ಬೆಂಗಳೂರು(ಜು.27): ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ(ಬಿಐಇಸಿ)ದಲ್ಲಿ ನಿರ್ಮಿಸಲಾಗಿರುವ ಕೋವಿಡ್‌ ಆರೈಕೆ ಕೇಂದ್ರಕ್ಕೆ ಕೊನೆಗೂ ಮುಕ್ತಿ ದೊರೆಯುತ್ತಿದ್ದು, ಇಂದು(ಸೋಮವಾರ)ದಿಂದ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ.

ನಗರದ ಕೊರೋನಾ ಸೋಂಕು ನಿಯಂತ್ರಣ ಕುರಿತು ಭಾನುವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮಾಹಿತಿ ನೀಡಿದ ವೇಳೆ, ಬಿಐಇಸಿ ಆರೈಕೆ ಕೇಂದ್ರ ಆರಂಭಿಸುವುದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಮವಾರ ಆರೈಕೆ ಕೇಂದ್ರವನ್ನು ಸೋಂಕಿತರ ಆರೈಕೆಗೆ ಮುಕ್ತಗೊಳಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಗದ ಬೆಸ್ಕಾಂ ಒಪ್ಪಿಗೆ: ಬಿಐಇಸಿ ಕೇಂದ್ರ ಮತ್ತಷ್ಟು ವಿಳಂಬ?

ಈ ಕುರಿತು ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಆಯುಕ್ತ ಎನ್‌. ಮಂಜುನಾಥ್‌ ಪ್ರಸಾದ್‌, ಸೋಮವಾರ ಮಧ್ಯಾಹ್ನ 3.30ಕ್ಕೆ ಬಿಐಇಸಿಯ ಕೊರೋನಾ ಆರೈಕೆ ಕೇಂದ್ರವನ್ನು ಸೋಂಕಿತರ ಚಿಕಿತ್ಸೆಗೆ ಮುಕ್ತಗೊಳಿಸಲಾಗುತ್ತಿದೆ. ಈ ವೇಳೆ ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ ನಾರಾಯಣ್‌, ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್‌, ಕಂದಾಯ ಸಚಿವ ಆರ್‌.ಅಶೋಕ್‌ ಹಾಗೂ ಯಲಹಂಕದ ಶಾಸಕ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್‌.ಆರ್‌. ವಿಶ್ವನಾಥ್‌, ಬಿಬಿಎಂಪಿ ಮೇಯರ್‌ ಗೌತಮ್‌ ಕುಮಾರ್‌ ಸೇರಿದಂತೆ ಮೊದಲಾದವರು ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.