಿ ರಾಜಕಾಲುವೆ ಮತ್ತು ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿದ್ದು, ಈ ಸಂಬಂಧ 600 ಕಟ್ಟಡಗಳಿಗೆ ನೋಟಿಸ್‌ ಜಾರಿ ಮಾಡಿದೆ. ಸೋಮವಾರ ಸುದ್ದಿಗಾರರಿಗೆ ಈ ಕುರಿತು ಮಾಹಿತಿ ನೀಡಿದ ಬಿಬಿಎಂಪಿ ಆಯುಕ್ತ ತುಷಾರ್‌ ಗಿರಿನಾಥ್‌, ನೀರುಗಾಲುವೆ ಮತ್ತು ಕೆರೆ ಒತ್ತುವರಿ ತೆರವಿಗೆ ಈಗಾಗಲೇ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ರಾಜಕಾಲುವೆ ಮತ್ತು ಕೆರೆಗಳು ಕಂದಾಯ ಇಲಾಖೆ ವ್ಯಾಪ್ತಿಗೆ ಬರುತ್ತವೆ. ಹೀಗಾಗಿ ಕಂದಾಯ ಕಾಯ್ದೆಯಡಿಯಲ್ಲಿ ಸರ್ವೇಯರ್‌ಗಳು ನಮ್ಮೊಂದಿಗಿದ್ದು, ಒತ್ತುವರಿ ಮಾಡಿಕೊಂಡಿರುವ ಪ್ರದೇಶಗಳನ್ನು ಗುರುತಿಸುತ್ತಿದ್ದಾರೆ. ತಹಸೀಲ್ದಾರ್‌ ನೋಟಿಸ್‌ ಜಾರಿ ಮಾಡುತ್ತಿದ್ದು, ಒತ್ತುವರಿ ತೆರವಿಗೆ ಕ್ರಮಕೈಗೊಳ್ಳುತ್ತಿದ್ದೇವೆ ಎಂದು ತಿಳಿಸಿದರು. ಈಗಾಗಲೇ ಹಲವೆಡೆ ಒತ್ತುವರಿ ತೆರವುಗೊಳಿಸಲಾಗಿದೆ. ವಲಯ ಆಯುಕ್ತರಿಗೆ ಒತ್ತುವರಿಯಾಗಿರುವ 600 ಜಾಗಗಳ ಪಟ್ಟಿಪ್ರಕಾರ ತೆರವು ಕಾರ್ಯಾಚರಣೆಗೆ ಕ್ರಮಕೈಗೊಳ್ಳುವಂತೆ ಸೂಚಿಸಿದ್ದೇವೆ. ಈ ಹಿಂದೆ ಒತ್ತುವರಿದಾರರಿಗೆ ನೋಟಿಸ್‌ ಜಾರಿ ಮಾಡಿದ್ದರೆ ಅಂತಹ ಕಟ್ಟಡಗಳಿಗೆ ಮತ್ತೊಮ್ಮೆ ನೋಟಿಸ್‌ ಕೊಡುವ ಅವಶ್ಯಕತೆ ಇಲ್ಲ.

ಹೊಸದಾಗಿ ಒತ್ತುವರಿಗಳನ್ನು ಗುರುತು ಮಾಡುತ್ತಿದ್ದೇವೆ. ಮಳೆಯಿಂದ ಕೆಲವು ನೀರುಗಾಲುವೆಗಳು ಮುಚ್ಚಿ ಹೋಗಿದ್ದು, ಅಂತಹ ಜಾಗದಲ್ಲಿ ಸಮಸ್ಯೆಯುಂಟಾಗುತ್ತಿದೆ. ಆದರೆ ತುರ್ತಾಗಿ ಅವುಗಳನ್ನು ಸಹ ಸರಿಪಡಿಸುತ್ತೇವೆ. ಸರ್ವೇ ಮಾಡುವಾಗ ಖಾಸಗಿ ಆಸ್ತಿಯಲ್ಲಿ ಎಚ್ಚರಿಕೆಯಿಂದಲೇ ಮಾಡಬೇಕಾಗುತ್ತದೆ. ಸ್ವಲ್ಪ ಹೆಚ್ಚು ಕಡಿಮೆಯಾದರೂ ಸಮಸ್ಯೆಯಾಗುತ್ತದೆ. ಹಾಗಾಗಿ ಅಧಿಕಾರಿಗಳು ಎಚ್ಚರಿಕೆಯಿಂದ ತೆರವು ಕಾರ್ಯ ನಡೆಸುತ್ತಿದ್ದಾರೆ ಎಂದು ಹೇಳಿದರು.

ಕಾನೂನು ಪ್ರಕಾರ ನೋಟಿಸ್‌: ಬಿಬಿಎಂಪಿ ಕಾಯ್ದೆ ಪ್ರಕಾರ ಪಾದಚಾರಿ ಮತ್ತು ರಸ್ತೆ ಮೇಲೆ ಒತ್ತುವರಿ ಇದ್ದರೆ ನೋಟಿಸ್‌ ಕೊಡಬೇಕಾದ ಅವಶ್ಯಕತೆ ಇಲ್ಲ. ಆದರೆ, ಕಂದಾಯ ಇಲಾಖೆ ಕಾಯ್ದೆಯಡಿ ಏನು ನಿಯಮವಿದೆಯೋ ಅದೇ ಪ್ರಕಾರವಾಗಿ ಕ್ರಮ ಜಾರಿಗೊಳಿಸುತ್ತೇವೆ ಎಂದ ಅವರು, ರೇನ್‌ಬೋ ಡ್ರೈವ್‌ ಲೇಔಟ್‌ ಸೇರಿದಂತೆ ಒತ್ತುವರಿ ಮಾಡಿಕೊಂಡಿರುವ ಕೆಲವು ಲೇಔಟ್‌ಗಳಿಗೆ ನೋಟಿಸ್‌ ಕೊಟ್ಟಿದ್ದೇವೆ. ಕಟ್ಟಡ ನಿರ್ಮಾಣಕ್ಕೆ ಅನುಮತಿ ಕೊಡುವಾಗ ಯಾವ ರೀತಿಯಲ್ಲಿ ತಪ್ಪಾಗಿದೆ ಎಂಬುದನ್ನು ಪರಿಶೀಲಿಸಿ ನಂತರ ಮುಂದಿನ ಕ್ರಮವಹಿಸುತ್ತೇವೆ ಎಂದರು.

ನಿಯಮ ಉಲ್ಲಂಘಿಸಿ ಒತ್ತುವರಿ ಮಾಡಿಕೊಂಡಿರುವ ಕಟ್ಟಡಗಳ ಮಾಲಿಕರು ನ್ಯಾಯಾಲಯದಲ್ಲಿ ಕೇಸು ದಾಖಲು ಮಾಡಿದರೂ ತುರ್ತು ಇರುವ ಕಡೆಗಳಲ್ಲಿ ಒತ್ತುವರಿ ತೆರವು ಮಾಡುತ್ತೇವೆ. ಜೊತೆಗೆ ಕಾಯ್ದೆ ಅನ್ವಯ ಒತ್ತುವರಿ ಮಾಡಿದವರ ವಿರುದ್ಧ ಕೇಸು ದಾಖಲಿಸುತ್ತೇವೆ. ಈಗಾಗಲೇ ಭೂ ಕಬಳಿಕೆಯಲ್ಲಿ ಹಲವು ಕೇಸುಗಳನ್ನು ದಾಖಲಿಸಿರುವ ಮಾಹಿತಿ ಇದೆ ಎಂದು ಹೇಳಿದರು. 

ಜೆಸಿಬಿ ತಡೆದ ಟೆಕ್‌ ಪಾರ್ಕ್ ಸಿಬ್ಬಂದಿ: ಮಹದೇವಪುರದ ಬಸವಣ್ಣ ನಗರದಲ್ಲಿನ ಗೋಪಾಲನ್‌ ಕಾಲೇಜ್‌ ಆಡಳಿತ ಮಂಡಳಿಯಿಂದ ರಾಜಕಾಲುವೆ ಒತ್ತುವರಿ ಸ್ಥಳದಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಂಡು ಮೈದಾನ ನಿರ್ಮಾಣ ಮಾಡಲಾಗುತ್ತಿದೆ. ಮಳೆ ಸುರಿದಾಗೊಮ್ಮೆ ಮೈದಾನ ಬಳಿಯ ಜಾಗದಲ್ಲಿ ಪ್ರವಾಹ ಉಂಟಾಗಿತ್ತು. ಸದ್ಯ ಒತ್ತುವರಿ ಜಾಗದಲ್ಲಿ ಅಧಿಕಾರಿಗಳು ಗುರುತು ಮಾಡಿದ್ದಾರೆ. ಅದೇ ರೀತಿಯಾಗಿ ದೊಡ್ಡಾನೆಗುಂದಿ ರಸ್ತೆಯ ಬಾಗ್ಮನೆ ವಲ್ಡ್‌ರ್‍ ಟೆಕ್ನಾಲಜಿ ಸೆಂಟರ್‌ನಿಂದ ರಾಜಕಾಲುವೆ ಒತ್ತುವರಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಒತ್ತುವರಿ ತೆರವು ಮಾಡಲು ಬಂದ ಜೆಸಿಬಿಯನ್ನು ಟೆಕ್‌ ಪಾರ್ಕ್ ಭದ್ರತಾ ಸಿಬ್ಬಂದಿ ತಡೆದು ನಿಲ್ಲಿಸಿದ್ದರು. ಆದರೆ ಪೊಲೀಸರ ಮಧ್ಯ ಪ್ರವೇಶದ ಬಳಿಕ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು.

ಬೆಂಗಳೂರು ಪ್ರವಾಹ ಎಫೆಕ್ಟ್: ಒತ್ತುವರಿ ತೆರವಿಗೆ ಟೊಂಕಕಟ್ಟಿ ನಿಂತ ಸಿಎಂ!

ರೈನ್‌ಬೋ ವಿಲ್ಲಾಗಳಿಗೆ ನೋಟಿಸ್‌: ರಾಜ ಕಾಲುವೆ ಒತ್ತುವರಿ ಜಾಗ ತೆರವುಗೊಳಿಸುವಂತೆ ನಗರದ ರೈನ್‌ ಬೋ ಡ್ರೈವ್‌ ಲೇಔಟ್‌ ವಿಲ್ಲಾಗಳಿಗೆ ಬೆಂಗಳೂರು ಪೂರ್ವ ತಹಸೀಲ್ದಾರ್‌ ನೋಟಿಸ್‌ ಜಾರಿ ಮಾಡಿದ್ದಾರೆ. ಒತ್ತುವರಿ ಜಾಗವನ್ನು ತೆರವು ಮಾಡದಿದ್ದರೆ ನಾವೇ ಕಾರ್ಯಾಚರಣೆ ನಡೆಸುತ್ತೇವೆ. ತೆರವು ಕಾರ್ಯಾಚರಣೆ ವೆಚ್ಚ ನೀವೇ ಭರಿಸಬೇಕೆಂದು, 15ಕ್ಕೂ ಹೆಚ್ಚು ವಿಲ್ಲಾಗಳಿಗೆ ತಹಸೀಲ್ದಾರ್‌ ನೋಟಿಸ್‌ ಜಾರಿಗೊಳಿಸಿದ್ದಾರೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆಪರೇಶನ್ ರಾಜಕಾಲುವೆ: ಶ್ರೀಮಂತರ ಪರವಾಗಿ ಬಿಬಿಎಂಪಿ ಕೆಲಸ?

ಡೆವಲಪ​ರ್ಸ್, ಐಟಿ ಪಾರ್ಕ್‌ಗಳ ಒತ್ತುವರಿ
ಐಟಿ ಪಾರ್ಕ್ ಮತ್ತು ಡೆವಲಪ​ರ್ಸ್‌ಗಳು ಮಹದೇವಪುರ ವಲಯದಲ್ಲಿ ಒತ್ತುವರಿ ಮಾಡಿಕೊಂಡಿರುವ 15 ಸ್ಥಳಗಳನ್ನು ಗುರುತು ಮಾಡಲಾಗಿದೆ. ಬಾಗ್ಮನೆ ಟೆಕ್‌ಪಾರ್ಕ್, ಪೂರ್ವ ಪ್ಯಾರಡೈಸ್‌ ಮತ್ತು ಇತರೆ(ಮಹದೇವಪುರ), ಆರ್‌ಬಿಡಿ(ಜುನ್ನಸಂದ್ರ-ಹಾಲನಾಯಕನಹಳ್ಳಿ- ದೊಡ್ಡಕನ್ನಳ್ಳಿ), ವಿಪ್ರೋ (ದೊಡ್ಡಕನ್ನಳ್ಳಿ), ಇಕೋಸ್ಪೇಸ್‌(ಬೆಳ್ಳಂದೂರು), ಗೋಪಾಲನ್‌(ಬೆಳ್ಳಂದೂರು ಮತ್ತು ಹೂಡಿ), ದಿವ್ಯ ಸ್ಕೂಲ್‌ ಮತ್ತು ಇತರೆ(ಹೂಡಿ), ಗೋಪಾಲನ್‌ ಮತ್ತು ಇತರೆ(ಹೂಡಿ ಮತ್ತು ಸೊನ್ನೆಹಳ್ಳಿ), ಆದರ್ಶ (ಆರ್‌.ನಾರಾಯಣಪುರ), ಕೊಲಂಬಿಯ ಏಷ್ಯಾ ಆಸ್ಪತ್ರೆ(ರಾಮಗೊಂಡನಹಳ್ಳಿ), ನ್ಯೂ ಹಾರಿಜನ್‌ ಕಾಲೇಜ್‌(ಕಾಡುಬೀಸನಹಳ್ಳಿ), ಆದರ್ಶ ರಿಟ್ರಿಟ್‌(ದೇವರಬೀಸನಹಳ್ಳಿ), ಎಪ್ಸಿಲಾನ್‌ ಮತ್ತು ದಿವ್ಯಶ್ರೀ (ಎಬಿಕೆ ಮತ್ತು ಯಮಲೂರು), ಪ್ರೆಸ್ಟೀಜ್‌, ಸಲಪೂರಿಯಾ, ಆದರ್ಶ (ಮಾರತಹಳ್ಳಿ ಮತ್ತು ಕರಿಯಮ್ಮನ ಅಗ್ರಹಾರ) ಮತ್ತು ನಲಪಾಡ್‌ ಮತ್ತು ಇತರೆ (ಚಲ್ಲಘಟ್ಟ) ಈ ಸಂಸ್ಥೆಗಳು ವಿವಿಧ ಸರ್ವೇ ನಂಬರ್‌ಗಳಲ್ಲಿ ಇರುವ ಪ್ರದೇಶಗಳನ್ನು ಒತ್ತುವರಿ ಮಾಡಿಕೊಂಡಿವೆ ಎಂದು ಬಿಬಿಎಂಪಿಗೆ ಮಹದೇವಪುರ ವಲಯದ ಅಧಿಕಾರಿಗಳು ವರದಿಯನ್ನು ಸಲ್ಲಿಸಿದ್ದಾರೆ.