ದಾವಣಗೆರೆ: ವಿಜಯದಶಮಿ ಹಬ್ಬದ ವೇಳೆ ಶ್ರೀರಾಮ ಮತ್ತು ಚಾಮುಂಡೇಶ್ವರಿ ಫ್ಲೆಕ್ಸ್‌ಗಳನ್ನು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಅನ್ಯಕೋಮಿನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉದ್ದೇಶದಿಂದ ಕೃತ್ಯ. ಆಜಾದ್ ನಗರ ಠಾಣೆ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿತ್ತು.

ದಾವಣಗೆರೆ (ಅ.12): ವಿಜಯದಶಮಿ ಹಬ್ಬದಂದು ದಾವಣಗೆರೆಯ ಬೇತೂರು ರಸ್ತೆಯಲ್ಲಿ ಭಕ್ತರು ಹಾಕಿದ್ದ ಶ್ರೀರಾಮ ಮತ್ತು ಚಾಮುಂಡೇಶ್ವರಿ ಭಾವಚಿತ್ರಗಳಿರುವ ಫ್ಲೆಕ್ಸ್‌ಗಳನ್ನು ವಿರೂಪಗೊಳಿಸಿದ ಆರೋಪದ ಮೇಲೆ ಐವರು ಅನ್ಯಕೋಮಿನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಮುಕ್ತಿಯಾರ್, ಆಬೀದ್, ಆತಿಕ್, ಸಾಧಿಕ್, ಮತ್ತು ಅಮಾನುಲ್ಲಾ ಎಂದು ಗುರುತಿಸಲಾಗಿದೆ.

ಅಕ್ಟೋಬರ್ 3 ರಂದು, ವಿಜಯದಶಮಿಯ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಅದ್ಧೂರಿ ಶೋಭಾಯಾತ್ರೆ ಆಯೋಜಿಸಲಾಗಿತ್ತು. ಈ ಶೋಭಾಯಾತ್ರೆಯ ಮಾರ್ಗದಲ್ಲಿ ಶ್ರೀರಾಮ, ಚಾಮುಂಡೇಶ್ವರಿ ಸೇರಿದಂತೆ ವಿವಿಧ ದೇವರ ಭಾವಚಿತ್ರಗಳಿರುವ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿತ್ತು. ಆದರೆ, ಬೇತೂರು ರಸ್ತೆಯ ಇಮಾಂ ನಗರದ 5ನೇ ಕ್ರಾಸ್‌ನಲ್ಲಿ ಶ್ರೀರಾಮನ ಫ್ಲೆಕ್ಸ್ ಮತ್ತು ಮುದ್ದಬೋವಿ ಕಾಲೋನಿಯ 2ನೇ ಕ್ರಾಸ್‌ನಲ್ಲಿ ಚಾಮುಂಡೇಶ್ವರಿಯ ಫ್ಲೆಕ್ಸ್‌ನ್ನು ಕಿಡಿಗೇಡಿಗಳು ರಾತ್ರಿ ವೇಳೆಯಲ್ಲಿ ವಿರೂಪಗೊಳಿಸಿ, ಹರಿದುಹಾಕಿದ್ದರು. 

ಇದನ್ನೂ ಓದಿ:Attack on Hindu Family: ಹಿಂದೂಗಳನ್ನ ಕೆಣಕಿ ಆಚರಣೆ ನಿಲ್ಲಿಸುವ ಹುನ್ನಾರ? ಹಿಂದೂ ಮುಖಂಡ ಸ್ಫೋಟಕ ಹೇಳಿಕೆ

ಈ ಕೃತ್ಯವನ್ನು ಒಂದು ಕೋಮಿನ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶದಿಂದ ಮಾಡಲಾಗಿದೆ ಎಂಬ ಆರೋಪ ಹಿನ್ನೆಲೆ ಈ ಘಟನೆಯ ಬಗ್ಗೆ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಕೇಸ್ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳನ್ನ ಪೊಲೀಸರು ಬಂಧಿಸಿ, ತನಿಖೆ ಮುಂದುವರಿಸಿದ್ದಾರೆ.

ಈ ಘಟನೆಯಿಂದ ಸ್ಥಳೀಯರಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದ್ದಾರೆ. ಪೊಲೀಸರು ಸಾರ್ವಜನಿಕರಿಗೆ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.