ಚರ್ಮಗಂಟು ಪರಿಹಾರಕ್ಕೆ 30 ಕೋಟಿ: ಸಚಿವ ಪ್ರಭು ಚವ್ಹಾಣ್
ರಾಜ್ಯದಲ್ಲಿ ಚರ್ಮಗಂಟು ರೋಗವನ್ನು ಹತೋಟಿಗೆ ತರಲಾಗುತ್ತಿದ್ದರೂ 17 ಸಾವಿರ ಜಾನುವಾರುಗಳು ಮೃತಪಟ್ಟಿವೆ. ಮೃತಪಟ್ಟ ಜಾನುವಾರುಗಳ ಮಾಲೀಕರ ಅರ್ಥಿಕ ಸ್ಥಿತಿಯನ್ನು ಅರಿತ ಸಿಎಂ ಬೊಮ್ಮಾಯಿ 30 ಕೋಟಿ ರು. ಅನುದಾನ ಬಿಡುಗಡೆ ಮಾಡಿದ್ದಾರೆ: ಚವ್ಹಾಣ್

ಬೆಂಗಳೂರು(ಡಿ.13): ಚರ್ಮಗಂಟು ರೋಗದಿಂದ ಜಾನುವಾರುಗಳು ಮೃತಪಟ್ಟಪ್ರಕರಣದಲ್ಲಿ ಮಾಲೀಕರುಗಳಿಗೆ ಪರಿಹಾರ ನೀಡಲು 30 ಕೋಟಿ ರು. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ.
ರಾಜ್ಯದಲ್ಲಿ ಚರ್ಮಗಂಟು ರೋಗವನ್ನು ಹತೋಟಿಗೆ ತರಲಾಗುತ್ತಿದ್ದರೂ 17 ಸಾವಿರ ಜಾನುವಾರುಗಳು ಮೃತಪಟ್ಟಿವೆ. ಮೃತಪಟ್ಟ ಜಾನುವಾರುಗಳ ಮಾಲೀಕರ ಅರ್ಥಿಕ ಸ್ಥಿತಿಯನ್ನು ಅರಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 30 ಕೋಟಿ ರು. ಅನುದಾನ ಬಿಡುಗಡೆ ಮಾಡಿದ್ದಾರೆ. ಈ ಹಿಂದೆ ಎರಡು ಕೋಟಿ ರು. ಅನುದಾನ ನೀಡಲಾಗಿದೆ. ನಮ್ಮ ಸರ್ಕಾರ ಸದಾ ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸಲಿದೆ ಎನ್ನುವುದನ್ನು ಸಾರಿದೆ. ಜಾನುವಾರುಗಳ ಆರೋಗ್ಯ ರಕ್ಷಣೆಯಲ್ಲಿ ಸರ್ಕಾರ ಸಕ್ರಿಯವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Chamarajanagar: ಚರ್ಮಗಂಟು ರೋಗಕ್ಕೆ 26 ಜಾನುವಾರು ಬಲಿ
ರೋಗದಿಂದ ಉಂಟಾಗುವ ಜಾನುವಾರುಗಳ ಮರಣದಿಂದ ರೈತರು/ಜಾನುವಾರು ಮಾಲೀಕರಿಗೆ ಆಗುವ ನಷ್ಟವನ್ನು ಭರಿಸಲು ಕಳೆದ ಆ.1ರಿಂದ ಅನ್ವಯವಾಗುವಂತೆ ಪ್ರತಿ ಹೈನುರಾಸುಗಳಿಗೆ ಗರಿಷ್ಠ 20 ಸಾವಿರ ರು., ಎತ್ತುಗಳಿಗೆ 30 ಸಾವಿರ ರು. ಮತ್ತು ಪ್ರತಿ ಕರುವಿಗೆ ಐದು ಸಾವಿರ ರು. ಪರಿಹಾರ ನೀಡಲಾಗುತ್ತಿದೆ. ರಾಜ್ಯದಲ್ಲಿ ಜಾನುವಾರುಗಳ ಚರ್ಮಗಂಟು ರೋಗವನ್ನು ಹತೋಟಿಗೆ ತರಲಾಗುತ್ತಿದೆ. ರಾಜ್ಯಾದ್ಯಂತ 53 ಲಕ್ಷಕ್ಕೂ ಹೆಚ್ಚಿನ ರಾಸುಗಳಿಗೆ ಲಸಿಕೆ ನೀಡಲಾಗಿದ್ದು, ಲಭ್ಯವಿರುವ 40 ಲಕ್ಷ ಡೋಸ್ ಲಸಿಕೆಯನ್ನು ಜಾನುವಾರುಗಳಿಗೆ ನೀಡಲಾಗುತ್ತಿದೆ. ರಾಜ್ಯದಲ್ಲಿ ಈವರೆಗೆ ಎರಡು ಲಕ್ಷ ರಾಸುಗಳು ಚರ್ಮಗಂಟು ರೋಗದಿಂದ ಬಳಲುತ್ತಿದ್ದು, ಈ ಪೈಕಿ 1.50 ಲಕ್ಷ ರಾಸುಗಳು ಚೇತರಿಕೆಯಾಗಿವೆ. ಇನ್ನುಳಿದ ರಾಸುಗಳಿಗೆ ಸರ್ಕಾರದಿಂದ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.