ಬೆಳಗಾವಿ[ಡಿ.12]: 'ಈಗ ಪದೇ ಪದೇ 37 ಸ್ಥಾನದವರಿಗೆ ಮುಖ್ಯಮಂತ್ರಿ ಸ್ಥಾನ ಕೊಟ್ಟಿದ್ದೀರಿ ಎನ್ನುತ್ತಿದ್ದೀರಿ. ಈ ಹಿಂದೆ 37 ಸ್ಥಾನ ಪಡೆದ ಇದೇ ಜೆಡಿಎಸ್‌ ಜತೆಗೆ ಅಧಿಕಾರ ಹಂಚಿಕೊಂಡಿದ್ದನ್ನು ಬಿಜೆಪಿ ಮರೆತಿರಬೇಕು’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಪ್ರತಿಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಟಾಂಗ್‌ ಕೊಟ್ಟಿದ್ದಾರೆ.

ಮಂಗಳವಾರ ವಿಧಾನಸಭೆಯಲ್ಲಿ ನಿಲುವಳಿ ಸೂಚನೆ ವೇಳೆ ಮಾತನಾಡುತ್ತಿದ್ದ ಯಡಿಯೂರಪ್ಪ ಅವರು, ಯಡಿಯೂರಪ್ಪ ಅಧಿಕಾರಕ್ಕೆ ಬರಬಾರದು ಎಂಬ ಒಂದೇ ಕಾರಣಕ್ಕೆ ಕೇವಲ 37 ಸ್ಥಾನ ಪಡೆದವರಿಗೆ ಬೆಂಬಲ ಕೊಟ್ಟು ಮುಖ್ಯಮಂತ್ರಿ ಮಾಡಿದ್ದರ ಬಗ್ಗೆ ಕಾಂಗ್ರೆಸ್‌ನವರು ಪಶ್ಚಾತ್ತಾಪ ಪಡುವ ಕಾಲ ಬಹಳ ದೂರವಿಲ್ಲ ಎಂದು ಹೇಳಿದರು.

ಸಿದ್ದು ಸೋಲಿಗೆ ಪಿತೂರಿ ಯಾರದು?: ಬಿಎಸ್‌ವೈ ಬಿಚ್ಚಿಟ್ಟ ಗುಟ್ಟು

ಈ ವೇಳೆ ಮಧ್ಯಪ್ರವೇಶಿಸಿದ ವಿಧಾನಸಭಾಧ್ಯಕ್ಷ ರಮೇಶ್‌ಕುಮಾರ್‌, ಬಹುಶಃ ಡಿ.ಕೆ. ಶಿವಕುಮಾರ್‌ ಮತ್ತು ಯಡಿಯೂರಪ್ಪ ಅವರು ಭೇಟಿಯಾಗಿದ್ದಾಗ ಇದನ್ನೇ ಮಾತನಾಡಿರಬೇಕು ಎಂದು ಚಟಾಕಿ ಹಾರಿಸಿದರು.

ಮಾತು ಮುಂದುವರೆಸಿದ ಅವರು, 1967ರಲ್ಲಿ ಕೋಲ್ಕತಾದಲ್ಲಿ ಚಟರ್ಜಿ ಎಂಬ ಪಕ್ಷೇತರ ಅಭ್ಯರ್ಥಿಯಾಗಿ ಒಬ್ಬನೇ ಗೆದ್ದಿದ್ದ. ಆತನನ್ನೇ ಮುಖ್ಯಮಂತ್ರಿ ಮಾಡಬೇಕಾಯಿತು. ‘ಎಂಎಲ್‌ಎ ಏಡುಕೊಂಡಲು’ ಎಂಬ ತೆಲುಗು ಸಿನಿಮಾದಲ್ಲೂ ಇದೇ ರೀತಿಯ ಘಟನೆಯೊಂದನ್ನು ಚಿತ್ರೀಕರಿಸಲಾಗಿತ್ತು ಎಂದು ಸ್ಮರಿಸಿದರು.

ಮತ್ತೊಮ್ಮೆ ಸರ್ಕಾರದ ವಿರುದ್ಧ ಗುಡುಗಿದ ಬಿಎಸ್ ವೈ

ಆಗ ಮಧ್ಯಪ್ರವೇಶ ಮಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಈಗ ಪದೇ ಪದೇ 37 ಸ್ಥಾನದವರಿಗೆ ಮುಖ್ಯಮಂತ್ರಿ ಸ್ಥಾನ ಕೊಟ್ಟಿದ್ದೀರಿ ಎನ್ನುತ್ತಿದ್ದೀರಿ. ಈ ಹಿಂದೆ 37 ಸ್ಥಾನ ಪಡೆದ ಇದೇ ಜೆಡಿಎಸ್‌ ಜತೆಗೆ ಅಧಿಕಾರ ಹಂಚಿಕೊಂಡಿದ್ದನ್ನು ಬಿಜೆಪಿ ಮರೆತಿರಬೇಕು ಎಂದರು.

ಇದಕ್ಕೆ ರಮೇಶ್‌ಕುಮಾರ್‌ ಪ್ರತಿಕ್ರಿಯಿಸಿ, ಯಡಿಯೂರಪ್ಪ ಅವರೇ 37 ಜೆಡಿಎಸ್‌ಗೆ ಲಕ್ಕಿ ನಂಬರ್‌. ನೀವು ಒಂದೋ 36 ಮಾಡಿ ಇಲ್ಲವೇ 38 ಮಾಡಿ ಎಂದು ಹೇಳಿ ಸಭೆಯನ್ನು ನಗೆಗಡಲಲ್ಲಿ ತೇಲಿಸಿದರು.

ಕುಮಾರಸ್ವಾಮಿ ಮಧ್ಯೆ ಪ್ರವೇಶಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮ್ಯಾಜಿಕ್‌ ನಂಬರ್‌ ಮುಖ್ಯವಾಗುತ್ತದೆಯೇ ಹೊರತು ಯಾರು ಎಷ್ಟುಸ್ಥಾನ ಪಡೆದಿದ್ದಾರೆ. ಯಾರೊಂದಿಗೆ ಸರ್ಕಾರ ರಚನೆ ಮಾಡುತ್ತಾರೆ ಎಂಬುದು ಮುಖ್ಯವಲ್ಲ ಎಂದು ಹೇಳಿದರು.