ಒಂದೇ ತಿಂಗಳಲ್ಲಿ 10 ಪಟ್ಟು ಏರಿಕೆ| 3082 ಜನರಿಗೆ ನಿನ್ನೆ ಸೋಂಕು| ಐದು ತಿಂಗಳ ಬಳಿಕ ದಾಖಲೆ ಮಂದಿಗೆ ಕೊರೋನಾ| ಸಕ್ರಿಯ ಪ್ರಕರಣ 4 ಪಟ್ಟು ಏರಿಕೆ| ನಿನ್ನೆ 12 ಸಾವು
ಬೆಂಗಳೂರು(ಮಾ.29): ರಾಜ್ಯದಲ್ಲಿ ಭಾನುವಾರ 3082 ಮಂದಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ತಿಂಗಳೊಳಗೆ ನಿತ್ಯದ ಸೋಂಕು 10 ಪಟ್ಟು ಏರಿಕೆಯಾಗಿದೆ. ಮಾಚ್‌ರ್ 1ರಂದು 349 ಜನರಲ್ಲಿ ಸೋಂಕು ಕಾಣಿಸಿಕೊಂಡ ನಂತರ ಕ್ರಮೇಣ ಹೆಚ್ಚಾಗಿ ಈಗ 3,082ಕ್ಕೆ ತಲುಪಿದೆ.
ಈ ನಡುವೆ, 12 ಮಂದಿ ಭಾನುವಾರ ಸಾವನ್ನಪ್ಪಿದ್ದಾರೆ. ಸಕ್ರಿಯ ಸೋಂಕಿತರ ಸಂಖ್ಯೆ 23 ಸಾವಿರದ ಗಡಿ ದಾಟಿದ್ದು, ಒಂದೇ ತಿಂಗಳಲ್ಲಿ 4 ಪಟ್ಟು ಏರಿದಂತಾಗಿದೆ. ಪಾಸಿಟಿವಿಟಿ ದರ 5 ತಿಂಗಳ ಗರಿಷ್ಠ ತಲುಪಿದೆ.
1ರಿಂದ 9ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷೆ ಬಗ್ಗೆ ಸ್ಪಷ್ಟನೆ ಕೊಟ್ಟ ಸಚಿವ ಸುರೇಶ್ ಕುಮಾರ್
ಕಳೆದ ವರ್ಷದ ನವೆಂಬರ್ 5 ರಂದು 3,156 ಹೊಸ ಪ್ರಕರಣ ವರದಿಯಾಗಿದ್ದವು. ಇದಾದ 143 ದಿನಗಳ ಬಳಿಕ ಮತ್ತೆ ಸೋಂಕಿನ ಪ್ರಮಾಣ 3 ಸಾವಿರದ ಗಡಿ ದಾಟಿದೆ. ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಅಕ್ಟೋಬರ್ 15ರವರೆಗೂ (8,000ಕ್ಕೂ ಹೆಚ್ಚು ದೈನಂದಿನ ಪ್ರಕರಣ) ಉತ್ತುಂಗದಲ್ಲಿದ್ದು ಆ ಬಳಿಕ ದೊಡ್ಡ ಮಟ್ಟದ ಇಳಿಕೆ ದಾಖಲಾಗುತ್ತ ಬಂದಿತ್ತು. ಇದೀಗ ಮತ್ತೆ ಕೋವಿಡ್ ಪ್ರಕರಣಗಳು ಹಿಮ್ಮುಖವಾಗಿ ಅದೇ ದಿಕ್ಕಿನಲ್ಲಿ ಸಾಗುತ್ತಿರುವುದು ಸಹಜವಾಗಿ ಆತಂಕಕ್ಕೆ ಕಾರಣವಾಗಿದೆ.
ಸಕ್ರಿಯ ಕೇಸು 4 ಪಟ್ಟು ಅಧಿಕ:
ಈ ವರ್ಷದ ಮಾಚ್‌ರ್ 1ರಂದು 5,824 ರಷ್ಟಿದ್ದ ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚು ಕಡಿಮೆ 4 ಪಟ್ಟು ಹೆಚ್ಚಾಗಿದ್ದು 23,037 ಸಕ್ರಿಯ ಸೋಂಕಿತರಿದ್ದಾರೆ. ಈ ಪೈಕಿ 204 ಮಂದಿ ತೀವ್ರ ನಿಗಾ ವಿಭಾಗದಲ್ಲಿದ್ದಾರೆ. ಕಳೆದ ಮೂರು ದಿನದಲ್ಲಿ 50ಕ್ಕೂ ಹೆಚ್ಚು ಮಂದಿ ತೀವ್ರ ನಿಗಾ ವಿಭಾಗಕ್ಕೆ ದಾಖಲಾಗಿದ್ದಾರೆ.
IIM, IIT 65 ವಿದ್ಯಾರ್ಥಿ, ಶಿಕ್ಷಕರಿಗೆ ಕೊರೋನಾ ಪಾಸಿಟಿವ್
ಪಾಸಿಟಿವಿಟಿ 5 ತಿಂಗಳ ಗರಿಷ್ಠ:
1.06 ಲಕ್ಷ ಕೊರೋನಾ ಪರೀಕ್ಷೆ ನಡೆದಿದ್ದು ಶೇ. 2.89ರ ಪಾಸಿಟಿವಿಟಿ ದರ ದಾಖಲಾಗಿದೆ. ಇದು ಕಳೆದ ನವೆಂಬರ್ 4ರಂದು ದಾಖಲಾಗಿದ್ದ ಶೇ.3.29ರ ಬಳಿಕದ ಗರಿಷ್ಠ ಪಾಸಿಟಿವಿಟಿ ದರವಾಗಿದೆ. ಹೊಸ ಪ್ರಕರಣಗಳ ಸಂಖ್ಯೆ 3 ಸಾವಿರ ದಾಟಿರುವುದು ಒಂದೆಡೆಯಾದರೆ ಪಾಸಿಟಿವಿಟಿ ದರ ಕೂಡ ಶೇ.3ರ ಸಮೀಪ ಬಂದಿದೆ.
ಭಾನುವಾರ 12 ಮಂದಿ ಮೃತರಾಗಿದ್ದು ಈವರೆಗೆ ಸೋಂಕಿನಿಂದ ಪ್ರಾಣ ಕಳೆದುಕೊಂಡವರ ಸಂಖ್ಯೆ 12,504 ತಲುಪಿದೆ. ಈವರೆಗೆ ಒಟ್ಟು 9.87 ಲಕ್ಷ ಮಂದಿ ಸೋಂಕಿನಿಂದ ಬಾಧಿತರಾಗಿದ್ದು 9.51 ಲಕ್ಷ ಮಂದಿ ಗುಣಮುಖರಾಗಿದ್ದಾರೆ.
ಬೆಂಗಳೂರು ನಗರದಲ್ಲಿ 7 ಮಂದಿ, ಮೈಸೂರಲ್ಲಿ ಇಬ್ಬರು ಸೇರಿದಂತೆ ಉಡುಪಿ, ತುಮಕೂರು ಮತ್ತು ಕಲಬುರಗಿಯಲ್ಲಿ ತಲಾ ಒಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.
1ರಿಂದ 9ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ನೀಡಿದ ರಾಜ್ಯ ಸರ್ಕಾರ
ಬೆಂಗಳೂರಲ್ಲೇ 2000+:
ಬೆಂಗಳೂರು ನಗರದಲ್ಲಿ 2004 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಕಲಬುರಗಿ 159, ಉಡುಪಿ 115, ಮೈಸೂರು 114 ಹೊಸ ಪ್ರಕರಣ ವರದಿಯಾಗಿದೆ. ಉಳಿದಂತೆ ದಕ್ಷಿಣ ಕನ್ನಡ 68, ಹಾಸನ 65, ಬೀದರ್ 63, ಧಾರವಾಡ 60, ತುಮಕೂರು 59, ಬಳ್ಳಾರಿ 53, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 46 ಪ್ರಕರಣ ಪತ್ತೆಯಾಗಿದೆ. ಎಂಟು ಜಿಲ್ಲೆಯಲ್ಲಿ ಮಾತ್ರ ಒಂದಂಕಿಯಲ್ಲಿ ಹೊಸ ಪ್ರಕರಣ ವರದಿಯಾಗಿದೆ.
