ಅಧಿವೇಶನದ ನಂತರ ಸಂಪುಟ ವಿಸ್ತರಣೆ: ಡಿಸಿಎಂ ಡಿ.ಕೆ.ಶಿವಕುಮಾರ್
ಸೋಮವಾರದಿಂದ ಮೂರು ದಿನಗಳ ಕಾಲ ನಡೆಯುವ ತುರ್ತು ವಿಧಾನಸಭಾ ಅಧಿವೇಶನದ ನಂತರ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರು (ಮೇ.22): ಸೋಮವಾರದಿಂದ ಮೂರು ದಿನಗಳ ಕಾಲ ನಡೆಯುವ ತುರ್ತು ವಿಧಾನಸಭಾ ಅಧಿವೇಶನದ ನಂತರ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಆಗೇ ಆಗುತ್ತದೆ. ತುರ್ತು ಅಧಿವೇಶನದಲ್ಲಿ ಎಲ್ಲ ಹೊಸ ಶಾಸಕರು ಪ್ರತಿಜ್ಞಾ ವಿಧಿ ಸ್ವೀಕರಿಸಲಿದ್ದಾರೆ. ಇದಾದ ಬಳಿಕ ಮುಖ್ಯಮಂತ್ರಿಗಳು ದೆಹಲಿಗೆ ಹೋಗಿ ವರಿಷ್ಠರೊಂದಿಗೆ ಚರ್ಚಿಸಿ ಸಂಪುಟ ವಿಸ್ತರಣೆಯ ಬಗ್ಗೆ ಹಾಗೂ ಸಚಿವರಿಗೆ ಖಾತೆಗಳ ಹಂಚಿಕೆಯ ಬಗ್ಗೆಯೂ ತೀರ್ಮಾನ ಕೈಗೊಳ್ಳುತ್ತಾರೆ ಎಂದರು.
ಅದಕ್ಕೆ ಮೊದಲು ಹೊಸದಾಗಿ ಆಯ್ಕೆಯಾಗಿರುವ ಎಲ್ಲ ಶಾಸಕರ ಪ್ರತಿಜ್ಞಾ ವಿಧಿ ಸ್ವೀಕಾರ ಆಗಬೇಕು. ಕಾನೂನು ಪ್ರಕಾರ ಮೇ 24ರೊಳಗೆ ಹಳೆಯ ಸರ್ಕಾರ ವಿಸರ್ಜನೆ ಆಗಬೇಕು. ಹಾಗಾಗಿ ಮೇ 22ರಿಂದ 24ರವರೆಗೆ ನಡೆಯುವ ತುರ್ತು ವಿಧಾನಸಭಾ ಅಧಿವೇಶನದಲ್ಲಿ ಈ ಕಾರ್ಯ ಆಗಲಿದೆ. ರಾಜ್ಯಪಾಲರು ಮೇ 25ಕ್ಕೆ ತಾವು ರಾಜ್ಯದಲ್ಲಿ ಇರುವುದಿಲ್ಲ ಎಂದು ಹೇಳಿದ್ದಾರೆ. ಹಾಗಾಗಿ ಸೋಮವಾರದಿಂದಲೇ ತುರ್ತು ಅಧಿವೇಶನ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಡಿ.ಕೆ.ಶಿವಕುಮಾರ್ ಡಿಸಿಎಂ: ರಾಮನಗರ ಜಿಲ್ಲೆಯಲ್ಲಿ ಮೂಡಿದ ಅಭಿವೃದ್ಧಿ ನಿರೀಕ್ಷೆಗಳು
ಮೊದಲ ದಿನ ಡಿಸಿಎಂ ಡಿಕೆಶಿ ಫುಲ್ ಬ್ಯುಸಿ: ನೂತನ ಕಾಂಗ್ರೆಸ್ ಸರ್ಕಾರದ ಉಪಮುಖ್ಯಮಂತ್ರಿಯಾಗಿ ಶನಿವಾರ ಅಧಿಕಾರ ವಹಿಸಿಕೊಂಡಿರುವ ಡಿ.ಕೆ.ಶಿವಕುಮಾರ್ ಅವರು ಭಾನುವಾರ ಇಡೀ ದಿನ ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ತೊಡಗಿದ್ದರು. ಬೆಳಗ್ಗೆ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪುಣ್ಯಸ್ಮರಣೆ ಸಮಾರಂಭದಲ್ಲಿ ಪಾಲ್ಗೊಂಡ ಅವರು ಬಳಿಕ ಕೆಲ ಹೊತ್ತು ಅಲ್ಲೇ ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿದರು.
ಬಳಿಕ ಅಲ್ಲಿಂದ ತಮ್ಮ ನಿವಾಸಕ್ಕೆ ತೆರಳಿ ಕುಟುಂಬ ಸಮೇತರಾಗಿ ತುಮಕೂರು ಜಿಲ್ಲೆ ನೊಣವಿನಕೆರೆಯ ತಮ್ಮ ಆರಾಧ್ಯದೈವ ಗಂಗಾಧರ ಅಜ್ಜಯ್ಯನ ಮಠಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಎಚ್‌ಎಎಲ್ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಶ್ರೀಮಠಕ್ಕೆ ತೆರಳಿ ಮತ್ತೆ ಪೂಜೆ ಸಲ್ಲಿಸಿ ಸಂಜೆ ವಾಪಸ್ಸಾದರು.
ಹುಣಸೂರು ತಾಲೂಕಿನ ಅಭಿವೃದ್ಧಿಯೇ ನನ್ನ ಗುರಿ: ಶಾಸಕ ಹರೀಶ್ ಗೌಡ
ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕೆ.ಆರ್.ವೃತ್ತದ ಬಳಿ ಜಲಾವೃತಗೊಂಡಿದ್ದ ಅಂಡರ್‌ಪಾಸ್‌ನಲ್ಲಿ ಕಾರು ಮುಳುಗಿ ಯುವತಿಯೊಬ್ಬರು ಸಾವನ್ನಪ್ಪಿದ ಘಟನೆ ಮಾಹಿತಿ ತಿಳಿದು ನಗರಕ್ಕೆ ವಾಪಸ್ಸಾದ ಕೂಡಲೇ ಸಚಿವ ರಾಮಲಿಂಗಾರೆಡ್ಡಿ ಅವರೊಂದಿಗೆ ಡಿ.ಕೆ.ಶಿವಕುಮಾರ್ ಅವರು ಮಳೆ ಅನಾಹುತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎಲ್ಲ ಅಂಡರ್‌ಪಾಸ್‌ಗಳಲ್ಲಿ ನೀರು ಸರಾಗವಾಗಿ ಹರಿದುಹೋಗುವಂತೆ ಕ್ರಮ ವಹಿಸಲು ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿದರು. ರಸ್ತೆಯಲ್ಲಿ ಬಿದ್ದಿರುವ ಮರಗಳನ್ನು ಆದಷ್ಟುಬೇಗ ತೆರವು ಮಾಡಿ ವಾಹನಗಳ ಸುಗಮ ಸಂಚಾರಕ್ಕೆ ಕ್ರಮ ವಹಿಸಲು ಆದೇಶಿಸಿದರು.