ಬೆಂಗಳೂರು(ಏ.13): ರಾಜ್ಯದಲ್ಲಿ ಬಹುತೇಕ ಎಲ್ಲ ಕಡೆಗಳಲ್ಲಿ ಮುಂದಿನ ನಾಲ್ಕು ದಿನ ಹಗುರದಿಂದ ಸಾಧಾರಣ ಮಳೆ ಸುರಿಯಲಿದೆ. ಭಾರಿ ಮಳೆ ನಿರೀಕ್ಷೆ ಹಿನ್ನೆಲೆಯಲ್ಲಿ ಏ.14ರಿಂದ 16ರವರೆಗೆ ಆರು ಜಿಲ್ಲೆಗಳಿಗೆ ‘ಯಲ್ಲೋ ಅಲರ್ಟ್‌’ ಘೋಷಿಸಲಾಗಿದೆ. 

ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಭಾಗದ ಎಲ್ಲ ಪ್ರದೇಶಗಳಲ್ಲಿ ಅಲ್ಲಲ್ಲಿ ಏ.13ರಂದು ಹಗುರ ಮಳೆ ಸುರಿಯಲಿದೆ. ನಂತರ ತುಸು ಜೋರಾಗಲಿರುವ ವರುಣ ಕರಾವಳಿಯ ದಕ್ಷಿಣ ಕನ್ನಡ ಮತ್ತು ದಕ್ಷಿಣ ಒಳನಾಡಿನ ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಗುಡುಗು ಸಹಿತ ಆರ್ಭಟಿಸುವ ಸಾಧ್ಯತೆ ಇದೆ. ಹೀಗಾಗಿ ಈ ಆರು ಜಿಲ್ಲೆಗಳಿಗೆ ಏ.14ರಿಂದ 16ರವರೆಗೆ ‘ಯೆಲ್ಲೋ ಅಲರ್ಟ್‌’ ನೀಡಲಾಗಿದೆ. ಸೋಮವಾರ ಕರಾವಳಿ, ಮಲೆನಾಡು, ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲಿಯೂ ಮಳೆಯಾಗಿದೆ.

ರಾಜ್ಯದಲ್ಲಿ 5 ದಿನ ಮಳೆ ಸಂಭವ : 14, 15ರಂದು ‘ಯಲ್ಲೋ ಅಲರ್ಟ್‌’ ಎಲ್ಲೆಲ್ಲಿ?

ಸೋಮವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಯಲ್ಲಿ ಕರಾವಳಿ ಭಾಗದಲ್ಲಿ ಅಲ್ಲಲ್ಲಿ ಕೆಲ ಕಾಲ ಧಾರಾಕಾರ ಮಳೆ ಸುರಿದಿದೆ. ಮಲೆನಾಡು ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಚದು​ರಿ​ದಂತೆ ಮಳೆ ಬಿದ್ದಿದೆ. ಹೀಗಾಗಿ ರಾಜ್ಯದಲ್ಲಿ ಸೆಕೆ ವಾತಾವರಣ ಸೃಷ್ಟಿಯಾಗಿದ್ದು, ಗರಿಷ್ಠ ತಾಪ​ಮಾ​ನ​ದಲ್ಲಿ ತುಸು ಇಳಿಕೆಯಾಯಿತು.

ದಕ್ಷಿಣ ಕನ್ನಡದ ಪಣಂಬೂ​ರಿ​ನಲ್ಲಿ 8 ಸೆಂ.ಮೀ ಮಳೆ ಸುರಿದಿದ್ದರೆ,ಉತ್ತರ ಕನ್ನಡದ ಯಲ್ಲಾಪುರ, ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ತಲಾ 4, ಮಂಗ​ಳೂರು ವಿಮಾನ ನಿಲ್ದಾಣ, ನಿಪ್ಪಾಣಿ ಹಾಗೂ ಬಾಗ​ಲ​ಕೋ​ಟೆ​ಯಲ್ಲಿ ತಲಾ 3 ಸೆಂ.ಮೀ. ಮಳೆ ಆಗಿದೆ. ಮಡಿ​ಕೇ​ರಿಯಲ್ಲಿ ರಾಜ್ಯದ ಗರಿಷ್ಠ ತಾಪಮಾನ 39 ಹಾಗೂ ಚಿಕ್ಕಮಗಳೂರಿನಲ್ಲಿ ಕನಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.