ಅಮರನಾಥದಲ್ಲಿ ಸಿಲುಕಿದ ರಾಜ್ಯದ 370 ಮಂದಿ ಸಹಾಯವಾಣಿಗೆ ಈವರೆಗೆ 57 ಕರೆಗಳು ಎಲ್ಲರೂ ಸುರಕ್ಷಿತವಾಗಿದ್ದಾರೆ: ರಾಜ್ಯ ಸರ್ಕಾರ
ಬೆಂಗಳೂರು (ಜು.10): ಅಮರನಾಥ ಯಾತ್ರಿಗಳ ರಕ್ಷಣೆಗಾಗಿ ಆರಂಭಿಸಿರುವ ಕರ್ನಾಟಕ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ಸಹಾಯವಾಣಿಗೆ ಈವರೆಗೆ 57 ಕರೆಗಳು ಬಂದಿದ್ದು, ಸದ್ಯಕ್ಕೆ ರಾಜ್ಯದ ಸುಮಾರು 370 ಯಾತ್ರಿಗಳು ಮಾರ್ಗದ ವಿವಿಧ ಸ್ಥಳಗಳಲ್ಲಿದ್ದಾರೆ. ಎಲ್ಲರನ್ನೂ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕೆಲಸ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಹುತೇಕ ಯಾತ್ರಾರ್ಥಿಗಳ ಸಂಪರ್ಕ ಸಾಧಿಸಲಾಗಿದೆ. ಎಲ್ಲರೂ ವಿವಿಧ ಸ್ಥಳಗಳಲ್ಲಿ ಸುರಕ್ಷಿತರಾಗಿದ್ದಾರೆ. ಯಾವುದೇ ಅಪಾಯದ ಪರಿಸ್ಥಿತಿಯಲ್ಲಿ ಇಲ್ಲ. ಕೆಲವರು ಹವಾಮಾನ ವೈಪರೀತ್ಯದಿಂದಾಗಿ ಸಿಕ್ಕಿ ಹಾಕಿಕೊಂಡಿದ್ದಾರೆ. ಸಹಜಸ್ಥಿತಿಗೆ ಹವಮಾನ ಬಂದರೆ ಅವರು ವಾಪಸ್ ಬರಲು ಸಾಧ್ಯವಾಗಲಿದೆ. ಯಾತ್ರಾರ್ಥಿಗಳಿಗೆ ಮಾರ್ಗಮಧ್ಯೆ ತೆರೆದ ಪರಿಹಾರ ಕೇಂದ್ರಗಳನ್ನೂ ಕೂಡ ಸ್ಥಾಪಿಸಲಾಗಿದೆ. ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕೆಲಸ ನಡೆಯುತ್ತಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Amarnath Yatra; 15000 ಮಂದಿ ರಕ್ಷಣೆ, 40 ಜನ ಇನ್ನೂ ನಾಪತ್ತೆ
ಈವರೆಗೂ ಸಂಕಷ್ಟದ ಕರೆ ಬಂದಿಲ್ಲ: ಪವಿತ್ರಾ ಯಾತ್ರಾಸ್ಥಳ ಅಮರನಾಥದಲ್ಲಿ ಮೇಘಸ್ಫೋಟ ಸಂಭವಿಸಿದ ನಂತರ ಹಲವು ಯಾತ್ರಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಅದೃಷ್ಟವಶಾತ್ ರಾಜ್ಯದ ವಿವಿಧ ಜಿಲ್ಲೆಗಳಿಂದ ತೆರಳಿದ್ದ 370ಕ್ಕೂ ಅಧಿಕ ಯಾತ್ರಿಕರ ಪೈಕಿ ಯಾರೂ ಸಂಕಷ್ಟಕ್ಕೆ ಸಿಲುಕಿರುವ ಮಾಹಿತಿ ಈವರೆಗೂ ಬಂದಿಲ್ಲ. ಹಾಗೆಯೇ ರಾಜ್ಯದ ಸಹಾಯವಾಣಿಗೆ ಕನ್ನಡಿಗರು ರಕ್ಷಣೆ ಕೋರಿ ಕರೆ ಮಾಡಿಲ್ಲ.
ಬೆಂಗಳೂರಿನಿಂದ 100ಕ್ಕೂ ಹೆಚ್ಚು, ಕಲಬುರಗಿ ಜಿಲ್ಲೆಯಿಂದ 55, ಬೀದರ್‌ನಿಂದ 10, ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳದಿಂದ 30, ಶಿವಮೊಗ್ಗ ಜಿಲ್ಲೆಯಿಂದ 16, ಮೈಸೂರಿನಿಂದ 10 ಮತ್ತು ಬಾಗಲಕೋಟೆ ಇಬ್ಬರು ಅಮರ್‌ನಾಥ ಯಾತ್ರೆಗೆ ತೆರಳಿರುವ ಮಾಹಿತಿ ಈವರೆಗೆ ಲಭಿಸಿದೆ. ಇವರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಜಿಲ್ಲಾಡಳಿತಗಳು ತಿಳಿಸಿವೆ.
‘ಕನ್ನಡಪ್ರಭ’ದ ಜೊತೆ ಮಾತನಾಡಿದ ಬಂಟ್ವಾಳದ ಯಾತ್ರಾ ತಂಡದ ಸುರೇಶ್ ಕೋಟ್ಯಾನ್, ನಾವು ಇನ್ನು 28 ಕಿ.ಮೀ. ಸಂಚರಿಸಿದರೆ ಯಾತ್ರಾ ಸ್ಥಳಕ್ಕೆ ತಲುಪುತ್ತೇವೆ. ಇಲ್ಲಿ ರಕ್ಷಣಾ ಕಾರ್ಯ ನಡೆಸುತ್ತಿರುವ ಸೈನಿಕರು ಉತ್ತಮ ಸಹಕಾರ ನೀಡುತ್ತಿದ್ದಾರೆ. ಭಾನುವಾರ ಬೆಳಗ್ಗೆ ಅಮರನಾಥದಲ್ಲಿ ದರ್ಶನ ಭಾಗ್ಯ ಸಿಗುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.
ಇನ್ನು ಶಿವಮೊಗ್ಗದಿಂದ ಮಾಜಿ ಉಪ ಮೇಯರ್ ಸುರೇಖಾ ಮುರುಳೀಧರ್ ಸೇರಿದಂತೆ 16 ಮಂದಿ ಯಾತ್ರಾರ್ಥಿಗಳು ತೆರಳಿದ್ದರು. ಈ ತಂಡ ಸೋಮವಾರ ಶಿವಮೊಗ್ಗಕ್ಕೆ ವಾಪಸ್ ಆಗಲಿದೆ. ಇನ್ನು ಮೈಸೂರಿನಿಂದ ತೆರಳಿದ್ದ 10 ಮಂದಿಯ ವಕೀಲರ ತಂಡವೂ ಸುರಕ್ಷಿತವಾಗಿದ್ದು, ಭಾನುವಾರ ಬೆಂಗಳೂರು ತಲುಪಲಿದೆ. ಇನ್ನು ಬಾಗಲಕೋಟೆ ಜಿಲ್ಲೆಯಿಂದ ಇಬ್ಬರು ತೆರಳಿದ್ದು, ಸದ್ಯ ಶ್ರೀನಗರದಲ್ಲಿ ಸುರಕ್ಷಿತವಾಗಿದ್ದಾರೆಂದು ತಿಳಿದುಬಂದಿದೆ.
ಅಮರನಾಥದಲ್ಲಿ ಮೇಘಸ್ಫೋಟ ಚಿಕ್ಕಮಗಳೂರು ಜಿಲ್ಲೆಯ 60 ಜನರ ತಂಡ ಸುರಕ್ಷಿತ
ಅಮರನಾಥ ಗುಹೆ ಬಳಿ ಮೇಘಸ್ಫೋಟ ಸಂಭವಿಸಿಲ್ಲ: ಹವಾಮಾನ ಇಲಾಖೆ
ಅಮರನಾಥ ಗುಹೆ ಬಳಿ ಶುಕ್ರವಾರ ಕಾಣಿಸಿಕೊಂಡ ದಿಢೀರ್ ಪ್ರವಾಹಕ್ಕೆ ಆ ಪ್ರದೇಶದಲ್ಲಿ ಬಿದ್ದ ಭಾರೀ ಮಳೆ ಕಾರಣವೇ ಹೊರತೂ, ಮೇಘಸ್ಫೋಟವಲ್ಲ. ಶುಕ್ರವಾರ ಆ ಪ್ರದೇಶದಲ್ಲಿ ಮೇಘಸ್ಫೋಟ ಸಂಭವಿಸಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ಸ್ಪಷ್ಟನೆ ನೀಡಿದೆ. ಗುಹೆಯ ಸುತ್ತಮುತ್ತಲ ಪ್ರದೇಶದಲ್ಲಿ ಶುಕ್ರವಾರ ಸಂಜೆ 4.30ರಿಂದ 6.30ರ ಅವಧಿಯಲ್ಲಿ 3.1 ಸೆಂ.ಮೀನಷ್ಟುಮಳೆ ಸುರಿದಿದೆ ಎಂದು ಇಲಾಖೆ ಹೇಳಿದೆ. ಒಂದು ಪ್ರದೇಶದಲ್ಲಿ ಒಂದು ಗಂಟೆಯಲ್ಲಿ 10 ಸೆಂ.ಮೀ. ಮಳೆ ಸುರಿದರೆ ಆಗ ಮಾತ್ರವೇ ಅದನ್ನು ಮೇಘಸ್ಫೋಟವೆಂದು ಪರಿಗಣಿಸಲಾಗುವುದು ಎಂದು ಇಲಾಖೆ ಮುಖ್ಯಸ್ಥ ಮೃತ್ಯುಂಜಯ ಮಹಾಪಾತ್ರ ತಿಳಿಸಿದ್ದಾರೆ.
