ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರಕಾರದ ಬುಡ ಅಲ್ಲಾಡುತ್ತಿದೆ. ಏನು ನಡೆಯುತ್ತಿದೆ, ನಡೆಯುತ್ತಿಲ್ಲ ಎಂಬುವುದು ಅರ್ಥವಾಗುತ್ತಿಲ್ಲ. ಅಂಥದ್ರಲ್ಲಿ ಮೈತ್ರಿ ಸರಕಾರದ 30 ಶಾಸಕರು ರಾಜೀನಾಮೆ ನೀಡುತ್ತಿದ್ದಾರೆಂದು ಉಮೇಶ್ ಕತ್ತಿ ಹೇಳುತ್ತಿದ್ದಾರೆ.

ಹುಕ್ಕೇರಿ: ಸಮ್ಮಿಶ್ರ ಸರ್ಕಾರದ ಅಳಿವು- ಉಳಿವಿನ ಬಗ್ಗೆ ಗೊಂದಲಗಳು ಮುಂದುವರಿದಿರುವ ವೇಳೆಯಲ್ಲೇ, ಕಾಂಗ್ರೆಸ್‌ ಮತ್ತು ಜೆಡಿಎಸ್‌ನ 30 ಶಾಸಕರು ರಾಜೀನಾಮೆ ನೀಡಲಿರುವ ಮಾಹಿತಿಯಿದೆ ಎಂದು ಬಿಜೆಪಿ ಮುಖಂಡ, ಶಾಸಕ ಉಮೇಶ ಕತ್ತಿ ಹೊಸ ಬಾಂಬ್‌ ಸಿಡಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಯಾವುದೇ ಆಪರೇಷನ್‌ ಕಮಲ ನಡೆಸುವ ಅಗತ್ಯವಿಲ್ಲ. ಕಾಂಗ್ರೆಸ್‌-ಜೆಡಿಎಸ್‌ ಒಳ ಜಗಳವನ್ನು ಆಪರೇಷನ್‌ ಕಮಲ ಎಂದು ಬಿಂಬಿಸಲಾಗುತ್ತಿದೆ. ಈ ಆಂತರಿಕ ಕಚ್ಚಾಟದಿಂದಲೇ ಸಮ್ಮಿಶ್ರ ಸರ್ಕಾರ ಪತನವಾಗಲಿದೆ ಎಂದು ಭವಿಷ್ಯ ನುಡಿದರು.

ಆಪರೇಷನ್ ಕಮಲದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಿಜೆಪಿ ಯಾವುದೇ ಆಪರೇಷನ್‌ ಕಮಲ ಮಾಡುತ್ತಿಲ್ಲ. ಆದರೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ 30 ಶಾಸಕರು ರಾಜೀನಾಮೆ ನೀಡಲಿರುವ ಮಾಹಿತಿ ಸಿಕ್ಕಿದೆ. ಹಾಗಾಗಿ ಸರ್ಕಾರ ಪತನವಾದರೆ ಬಿಜೆಪಿ ಹೊಸ ಸರ್ಕಾರ ರಚಿಸಲಿದೆ. ನಾವು ಮಠ ಕಟ್ಟಿಲ್ಲ. ರಾಜಕಾರಣ ಮಾಡಲು ಬಂದಿದ್ದೇವೆ ಎಂದು ಅವರು ಹೇಳಿದರು.

ತಮಗೆ ಆಪರೇಷನ್‌ ಕಮಲದ ಜವಾಬ್ದಾರಿ ನೀಡಿಲ್ಲ. ಒಂದು ವೇಳೆ ಪಕ್ಷದ ವರಿಷ್ಠರು ಈ ಕರ್ತವ್ಯ ಮಾಡಲು ತಿಳಿಸಿದರೆ ಒಪ್ಪಿಕೊಳ್ಳುವೆ. ಕಾಂಗ್ರೆಸ್‌ನಿಂದ ಬಿಜೆಪಿಗೆ ಬರುವ ಶಾಸಕರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಲಾಗುವುದು ಎಂದರು. ಇದೇ ವೇಳೆ ಬಿಜೆಪಿ ರೆಸಾರ್ಟ್‌ ರಾಜಕಾರಣ ಮಾಡುತ್ತಿಲ್ಲ. ಸೆ.18ರಂದು ಶಾಸಕಾಂಗ ಸಭೆ ಕರೆದಿದ್ದು ತಾವು ಈ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಸಚಿವ ರಮೇಶ ಜಾರಕಿಹೊಳಿ, ಸಂಸದ ಪ್ರಕಾಶ ಹುಕ್ಕೇರಿ, ಶಾಸಕ ಸತೀಶ ಜಾರಕಿಹೊಳಿ ಬಿಜೆಪಿಗೆ ಬರುವುದಾದರೆ ತಮ್ಮ ಅಭ್ಯಂತರವೇನಿಲ್ಲ ಎಂದು ಹೇಳಿದರು.