ಬೆಂಗಳೂರು (ಸೆ.09):  ಇದೇ ತಿಂಗಳು 21ರಿಂದ 30ರವರೆಗೆ ನಡೆಯುವ ಅಧಿವೇಶನದಲ್ಲಿ 10 ವಿಧೇಯಕಗಳು, 19 ಸುಗ್ರೀವಾಜ್ಞೆಗಳು ಮತ್ತು ಎರಡು ಅಂಗೀಕಾರವಾಗದ ಮಸೂದೆಗಳು ಸೇರಿ 31 ವಿಧೇಯಕಗಳು ಮಂಡನೆಯಾಗಲಿವೆ ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕರ್ನಾಟಕ ಭಿಕ್ಷಾಟನೆ ನಿಷೇಧ (ತಿದ್ದುಪಡಿ) ವಿಧೇಯಕ - 2020, ಕರ್ನಾಟಕ ಪೌರಸಭೆಗಳ (ತಿದ್ದಪಡಿ) ವಿಧೇಯಕ, ಕರ್ನಾಟಕ ವಿಧಾನಮಂಡಲದ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳು ಹಾಗೂ ಕೆಲವು ಇತರೆ ಕಾನೂನು (ತಿದ್ದುಪಡಿ) ವಿಧೇಯಕ-2020, ಕರ್ನಾಟಕ ಲೋಕಾಯುಕ್ತ (ಎರಡನೇ ತಿದ್ದುಪಡಿ) ವಿಧೇಯಕ-2020, ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ಎರಡನೇ ತಿದ್ದುಪಡಿ) ವಿಧೇಯಕ-2020, ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳ (ಸಾರ್ವಜನಿಕ ವಲಯದ ಸಂಸ್ಥೆಗಳ ನೌಕರರ ಸೇವೆಗಳನ್ನು ಸಾರ್ವಜನಿಕ ಸೇವೆಗೆ ವಿಲೀನಗೊಳಿಸುವುದಕ್ಕೆ ನಿಷೇಧ) ವಿಧೇಯಕ-2020, ಕರ್ನಾಟಕ ಕೈಗಾರಿಕೆಗಳ (ಸೌಲಭ್ಯ) (ತಿದ್ದುಪಡಿ) ವಿಧೇಯಕ, ಕನ್ನಡ ವಿಶ್ವವಿದ್ಯಾಲಯ ಮತ್ತು ಇತರೆ ಕೆಲವು ಕಾನೂನುಗಳ (ತಿದ್ದುಪಡಿ ವಿಧೇಯಕ-2020), ಕರ್ನಾಟಕ ಕಲ್ಲುಪುಡಿ ಮಾಡುವ ಘಟಕಗಳ (ಕ್ರಷರ್‌ಗಳ) ನಿಯಂತ್ರಣ (ತಿದ್ದುಪಡಿ) ವಿಧೇಯಕ ಮಂಡನೆಯಾಗಲಿವೆ ಎಂದರು.

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ಸಿದ್ದರಾಮಯ್ಯ ಪತ್ರ ...

ಬಾಕಿ ಇರುವ ಕರ್ನಾಟಕ ಅನುಸೂಚಿತ ಜಾತಿ, ಬುಡಕಟ್ಟುಗಳು ಮತ್ತು ಇತರೆ ಹಿಂದುಳಿದ ವರ್ಗಗಳ (ನೇಮಕಾತಿ ಮುಂತಾದವುಗಳ ಮೀಸಲಾತಿ) (ತಿದ್ದುಪಡಿ) ವಿಧೇಯಕ, ಬಿಬಿಎಂಪಿ ವಿಧೇಯಕ ಮಂಡಿಸಲಾಗುತ್ತದೆ. ಇನ್ನು ಸರ್ಕಾರದಿಂದ ಹೊರಡಿಸಲಾಗಿರುವ ಸುಗ್ರೀವಾಜ್ಞೆಗಳಾದ ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ (ತಿದ್ದುಪಡಿ), ಕರ್ನಾಟಕ ಕಲ್ಲುಪುಡಿ ಮಾಡುವ ಘಟಕಗಳ (ಕ್ರಷರ್‌ಗಳ) ನಿಯಂತ್ರಣ (ತಿದ್ದುಪಡಿ), ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ), ಕರ್ನಾಟಕ ಸಾಂಕ್ರಾಮಿಕ ರೋಗಗಳ (ತಿದ್ದುಪಡಿ), ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ತಿದ್ದುಪಡಿ), ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ), ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) (ತಿದ್ದುಪಡಿ), ಕೈಗಾರಿಕಾ ವಿವಾದಗಳು ಮತ್ತು ಕೆಲವು ಇತರೆ ಕಾನೂನುಗಳು (ತಿದ್ದುಪಡಿ) ಸೇರಿದಂತೆ 19 ಸುಗ್ರೀವಾಜ್ಞೆಗಳು ಮಂಡನೆಯಾಗಲಿವೆ ಎಂದು ವಿವರಿಸಿದರು.

ಸಾರ್ವಜನಿಕರಿಗೆ ನಿರ್ಬಂಧ, ಪತ್ರಕರ್ತರ ಸ್ಥಳಾಂತರ?

ಪ್ರತಿ ಬಾರಿಯ ಅಧಿವೇಶನದಲ್ಲಿ ಕಲಾಪ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ನೀಡಲಾಗುತ್ತಿತ್ತು. ಆದರೆ, ಈ ಬಾರಿ ಕೋವಿಡ್‌ ಹಿನ್ನೆಲೆಯಲ್ಲಿ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ನೀಡುತ್ತಿಲ್ಲ ಮತ್ತು ಮಾಧ್ಯಮದವರನ್ನು ಸಾರ್ವಜನಿಕರ ಗ್ಯಾಲರಿಗೆ ಸ್ಥಳಾಂತರ ಮಾಡುವ ಚಿಂತನೆ ನಡೆದಿದೆ ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಕೊರೋನಾ ಭೀತಿ ನಡುವೆಯೂ ಕರ್ನಾಟಕದಲ್ಲಿ ಚುನಾವಣೆಗೆ ಮುಹೂರ್ತ ಫಿಕ್ಸ್ ...

ಕೋವಿಡ್‌ ಪರಿಸ್ಥಿತಿ ಇರುವ ಕಾರಣ ಸಾರ್ವಜನಿಕರಿಗೆ ಅವಕಾಶ ನೀಡುತ್ತಿಲ್ಲ. ಸುಗಮವಾಗಿ ಕಲಾಪ ನಡೆಸಬೇಕಾಗಿರುವ ಕಾರಣ ಈ ತೀರ್ಮಾನ ಕೈಗೊಳ್ಳಲಾಗಿದೆ. ಅಂತೆಯೇ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾಗಿರುವ ಕಾರಣ ಮಾಧ್ಯಮದವರಿಗೆ ಯಾವ ರೀತಿಯಲ್ಲಿ ವ್ಯವಸ್ಥೆ ಮಾಡಬೇಕು ಎಂಬ ಚರ್ಚೆಗಳು ನಡೆಯುತ್ತಿದ್ದು, ಸಾರ್ವಜನಿಕರ ಗ್ಯಾಲರಿಗೆ ಸ್ಥಳಾಂತರಿಸುವ ಬಗ್ಗೆ ಗಂಭೀರವಾಗಿ ಚರ್ಚಿಸಲಾಗುತ್ತಿದೆ. ಕಲಾಪ ಸುದ್ದಿ ಬಿತ್ತರಿಸಲು ಮಾಧ್ಯಮದವರಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಪತ್ರಕರ್ತರ ಗ್ಯಾಲರಿಯಲ್ಲಿ 15 ಪತ್ರಕರ್ತರಿಗೆ ಅವಕಾಶ ನೀಡುವ ಬಗ್ಗೆ ಚರ್ಚಿಸಲಾಗಿದೆ. ಆದರೆ, ಯಾವ ಸಂಸ್ಥೆಗೆ ನೀಡಬೇಕು ಎಂಬ ಗೊಂದಲ ಇದೆ. ಹೀಗಾಗಿ ವಾರ್ತಾ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಯುತ್ತಿದೆ. ಸಾರ್ವಜನಿಕ ಗ್ಯಾಲರಿಯಲ್ಲಿ ಮಾಧ್ಯಮದವರಿಗೆ ವ್ಯವಸ್ಥೆ ಮಾಡಿಕೊಡುವುದು ಸೂಕ್ತ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ. ಹೀಗಾಗಿ ಮಾಧ್ಯಮದವರನ್ನು ಈ ಅಧಿವೇಶನಕ್ಕೆ ಮಾತ್ರ ಅನ್ವಯವಾಗುವಂತೆ ಸಾರ್ವಜನಿಕರ ಗ್ಯಾಲರಿಗೆ ಸ್ಥಳಾಂತರ ಮಾಡುವ ಉದ್ದೇಶ ಇದೆ ಎಂದು ತಿಳಿಸಿದರು.

ಶಾಸಕರ ಭವನದಲ್ಲಿ ನಿಯೋಗಗಳ ಮನವಿ

ಅಧಿವೇಶನದಲ್ಲಿ ಸಚಿವರಿಗೆ ಮನವಿ ನೀಡಲು ಬರುವ ನಿಯೋಗಗಳು ಸಚಿವರ ನಿವಾಸದಲ್ಲಿ ಅಥವಾ ಶಾಸಕರ ಭವನದಲ್ಲಿನ ಸಭಾಂಗಣದಲ್ಲಿ ನೀಡಬೇಕು ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಅಧಿವೇಶನದ ಸ್ಥಳಕ್ಕೆ ಬರಲು ನಿಯೋಗಗಳಿಗೆ ಅವಕಾಶ ಇಲ್ಲ. ಹೀಗಾಗಿ ನಿಯೋಗಗಳು ಸಚಿವರ ನಿವಾಸಕ್ಕೆ ಭೇಟಿ ನೀಡಿ ಮನವಿ ಸಲ್ಲಿಸಬೇಕು. ಇಲ್ಲವಾದರೆ ಶಾಸಕರ ಭವನದಲ್ಲಿನ ಸಭಾಂಗಣದಲ್ಲಿ ಸಲ್ಲಿಸಬೇಕು. ಅನಿವಾರ್ಯವಾದರೆ ಮಾತ್ರ ವಿಧಾನಸೌಧ ಮತ್ತು ವಿಕಾಸಸೌಧದಲ್ಲಿನ ಸಚಿವರ ಕೊಠಡಿಯಲ್ಲಿ ಸಲ್ಲಿಸಬಹುದು ಎಂದರು.