*  ಮಕ್ಕಳ ಲಸಿಕೆ ಅಭಿಯಾನ ಮಂದಗತಿ: 3.5 ಲಕ್ಷ ಮಕ್ಕಳು ಒಂದೂ ಡೋಸ್‌ ಲಸಿಕೆ ಪಡೆದಿಲ್ಲ*  ಶಾಲೆಯಲ್ಲಿ ಲಸಿಕಾ ಕೇಂದ್ರ ಆರಂಭಿಸಲು ಪೋಷಕರು, ಶಿಕ್ಷಕರ ಮನವಿ*  ಆರೋಗ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆ ಸಮನ್ವಯತೆಯಿಂದ ಗುರಿ ಸಾಧಿಸಬೇಕು  

ಜಯಪ್ರಕಾಶ್‌ ಬಿರಾದಾರ್‌

ಬೆಂಗಳೂರು(ಮೇ.18): ರಾಜ್ಯಾದ್ಯಂತ(Karnataka) ಸೋಮವಾರದಿಂದ ಶಾಲೆ(Schools) ಆರಂಭವಾಗಿದ್ದರೂ 12-14 ವಯಸ್ಸಿನ ಮಕ್ಕಳ ಪೈಕಿ ಪ್ರತಿ ಐದರಲ್ಲಿ ಒಂದು ಮಗವಿಗೆ ಮಾತ್ರ (ಶೇ.20ರಷ್ಟು) ಎರಡೂ ಡೋಸ್‌ ಕೊರೋನಾ ಲಸಿಕೆ(Corona Vaccine) ಪೂರ್ಣಗೊಂಡಿದೆ. ಅಲ್ಲದೆ, 3.5 ಲಕ್ಷಕ್ಕೂ ಅಧಿಕ ಮಕ್ಕಳು ಒಂದೂ ಡೋಸ್‌ ಲಸಿಕೆ ಪಡೆದಿಲ್ಲ!

ಮಾರ್ಚ್‌ 15ರಿಂದ 12-14 ವರ್ಷದ ಮಕ್ಕಳ(Children) ಲಸಿಕೆ ಆರಂಭವಾಗಿತ್ತು. ನಾಲ್ಕನೇ ಅಲೆಯ ಕಾರಣ ಒಂದು ತಿಂಗಳಲ್ಲಿಯೇ ಮೊದಲ ಡೋಸ್‌, ಎರಡು ತಿಂಗಳೊಳಗೆ ಎರಡೂ ಡೋಸ್‌ ಪೂರ್ಣಗೊಳಿಸಿ ಮುಂದಿನ ಶೈಕ್ಷಣಿಕ ವರ್ಷ ಆರಂಭದೊಳಗೆ ಮಕ್ಕಳ ಲಸಿಕೆ ಪೂರ್ಣಗೊಳಿಸುವ ಉದ್ದೇಶ ಹೊಂದಲಾಗಿತ್ತು. ಮೇ 15ಕ್ಕೆ ಬರೋಬ್ಬರಿ ಎರಡು ತಿಂಗಳು ಪೂರ್ಣಗೊಂಡಿದ್ದು, ಬೇಸಿಗೆ ರಜೆ ಮುಗಿದು ಶಾಲೆ ಕೂಡಾ ಆರಂಭವಾಗಿದೆ. ಆದರೆ, ರಾಜ್ಯದಲ್ಲಿ ಅರ್ಹ 20.5 ಲಕ್ಷ ಮಕ್ಕಳ ಪೈಕಿ ಈವರೆಗೂ 17.03 ಮಕ್ಕಳು ಮೊದಲ ಡೋಸ್‌, 3.8 ಲಕ್ಷ ಮಕ್ಕಳು ಮಾತ್ರ ಎರಡೂ ಡೋಸ್‌ ಲಸಿಕೆ ಪಡೆದಿದ್ದಾರೆ. ಇಂದಿಗೂ 3.5 ಲಕ್ಷ ಮಕ್ಕಳು ಲಸಿಕೆಯ ಒಂದೂ ಡೋಸ್‌ ಪಡೆದಿಲ್ಲ, 16.7 ಲಕ್ಷ ಮಕ್ಕಳು ಎರಡನೇ ಡೋಸ್‌ ಪಡೆಯಬೇಕಿದೆ. ಅಂದರೆ, 12-14 ವಯಸ್ಸಿನ ಮಕ್ಕಳ ಪೈಕಿ ಸರಾಸರಿ ಪ್ರತಿ ಐದು ಮಕ್ಕಳಲ್ಲಿ ಒಂದು ಮಗುವಿನದ್ದು (ಶೇ.20ರಷ್ಟು) ಮಾತ್ರ ಲಸಿಕೆ ಪೂರ್ಣಗೊಂಡಂತಾಗಿದೆ.

Booster Dose Vaccine: ಸತ್ತವರಿಗೆ 2ನೇ ಡೋಸ್‌ ಆಯ್ತು, ಈಗ ಬೂಸ್ಟರ್‌ ಡೋಸ್‌ ಮೆಸೇಜ್‌..!

ಮಾರ್ಚ್‌ ಕೊನೆಗೆ ಬಂದ ವಾರ್ಷಿಕ ಪರೀಕ್ಷೆ, ಆನಂತರ ಬಂದ ಬೇಸಿಗೆ ರಜೆ, ಎಲ್ಲಾ ಲಸಿಕಾ ಕೇಂದ್ರಗಳಲ್ಲಿ ಮಕ್ಕಳ ಲಸಿಕೆ ದಾಸ್ತಾನು ಲಭ್ಯವಿಲ್ಲದಿರುವುದು ಹಾಗೂ ಕೊರೋನಾ ಸೋಂಕು ತಗ್ಗಿದ ಹಿನ್ನೆಲೆ ಪೋಷಕ ನಿರ್ಲಕ್ಷ್ಯದಿಂದ ಮಕ್ಕಳ ಲಸಿಕೆ ಅಭಿಯಾನವು ಮಂದಗತಿಯಲ್ಲಿ ಸಾಗುತ್ತಿದೆ ಎನ್ನಲಾಗಿದೆ. 15-17 ವರ್ಷದ ಏಳು ಲಕ್ಷ ಮಕ್ಕಳು ಕೂಡಾ ಲಸಿಕೆಯಿಂದ ದೂರ ಉಳಿದಿದ್ದಾರೆ.

ಮತ್ತೆ ಶಾಲೆಯಲ್ಲಿ ಲಸಿಕಾ ಕೇಂದ್ರ ತೆರೆಯಲು ಮನವಿ:

ಶಾಲೆಗಳಲ್ಲಿ ಲಸಿಕಾ ಕೇಂದ್ರ ಆರಂಭವಾಗಿದ್ದ ಸಂದರ್ಭದಲ್ಲಿ ನಿತ್ಯ ಒಂದು ಲಕ್ಷ ಮಕ್ಕಳು ಲಸಿಕೆ ಪಡೆದುಕೊಳ್ಳುತ್ತಿದ್ದರು. ಏ.10ರಿಂದ ಬೇಸಿಕೆ ರಜೆ ಎಂದು ಶಾಲೆಗಳು ಬಂದ್‌ ಆಗಿದ್ದು, ಅಲ್ಲಿದ್ದ ಲಸಿಕಾ ಕೇಂದ್ರಗಳು ಸ್ಥಗಿತಗೊಂಡಿದ್ದವು. ಲಸಿಕಾ ಕೇಂದ್ರಗಳಲ್ಲಿ ಅಭಿಯಾನ ಮುಂದುವರೆದರೂ ಅಲ್ಲಿ ನಿತ್ಯ ನಿಗದಿತ ಸಂಖ್ಯೆಯಲ್ಲಿ (20) ಮಕ್ಕಳು ಆಗಮಿಸುವವರೆಗೂ ಕಾಯಬೇಕಿತ್ತು. ಬಹುತೇಕ ಲಸಿಕಾ ಕೇಂದ್ರದಲ್ಲಿ ಈ ಮಕ್ಕಳಿಗೆ ನೀಡುವ ಕೋರ್ಬಿವ್ಯಾಕ್ಸ್‌ ಲಸಿಕೆ ಲಭ್ಯವಿಲ್ಲ. ಹೀಗಾಗಿ, ಲಸಿಕಾ ಕೇಂದ್ರಕ್ಕೆ ತೆರಳಿ ಲಸಿಕೆ ಪಡೆಯಲು ಪೋಷಕು ಹಿಂದೇಟು ಹಾಕಿದರು. ಗ್ರಾಮೀಣ ಭಾಗಗಳ ಶಾಲಾ ಮಕ್ಕಳಿಗಂತೂ ನಗರಕ್ಕೆ ಆಗಮಿಸಿಯೇ ಲಸಿಕೆ ಪಡೆಯಬೇಕಿದೆ. ಆದ್ದರಿಂದ ಮತ್ತೆ ಶಾಲೆಯಲ್ಲಿಯೇ ಲಸಿಕಾ ಕೇಂದ್ರ ತೆರೆಯಲು ಪೋಷಕರು ಮತ್ತು ಶಾಲಾ ಆಡಳಿತ ಮಂಡಳಿಗಳು ಆರೋಗ್ಯ ಇಲಾಖೆಗೆ ಮನವಿ ಮಾಡಿವೆ.

ರೂಪಾಂತರಿಗಳು ಬಂದು ಮತ್ತೊಂದು ಅಲೆ ಕಾಣಿಸಿಕೊಳ್ಳಬಹುದು. ಲಸಿಕೆ ಪಡೆದಿದ್ದರೆ ಹೆಚ್ಚಿನ ಸಾವು ನೋವಿಲ್ಲದೆ ಕೊರೋನಾ ಎದುರಿಸಬಹುದು. ಸದ್ಯ ರಾಜ್ಯ ಮಕ್ಕಳ ಲಸಿಕೆಯಲ್ಲಿ ಹಿಂದುಳಿದಿದೆ. ಈಗ ಶಾಲೆಗಳು ಪುನಾರಾಂಭಗೊಂಡಿದೆ. ಆರೋಗ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆ ಸಮನ್ವಯತೆಯಿಂದ ಗುರಿ ಸಾಧಿಸಬೇಕು ಅಂತ ಕೊರೋನಾ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ.ಎಂ.ಕೆ.ಸುದರ್ಶನ್‌ ತಿಳಿಸಿದ್ದಾರೆ.

Covid Crisis: ಕೊರೋನಾ ರೂಪಾಂತರಿ ಪತ್ತೆಗೆ ಕೊಳಚೆ ನೀರಿನ ಜೀನೋಮಿಕ್‌ ಸೀಕ್ವೆನ್ಸಿಂಗ್‌ ಟೆಸ್ಟ್‌

ಲಸಿಕೆ ಅಭಿಯಾನ ಶಾಲೆಯಲ್ಲಿ ಆರಂಭವಾದರೆ ಮಾತ್ರ ಎಲ್ಲಾ ಮಕ್ಕಳಿಗೂ ಲಸಿಕೆ ನೀಡಲು ಸಾಧ್ಯ. ಬಹುತೇಕ ಮಕ್ಕಳ ಎರಡೂ ಡೋಸ್‌ ಲಸಿಕೆ ಪಡೆದಿಲ್ಲ. ಮೊದಲ ಡೋಸ್‌ ಶಾಲೆಯಲ್ಲಿ ಪಡೆದವರು ಮತ್ತೆ ಶಾಲೆಯಲ್ಲಿಯೇ ಎರಡನೇ ಡೋಸ್‌ ನೀಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಆರೋಗ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆ ಜತೆಗೂಡಿ ಶಾಲೆಗಳಲ್ಲಿ ಲಸಿಕಾ ಕೇಂದ್ರ ತೆರೆಯಬೇಕು ಅಂತ ಕರ್ನಾಟಕ ಪ್ರಾಥಮಿಕ, ಪ್ರೌಢಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್‌ ಹೇಳಿದ್ದಾರೆ. , 

ಇತ್ತ ಮಕ್ಕಳು ಮತ್ತೆ ಶಾಲೆಗೆ ಆಗಮಿಸಿದ್ದು, ಶೀಘ್ರದಲ್ಲಿಯೇ ಬಾಕಿ ಉಳಿದವರ ಲಸಿಕೆಗೆ ಕ್ರಮಕೈಗೊಳ್ಳಬೇಕು ಎಂದು ಆರೋಗ್ಯ ತಜ್ಞರು, ಶಿಕ್ಷಕರು, ಶಾಲಾ ಆಡಳಿತ ಮಂಡಳಿ ಸದಸ್ಯರು, ಪೋಷಕರು ಹೇಳುತ್ತಿದ್ದಾರೆ.