ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅವರು 40 ವರ್ಷಗಳಿಂದ ಬಸ್ ಸೌಲಭ್ಯವಿಲ್ಲದ ವಡೇರಹಳ್ಳಿ ಮತ್ತು ಕಳವೂರು ಗ್ರಾಮಗಳಿಗೆ ಸರ್ಕಾರಿ ಬಸ್ ವ್ಯವಸ್ಥೆ ಕಲ್ಪಿಸಿದ್ದಾರೆ. ಸ್ವತಃ ತಾವೇ ಬಸ್ ಚಲಾಯಿಸಿಕೊಂಡು ಬರುವ ಮೂಲಕ ಈ ಸೇವೆಗೆ ಚಾಲನೆ ನೀಡಿದ್ದು, ಇದು ಗ್ರಾಮಸ್ಥರು ಮತ್ತು ಶಾಲಾ ಮಕ್ಕಳಿಗೆ ಅನುಕೂಲ ಕಲ್ಪಿಸಿದೆ.
ದಾವಣಗೆರೆ (ನ.9): 40 ವರ್ಷಗಳಿಂದ ಸರ್ಕಾರಿ ಬಸ್ಸೇ ಕಾಣದ ಊರಿಗೆ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಶನಿವಾರ ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸಿ, ತಾವೇ ಬಸ್ ಚಲಾಯಿಸಿಕೊಂಡು ಬರುವ ಮೂಲಕ ವಡೇರಹಳ್ಳಿ, ಕಳವೂರು ಗ್ರಾಮಸ್ಥರ 4 ದಶಕಗಳ ಬೇಡಿಕೆ ಈಡೇರಿಸಿದರು.
ಸ್ವತಃ ಬಸ್ ಚಲಾಯಿಸಿದ ಶಾಸಕ
ಮಾಯಕೊಂಡ ವ್ಯಾಪ್ತಿಯ ವಡೇರಹಳ್ಳಿ ಮತ್ತು ಕಳವೂರು ಗ್ರಾಮಗಳಿಗೆ ಇತಿಹಾಸದಲ್ಲಿಯೇ ರಾಜ್ಯ ರಸ್ತೆ ಸಾರಿಗೆ ಬಸ್ ಸೌಲಭ್ಯ ಇರಲಿಲ್ಲ. ಹಲವಾರು ವರ್ಷಗಳಿಂದ ಗ್ರಾಮಸ್ಥರು ಬಸ್‌ಗಾಗಿ ಬೇಡಿಕೆ ಇಟ್ಟಿದ್ದರು. ಶಾಸಕ ಕೆ.ಎಸ್.ಬಸವಂತಪ್ಪ ಅವರು ಶನಿವಾರ ಈ ಗ್ರಾಮಗಳಿಗೆ ಬಸ್ ಸೌಲಭ್ಯ ಕಲ್ಪಿಸಿದ್ದು, ಸ್ವತಃ ಬಸ್ ಚಲಾಯಿಸುವ ಮೂಲಕ ಚಾಲನೆ ನೀಡಿದರು. ಈ ವೇಳೆ ಶಾಲಾ ಮಕ್ಕಳು, ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದರು.
ಯಾವ್ಯಾವ ಗ್ರಾಮಳಿಗೆ ಸಂಚರಿಸುತ್ತೆ?
ಈ ಬಸ್ ಪ್ರತಿನಿತ್ಯ ದಾವಣಗೆರೆ- ಕಳವೂರು- ವಡೇರಹಳ್ಳಿ- ಮಾಯಕೊಂಡ- ಹುಚ್ಚವ್ವನಹಳಿ- ಬಸಾಪುರ- ಗಂಜಿಗಟ್ಟೆ ಗ್ರಾಮಗಳ ಮಾರ್ಗದಲ್ಲಿ ಸಂಚರಿಸಿ ಪುನಃ ಇದೇ ಮಾರ್ಗದಲ್ಲಿ ದಾವಣಗೆರೆಗೆ ವಾಪಸ್ ಬರಲಿದೆ. ಇದರಿಂದಾಗಿ ಮಕ್ಕಳು ಶಾಲೆಗಳಿಗೆ ಹಾಗೂ ಗ್ರಾಮಸ್ಥರು ನಗರ ಪ್ರದೇಶಗಳಿಗೆ ಹೋಗಿ ಬರಲು ಅನುಕೂಲವಾಗಲಿದೆ.
