ಬೆಂಗಳೂರು [ಡಿ.24]:  ಪೌರತ್ವ ತಿದ್ದುಪಡಿ ಕಾಯ್ದೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಅದರ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ನೀಡಬೇಕು ಎಂಬ ಉದ್ದೇಶದಿಂದ ರಾಜ್ಯ ಬಿಜೆಪಿಯು ಸುಮಾರು ಮೂರ್ನಾಲ್ಕು ಸಾವಿರದಷ್ಟುವಿವಿಧ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರಿಗೆ ಹಂತ ಹಂತವಾಗಿ ತರಬೇತಿ ನೀಡಲು ಮುಂದಾಗಿದೆ.

ಈ ಹಿನ್ನೆಲೆಯಲ್ಲಿ ಮಂಗಳವಾರ ಪಕ್ಷದ ಕಚೇರಿಯಲ್ಲಿ ಮುಂದಿನ ಯೋಜನೆ ರೂಪಿಸುವ ಸಂಬಂಧ ಸಭೆ ಕರೆಯಲಾಗಿದ್ದು, ವಿವಿಧ ಜಿಲ್ಲೆಗಳ ಆಯ್ದ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ಜಿಲ್ಲಾ ಮಟ್ಟದ ಮುಖಂಡರಿಗೆ ತರಬೇತಿ ನೀಡಿ ರೂಪರೇಷೆ ಸಿದ್ಧಪಡಿಸಿದ ನಂತರ ಮುಂದಿನ ಹಂತದ ಕಾರ್ಯಕರ್ತರಿಗೆ ತರಬೇತಿ ನೀಡಲಾಗುತ್ತದೆ. ಜೊತೆಗೆ ವಿವಿಧ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಸಭೆಗಳನ್ನು ನಡೆಸುವ ಬಗ್ಗೆಯೂ ಚರ್ಚೆ ನಡೆಸಲು ಉದ್ದೇಶಿಸಲಾಗಿದೆ.

ಕಳೆದ ಶನಿವಾರ ಜನಪ್ರತಿನಿಧಿಗಳಿಗಾಗಿ ಕಾರ್ಯಾಗಾರವೊಂದನ್ನು ಆಯೋಜಿಸಲಾಗಿತ್ತು. ಅಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ಸಮಗ್ರ ವಿವರಗಳನ್ನು ಒಳಗೊಂಡ ಪುಸ್ತಿಕೆಯನ್ನೂ ಬಿಡುಗಡೆಗೊಳಿಸಲಾಗಿತ್ತು. ಆ ಪುಸ್ತಿಕೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಮುದ್ರಿಸಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ವಿತರಿಸಲಾಗುತ್ತದೆ. ಆ ಕಾರ್ಯಕರ್ತರು ಅದನ್ನು ಅಧ್ಯಯನ ಮಾಡಿ ಜನತೆಯ ಅನುಮಾನಗಳಿಗೆ ಉತ್ತರಿಸಲಿದ್ದಾರೆ.

ಬಿಜೆಪಿಗೆ ಮತ್ತೊಂದು ಮುಖಭಂಗ; NRCಗೆ ಪಕ್ಷದ ಸಿಎಂರಿಂದಲೇ ಅಪಸ್ವರ!...

ಜತೆಗೆ ಪ್ರತಿ ಗ್ರಾಮಗಳಲ್ಲೂ, ನಗರದ ವಾರ್ಡ್‌ಗಳಲ್ಲೂ ಸಭೆ ಸಮಾರಂಭಗಳನ್ನು ಆಯೋಜಿಸುವ ಮೂಲಕ ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ವಿವರಣೆ ನೀಡಲು ಉದ್ದೇಶಿಸಲಾಗಿದೆ.

ಈ ಬಗ್ಗೆ  ಮಾತನಾಡಿದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌, ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಕೆಲವರಲ್ಲಿ ಗೊಂದಲಗಳಿವೆ. ಅದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ. ಹೀಗಾಗಿ, ಪಕ್ಷದ ವತಿಯಿಂದ ಮುಖಂಡರು ಹಾಗೂ ಕಾರ್ಯಕರ್ತರಿಗೆ ತರಬೇತಿ ನೀಡಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಿಂದ ಗ್ರಾಮ ಕೇಂದ್ರಗಳವರೆಗೂ ಸಮರ್ಪಕ ಮಾಹಿತಿ ನೀಡಿ ಗೊಂದಲ ಬಗೆಹರಿಸುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.