ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಲ್ಲಿಸಿದ ವರದಿಯನ್ನು ನ್ಯಾಯಪೀಠಕ್ಕೆ ಒದಗಿಸಿದ ಸರ್ಕಾರದ ಪರ ವಕೀಲರು

ಬೆಂಗಳೂರು(ಆ.03): ರಾಜ್ಯದ ಸರ್ಕಾರಿ ಬಾಲ ಮಂದಿರಗಳಿಂದ (ಮಕ್ಕಳ ಆರೈಕೆ ಕೇಂದ್ರ) ಈವರೆಗೆ ಕಾಣೆಯಾಗಿರುವ 484 ಮಕ್ಕಳಲ್ಲಿ 365 ಮಕ್ಕಳನ್ನು ಪತ್ತೆ ಹಚ್ಚಲಾಗಿದೆ ಹಾಗೂ 119 ಮಕ್ಕಳನ್ನು ಪತ್ತೆ ಮಾಡಬೇಕಿದೆ ಎಂದು ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ. ಈ ಕುರಿತಂತೆ ಕೋಲಾರದ ಸಾಮಾಜಿಕ ಕಾರ್ಯಕರ್ತ ಕೆ.ಸಿ.ರಾಜಣ್ಣ ಸಲ್ಲಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್‌ ಆರಾಧೆ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಲ್ಲಿಸಿದ ವರದಿಯನ್ನು ನ್ಯಾಯಪೀಠಕ್ಕೆ ಒದಗಿಸಿದ ಸರ್ಕಾರದ ಪರ ವಕೀಲರು, ಇಲಾಖೆಯಿಂದ ನಡೆಸಲಾಗುತ್ತಿರುವ ಬಾಲಮಂದಿರಗಳಿಂದ ಒಟ್ಟು 484 ಮಕ್ಕಳು ನಾಪತ್ತೆಯಾಗಿದ್ದಾರೆ. ಅವರಲ್ಲಿ 365 ಮಕ್ಕಳನ್ನು ಪತ್ತೆಯಾಗಿದ್ದಾರೆ. ಇನ್ನೂ 119 ಮಕ್ಕಳು ಪತ್ತೆಯಾಗಬೇಕಿದೆ. ಪತ್ತೆಯಾಗಿರುವ 365 ಮಕ್ಕಳ ಪೈಕಿ 352 ಮಕ್ಕಳು ತಮ್ಮ ಪೋಷಕರೊಂದಿಗೆ ವಾಸವಾಗಿದ್ದಾರೆ. 12 ಮಕ್ಕಳು ಬಾಲ ಮಂದಿರಗಳಲ್ಲಿ ತಂಗಿದ್ದಾರೆ. ಇಬ್ಬರು ಮಕ್ಕಳು ಎಚ್‌ಐವಿ, ಟಿಬಿ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು.

ಕೇಸ್‌ ರದ್ದತಿಗೆ ಡಿಕೆಶಿ ಅರ್ಜಿ: ಸಿಬಿಐಗೆ ಹೈಕೋರ್ಟ್‌ ನೋಟಿಸ್‌

ಪತ್ತೆಯಾಗದ 119 ಮಕ್ಕಳ ಪ್ರಕರಣಗಳಲ್ಲಿ 53 ಪ್ರಕರಣಗಳನ್ನು ಸಂಬಂಧಪಟ್ಟ ಪೊಲೀಸ್‌ ಠಾಣೆಗಳಿಗೆ ಮತ್ತು 66 ಪ್ರಕರಣಗಳನ್ನು ಮಾನವ ಕಳ್ಳಸಾಗಾಣಿಕೆ ತಡೆ ಘಟಕಕ್ಕೆ(ಎಎಚ್‌ಟಿಯು) ವರ್ಗಾಯಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ವರದಿ ದಾಖಲಿಸಿಕೊಂಡ ನ್ಯಾಯಪೀಠ, ನಾಪತ್ತೆಯಾಗಿರುವ ಮಕ್ಕಳ ಪತ್ತೆಗೆ ಕೈಗೊಂಡಿರುವ ಕ್ರಮಗಳ ಕುರಿತು ನಾಲ್ಕು ವಾರದಲ್ಲಿ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿ ವಿಚಾರಣೆ ಮುಂದೂಡಿತು. ಅರ್ಜಿದಾರರ ಪರ ವಕೀಲ ಎಸ್‌. ಉಮಾಪತಿ ವಾದ ಮಂಡಿಸಿದರು.