ಕಳೆದ ಬಾರಿಗಿಂತ 4.5 ಪಟ್ಟು ಹೆಚ್ಚು ಚುನಾವಣಾ ಅಕ್ರಮ ಪತ್ತೆ, ಈ ಬಾರಿ 375 ಕೋಟಿ ರು. ಮೌಲ್ಯದ ವಸ್ತು ವಶಕ್ಕೆ, ಸಾರ್ವಕಾಲಿಕ ದಾಖಲೆ: ಚುನಾವಣಾ ಆಯೋಗ ಮಾಹಿತಿ

ನವದೆಹಲಿ(ಮೇ.10): ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಸಾರ್ವಕಾಲಿಕ ದಾಖಲೆಯ 375 ಕೋಟಿ ರು. ಮೌಲ್ಯದ ನಗದು, ಡ್ರಗ್‌್ಸ, ಉಚಿತ ಉಡುಗೊರೆ ವಶಪಡಿಸಿಕೊಳ್ಳಲಾಗಿದೆ. ಇದು 2018ರ ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ವಶಪಡಿಸಿಕೊಳ್ಳಲಾದ ವಸ್ತುಗಳ ಮೌಲ್ಯಕ್ಕೆ ಹೋಲಿಸಿದರೆ 4.5 ಪಟ್ಟು ಹೆಚ್ಚು ಎಂದು ಕೇಂದ್ರ ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಮಾ.29ರಂದು ಕರ್ನಾಟಕದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ 288 ಕೋಟಿ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಇನ್ನು ಮಾಚ್‌ರ್‍ ಎರಡನೇ ವಾರದಿಂದ ಚುನಾವಣಾ ದಿನಾಂಕ ಘೋಷಣೆಯಾಗುವವರೆಗಿನ ಅವಧಿಯಲ್ಲಿ 83.78 ಕೋಟಿ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಈ ಬಾರಿ 18 ವಿಧಾನಸಭಾ ಕ್ಷೇತ್ರಗಳನ್ನು ವೆಚ್ಚ ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲಾಗಿತ್ತು. ಅಭ್ಯರ್ಥಿಗಳ ವೆಚ್ಚದ ಮೇಲಿನ ನಿಗಾ ಹೆಚ್ಚಳ, ನೆರೆಯ ರಾಜ್ಯಗಳ ಜತೆ ಹೆಚ್ಚಿನ ಸಮನ್ವಯ, ವಿವಿಧ ಸಂಸ್ಥೆಗಳ ನಡುವಿನ ಸಮನ್ವಯವು, ಭಾರೀ ಪ್ರಮಾಣದಲ್ಲಿ ಅಕ್ರಮ ಪತ್ತೆಗೆ ಕಾರಣವಾಗಿದೆ ಎಂದು ಆಯೋಗ ಹೇಳಿದೆ.

ಕರ್ನಾಟಕದಲ್ಲಿ 300 ಕೋಟಿ ದಾಟಿದ ಚುನಾವಣಾ ಅಕ್ರಮ..!

ಈ ಬಾರಿ ವಶಪಡಿಸಿಕೊಂಡ ವಸ್ತುಗಳ ಪೈಕಿ ಪ್ರಮುಖವಾದುದೆಂದರೆ, ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ 4.04 ಕೋಟಿ ನಗದು ವಶ, ಹೈದ್ರಾಬಾದ್‌ನಲ್ಲಿ ಡ್ರಗ್‌್ಸ ಉತ್ಪಾದಿಸುತ್ತಿದ್ದ ಲ್ಯಾಬ್‌ ಮೇಲೆ ದಾಳಿ, ಬೀದರ್‌ನಲ್ಲಿ 100 ಕೆ.ಜಿ. ಗಾಂಜಾ ವಶ, ಕಲಬುರಗಿ, ಚಿಕ್ಕಮಗಳೂರು ಮತ್ತು ಇತರೆ ಜಿಲ್ಲೆಗಳಲ್ಲಿ ಭಾರೀ ಪ್ರಮಾಣದ ಸೀರೆ ಹಾಗೂ ಆಹಾರ ಕಿಟ್‌ ವಶ, ಬೈಲಹೊಂಗಲ, ಕುಣಿಗಲ್‌ ಮತ್ತು ಇತರೆ ಕೆಲವು ಕ್ಷೇತ್ರಗಳಲ್ಲಿ ಕುಕ್ಕರ್‌ ಮತ್ತು ಇತರೆ ಗೃಹಪಯೋಗಿ ವಸ್ತುಗಳ ವಶಪಡಿಸಿಕೊಳ್ಳಲಾಗಿದೆ ಎಂದು ಆಯೋಗ ತಿಳಿಸಿದೆ.

ವಶಪಡಿಸಿಕೊಂಡ ವಸ್ತುಗಳು

147 ಕೋಟಿ ಮೌಲ್ಯದ ನಗದು
24 ಕೋಟಿ ಮೌಲ್ಯದ ಕೊಡುಗೆ
83 ಕೋಟಿ ಮೌಲ್ಯದ ಮದ್ಯ
24 ಕೋಟಿ ಮೌಲ್ಯದ ಡ್ರಗ್ಸ್‌
96 ಕೋಟಿ ಮೌಲ್ಯದ ಚಿನ್ನ, ಬೆಳ್ಳಿ