ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಮೊದಲ ವಿಧಾನಸಭಾ ಅಧಿವೇಶನ ಸೋಮವಾರದಿಂದ ಶುರುವಾಗಲಿದೆ. ಮೇ 22ರಿಂದ 24 ರವರೆಗೆ ಮೂರು ದಿನಗಳ ಕಾಲ ನಡೆಯಲಿರುವ ಅಧಿವೇಶನದಲ್ಲಿ ಮೊದಲ ಎರಡು ದಿನ ನೂತನ ಶಾಸಕರ ಪ್ರಮಾಣವಚನ ಹಾಗೂ ಕೊನೆಯ ದಿನ ಹೊಸ ಸಭಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಬೆಂಗಳೂರು (ಮೇ.22) : ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಮೊದಲ ವಿಧಾನಸಭಾ ಅಧಿವೇಶನ ಸೋಮವಾರದಿಂದ ಶುರುವಾಗಲಿದೆ. ಮೇ 22ರಿಂದ 24 ರವರೆಗೆ ಮೂರು ದಿನಗಳ ಕಾಲ ನಡೆಯಲಿರುವ ಅಧಿವೇಶನದಲ್ಲಿ ಮೊದಲ ಎರಡು ದಿನ ನೂತನ ಶಾಸಕರ ಪ್ರಮಾಣವಚನ ಹಾಗೂ ಕೊನೆಯ ದಿನ ಹೊಸ ಸಭಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಶನಿವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅಧಿವೇಶನ ಕರೆಯಲು ಹಾಗೂ ಸಭಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಲು ತೀರ್ಮಾನಿಸಿದ್ದು, ಈ ಸಂಬಂಧ ಅಧಿಕೃತವಾಗಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ
ಇಂದಿನಿಂದ ದೇಶಾದ್ಯಂತ ನೋಟು ಬದಲಾವಣೆಗೆ ಅವಕಾಶ
ಸೋಮವಾರ ಬೆಳಗ್ಗೆ 11 ಗಂಟೆಗೆ ಅಧಿವೇಶನ ಆರಂಭವಾಗಲಿದೆ. ನೂತನ ಸದಸ್ಯರಿಗೆ ಪ್ರಮಾಣವಚನ ಬೋಧಿಸಲು ಹಿರಿಯ ಸದಸ್ಯ ಆರ್.ವಿ.ದೇಶಪಾಂಡೆ ಅವರು ಹಂಗಾಮಿ ಸಭಾಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ಪ್ರಮಾಣವಚನ ಸ್ವೀಕರಿಸಿದ ನಂತರ ನೂತನ ಸದಸ್ಯರಿಗೆ ಸಂವಿಧಾನ, ವಿಧಾನಸಭೆಯ ನಿಯಮಾವಳಿಗಳ ಪುಸ್ತಕ ಇರುವ ಬ್ಯಾಗ್‌ಗಳನ್ನು ನೀಡಲಾಗುವುದು. ಈ ಬಗ್ಗೆ ಹಿಂದಿನ ಸಭಾಧ್ಯಕ್ಷರ ಅನುಮತಿ ಮೇರೆಗೆ ಲಿಡ್ಕರ್ ಸಂಸ್ಥೆಯಿಂದ ಬ್ಯಾಗ್‌ಗಳನ್ನು ಸಚಿವಾಲಯ ಖರೀದಿಸಿದೆ.
ಅಧಿವೇಶನದ ಹಿನ್ನೆಲೆಯಲ್ಲಿ ವಿಧಾನಸಭೆ, ವಿಧಾನಸಭೆಯ ಮೊಗಸಾಲೆ ಹಾಗೂ ಸುತ್ತಮುತ್ತ ಸಿಬ್ಬಂದಿಯು ಸ್ವಚ್ಛಗೊಳಿಸಿದ್ದು, ಈಗಾಗಲೇ ಎಲ್ಲಾ ರೀತಿಯ ಸಿದ್ಧತೆ ಪೂರ್ಣಗೊಳಿಸಲಾಗಿದೆ.
16ನೇ ವಿಧಾನಸಭೆಗೆ ನೂತನವಾಗಿ ಆಯ್ಕೆಯಾಗಿರುವ ಎಲ್ಲ ಸದಸ್ಯರಿಗೆ ಅಧಿವೇಶನದ ಬಗ್ಗೆ ದೂರವಾಣಿ ಸೇರಿದಂತೆ ಟೆಲಿಗ್ರಾಂ, ಇ-ಮೇಲ್, ವಾಟ್ಸಪ್, ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡುವ ಕಾರ್ಯವನ್ನು ಸಚಿವಾಲಯದ ಹಿರಿಯ ಅಧಿಕಾರಿಗಳು ಈಗಾಗಲೇ ಮಾಡಿದ್ದಾರೆ.
ಸ್ಪೀಕರ್ ಆಯ್ಕೆ:
ಸದಸ್ಯರ ಪ್ರಮಾಣವಚನ ಸ್ವೀಕಾರದ ಜತೆಗೆ ಸ್ಪೀಕರ್ ಆಯ್ಕೆ ಹಿನ್ನೆಲೆಯಲ್ಲಿ ಅಧಿವೇಶನ ಮಹತ್ವ ಪಡೆದುಕೊಂಡಿದೆ. ಹಿರಿಯ ನಾಯಕರು ಸ್ಪೀಕರ್ ಸ್ಥಾನದ ಬದಲಿಗೆ ಸಚಿವ ಸಂಪುಟ ಸೇರಲು ಉತ್ಸುಕರಿದ್ದಾರೆ. ಇದರ ನಡುವೆಯೇ ಆರ್.ವಿ.ದೇಶಪಾಂಡೆ, ಎಚ್.ಕೆ.ಪಾಟೀಲ್ ಹಾಗೂ ಟಿ.ಬಿ.ಜಯಚಂದ್ರ ಅವರ ಹೆಸರು ಸ್ಪೀಕರ್ ಸ್ಥಾನಕ್ಕೆ ಕೇಳಿ ಬರುತ್ತಿದೆ. ಅಂತಿಮವಾಗಿ ಹೈಕಮಾಂಡ್ ಈ ಬಗ್ಗೆ ನಿರ್ಧರಿಸಲಿದ್ದು, ಯಾರು ಸ್ಪೀಕರ್ ಆಗಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
ಅಧಿವೇಶನದ ನಂತರ ಸಂಪುಟ ವಿಸ್ತರಣೆ: ಡಿಸಿಎಂ ಡಿ.ಕೆ.ಶಿವಕುಮಾರ್
ಸೋಮವಾರದಿಂದ ನಡೆಯುವ ಅಧಿವೇಶನ ಸಿದ್ಧತೆಗೆ ಸಚಿವಾಲಯದ ಸಿಬ್ಬಂದಿಗಳು ಭಾನುವಾರ ಸಹ ಕಚೇರಿಗೆ ಆಗಮಿಸಿ ಕೆಲಸ ಮಾಡಿದ್ದಾರೆ. ಪ್ರಮಾಣವಚನ ಬೋಧನೆಗೆ ಸಂಬಂಧಿಸಿದಂತೆ ಪ್ರತಿ ಸದಸ್ಯರಿಗೆ ಪ್ರತ್ಯೇಕ ಫೈಲ್ ಸಿದ್ಧಪಡಿಸುವುದು ಸೇರಿದಂತೆ ಎಲ್ಲ ಸಿದ್ಧತೆ ಮಾಡಿದರು.
