ಬೆಂಗಳೂರು(ಜು.27): ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಸೋಂಕು ಪರೀಕ್ಷೆ ವೇಳೆ ಬರೋಬ್ಬರಿ ಮೂರು ಸಾವಿರಕ್ಕೂ ಹೆಚ್ಚು ಮಂದಿ ಸುಳ್ಳು ಹೆಸರು, ವಿಳಾಸ ಮತ್ತು ತಪ್ಪು ಮೊಬೈಲ್‌ ಸಂಖ್ಯೆ ನೀಡಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದು, ಸುಳ್ಳು ಮಾಹಿತಿ ನೀಡಿರುವವರ ಪತ್ತೆ ಹಚ್ಚುವಂತೆ ಪಾಲಿಕೆ ಪೊಲೀಸರ ಮೊರೆ ಹೋಗಿದೆ.

ಈ ರೀತಿ ಸುಳ್ಳು ಮಾಹಿತಿ ನೀಡಿ ಹೋಗಿರುವುದರಿಂದ ಪರೀಕ್ಷೆಯಲ್ಲಿ ಕೊರೋನಾ ಸೋಂಕು ದೃಢಪಟ್ಟ 3388 ಮಂದಿಯನ್ನು ಪತ್ತೆ ಹಚ್ಚಲು ಬಿಬಿಎಂಪಿಗೆ ಇದುವರೆಗೂ ಸಾಧ್ಯವಾಗಿಲ್ಲ. ಹೀಗಾಗಿ ತಮ್ಮ ಬಳಿ ಇರುವ ವಿವರಗಳನ್ನು ಪೊಲೀಸರಿಗೆ ಒಪ್ಪಿಸಿರುವ ಬಿಬಿಎಂಪಿ, ಅವರನ್ನು ಪತ್ತೆ ಹಚ್ಚಿಕೊಡುವಂತೆ ಕೋರಿದೆ.

ಇಂದು ಬಿಐಇಸಿ ಕೇಂದ್ರ ಉದ್ಘಾಟನೆ: ಸಾವರ್ಜನಿಕರ ಸೇವೆಗೆ ಮುಕ್ತ

ಈ ರೀತಿ ಸುಳ್ಳು ಮಾಹಿತಿ ನೀಡುವುದರ ಹಿಂದೆ ಹಲವು ಕಾರಣಗಳಿರಬಹುದು. ಸೋಂಕು ದೃಢಪಟ್ಟರೆ ಅಧಿಕಾರಿಗಳು, ಪೊಲೀಸರು ಮನೆ ಬಾಗಿಲಿಗೆ ಬರುತ್ತಾರೆ. ಆ್ಯಂಬುಲೆನ್ಸ್‌ ತಂದು ಕರೆದೊಯ್ಯುತ್ತಾರೆ. ಇದರಿಂದ ಅಕ್ಕಪಕ್ಕದವರ ಎದುರು ಮುಜುಗರಕ್ಕೀಡಾಗಬೇಕಾಗಬಹುದು ಎಂಬ ತಪ್ಪು ಕಲ್ಪನೆ, ಜೊತೆಗೆ ಭಯ ಒಂದು ಕಾರಣವಿರಬಹುದು. ಮತ್ತೊಂದೆಡೆ ಕೆಲವರು ಕುತೂಹಲಕ್ಕೆ ಪರೀಕ್ಷೆಗೊಳಪಟ್ಟು ಕಿತಾಪತಿಗಾಗಿ ಬೇರೆಯವರ ವಿಳಾಸ, ಮೊಬೈಲ್‌ ನಂಬರ್‌ ಕೊಟ್ಟು ಹೋಗಿರುವ ಸಾಧ್ಯತೆಗಳೂ ಇವೆ. ಈ ಬಗ್ಗೆ ತನಿಖೆ ನಡೆಸಿ ಪತ್ತೆ ಹಚ್ಚುವಂತೆ ಕೋರಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ವಿಶೇಷ ತಂಡ ರಚನೆಗೆ ಮನವಿ:

ಬಿಬಿಎಂಪಿಯ ಯಾವ್ಯಾವ ವಲಯದಲ್ಲಿ ಕೋವಿಡ್‌ ಪರೀಕ್ಷೆಗೆ ಬಂದ ಎಷ್ಟುಜನರು ಈ ರೀತಿ ಸುಳ್ಳು ಮಾಹಿತಿ ನೀಡಿದ್ದಾರೆ. ಅದರಲ್ಲಿ ಎಷ್ಟುಜನರಿಗೆ ಸೋಂಕು ದೃಢಪಟ್ಟಿದೆ. ಅವರು ಪರೀಕ್ಷೆ ವೇಳೆ ನೀಡಿರುವ ವಿಳಾಸ, ಹೆಸರು, ಮೊಬೈಲ್‌ ನಂಬರ್‌ ಅನ್ನು ಪೊಲೀಸರಿಗೆ ನೀಡಲಾಗಿದೆ. ಪ್ರತಿ ವಲಯಕ್ಕೂ ಒಬ್ಬರು ಉನ್ನತ ಅಧಿಕಾರಿಗಳ ನೇತೃತ್ವದ ತಂಡ ರಚಿಸಿ ಸುಳ್ಳು ಮಾಹಿತಿ ನೀಡಿರುವರನ್ನು ಪತ್ತೆ ಹಚ್ಚಿಕೊಡುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಐಡಿ, ಆಧಾರ್‌ ಕಡ್ಡಾಯ:

ಇನ್ನು ಮುಂದೆ ಈ ರೀತಿ ತಪ್ಪು ಆಗದಂತೆ ಎಚ್ಚರ ವಹಿಸಲು ಮುಖ್ಯಮಂತ್ರಿಗಳ ಸೂಚನೆಯಂತೆ ಕೋವಿಡ್‌ ಪರೀಕ್ಷೆ ವೇಳೆ ಆಧಾರ್‌ ಕಾರ್ಡ್‌, ಗುರುತಿನ ಚೀಟಿಯನ್ನು ಕಡ್ಡಾಯಗೊಳಿಸಲಾಗಿದೆ.ಈಗಾಗಲೇ ಆರೋಗ್ಯ ಇಲಾಖೆ ಈ ಸಂಬಂಧ ಸ್ಪಷ್ಟಆದೇಶ ಹೊರಡಿಸಿದೆ. ಕೋವಿಡ್‌ ಪರೀಕ್ಷೆಗೆ ಬರುವ ಯಾವುದೇ ವ್ಯಕ್ತಿಯ ಬೆಂಗಳೂರಿನಲ್ಲಿ ನೆಲೆಸಿರುವ ತಾತ್ಕಾಲಿಕ ಅಥವಾ ಸ್ಥಳೀಯ ವಿಳಾಸವನ್ನು ಅಧಿಕೃತ ದಾಖಲೆ ಪರಿಶೀಲಿಸಿ ದಾಖಲಿಸಿಕೊಳ್ಳಬೇಕು. ಒಂದು ವೇಳೆ ಸ್ಥಳೀಯ ದಾಖಲೆ ಇಲ್ಲದ ಹೊರ ಜಿಲ್ಲೆ, ರಾಜ್ಯದ ವ್ಯಕ್ತಿಗಳಿಗೆ ಅವರ ಮೂಲ ಜಿಲ್ಲೆ, ರಾಜ್ಯದ ವಿಳಾಸವನ್ನು ದಾಖಲಿಸಿಕೊಂಡು ಪರೀಕ್ಷೆ ನಡೆಸಬೇಕು ಎಂದು ಸೂಚಿಸಿದೆ. ಈ ಆದೇಶಾನುಸಾರ ಇನ್ನು ಮುಂದೆ ಕೋವಿಡ್‌ ಪರೀಕ್ಷೆಗೆ ಆಧಾರ್‌ ಕಾರ್ಡ್‌, ಮತದಾನದ ಗುರುತಿನ ಚೀಟಿ, ಪಡಿತರ ಚೀಟಿ ಅಥವಾ ಇನ್ಯಾವುದೇ ಅಧಿಕೃತ ವಿಳಾಸ ದಾಖಲೆ ಪಡೆಯಲು ಬಿಬಿಎಂಪಿ ನಿರ್ಧರಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ

ಬಿಬಿಎಂಪಿ ವ್ಯಾಪ್ತಿಯಲ್ಲಿ ಆರಂಭದಿಂದ ಈವರೆಗೆ ಕೊರೋನಾ ಪರೀಕ್ಷೆಗೊಳಪಟ್ಟವರಲ್ಲಿ ಸಾಕಷ್ಟುಜನರು ತಮ್ಮ ವಿಳಾಸ, ಮೊಬೈಲ್‌ ಸಂಖ್ಯೆಯನ್ನು ತಪ್ಪಾಗಿ ಅಥವಾ ಸುಳ್ಳು ನೀಡಿರುವುದು ಕಂಡುಬಂದಿದೆ. ಇಂತಹ ಪ್ರಕರಣಗಳಲ್ಲಿ ಸೋಂಕು ದೃಢಪಟ್ಟ3338 ಮಂದಿಯನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಅಂತಹ ಪ್ರಕರಣಗಳ ವಿವರಗಳನ್ನು ಪೊಲೀಸರಿಗೆ ಒಪ್ಪಿಸಿದ್ದು, ಪತ್ತೆ ಹಚ್ಚಿಕೊಡುವಂತೆ ಕೋರಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌ ಅವರು ತಿಳಿಸಿದ್ದಾರೆ.