Mysore Bomb Blast| ಮೈಸೂರು ಸ್ಫೋಟ, ಉಗ್ರರಿಗೆ ಜೈಲು ಶಿಕ್ಷೆ!
* ಮೈಸೂರು ಸ್ಫೋಟ ಉಗ್ರರಿಗೆ ಜೈಲು
* ಇಬ್ಬರಿಗೆ 10, ಒಬ್ಬನಿಗೆ 5 ವರ್ಷ ಶಿಕ್ಷೆ
* 5 ವರ್ಷದ ಹಿಂದಿನ ಬಾಂಬ್ ಸ್ಫೋಟ
* ‘ಕೋರ್ಟ್ ಬಾಂಬ್’ ತೀರ್ಪು ಪ್ರಕಟ
ಬೆಂಗಳೂರು(ಅ.12): ಐದು ವರ್ಷಗಳ ಹಿಂದೆ ಮೈಸೂರು ಜಿಲ್ಲಾ ನ್ಯಾಯಾಲಯ ಆವರಣದ(Local Court Complex) ಶೌಚಾಲಯದಲ್ಲಿ ಸಂಭವಿಸಿದ್ದ ಬಾಂಬ್ ಸ್ಫೋಟ(Bomb Blast) ಪ್ರಕರಣ ಸಂಬಂಧ ತಮಿಳುನಾಡು(Tamil nadu) ಮೂಲದ ಇಬ್ಬರು ಉಗ್ರರಿಗೆ ದಂಡ ಸಮೇತ ಗರಿಷ್ಠ ಹತ್ತು ವರ್ಷ ಜೈಲು ಶಿಕ್ಷೆ ಹಾಗೂ ಮತ್ತೊಬ್ಬ ಉಗ್ರನಿಗೆ ಗರಿಷ್ಠ ಐದು ವರ್ಷ ಜೈಲು ಶಿಕ್ಷೆ ವಿಧಿಸಿ ಎನ್‌ಐಎ (National Investigation Agency) ವಿಶೇಷ ನ್ಯಾಯಾಲಯ ಸೋಮವಾರ ತೀರ್ಪು ನೀಡಿದೆ.
Mysuru ದಸರಾ ಬಳಿಕ ಮೈಸೂರು ಅಭಿವೃದ್ಧಿ, ಟೂರಿಸಂ ಪ್ಯಾಕೇಜ್ ಬಗ್ಗೆ ಚರ್ಚೆ
ಪ್ರಕರಣದ ವಿಚಾರಣೆ ನಡೆಸಿದ ಎನ್‌ಐಎ(NIA) ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕಸನಪ್ಪ ನಾಯ್ಕ್ ಅವರು ಅಪರಾಧಿಗಳಾದ ನೈನರ್ ಅಬ್ಬಾಸ್ ಅಲಿ(Nainar Abbas Ali alias Library Abbas) ಮತ್ತು ಎಸ್. ದಾವೂದ್ ಸುಲೇಮಾನ್‌ಗೆ ಗರಿಷ್ಠ ತಲಾ ಹತ್ತು ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ. ಇದರಲ್ಲಿ ಏಳು ವರ್ಷ ಕಠಿಣ ಮತ್ತು ಮೂರು ವರ್ಷ ಸಾಧಾರಣೆ ಸಜೆ ಇದೆ. ಮತ್ತೊಬ್ಬ ಅಪರಾಧಿ ಎಂ.ಸಂಸುಮ್ ಕರೀಂ ರಾಜಗೆ(M Samson Karim Raja) ಗರಿಷ್ಠ ಐದು ವರ್ಷ ಸಾಧಾರಣ ಜೈಲು ಶಿಕ್ಷೆ ವಿಧಿಸಿದ್ದಾರೆ.
ಭಾರತೀಯ ದಂಡ ಸಂಹಿತೆ(IPC Section), ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ, ಸ್ಫೋಟಕ ವಸ್ತು ಕಾಯ್ದೆ ಮತ್ತು ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯ್ದೆಯ ವಿವಿಧ ಸೆಕ್ಷನ್‌ನಲ್ಲಿ ಈ ಮೂವರನ್ನು ಅಪರಾಧಿಗಳು ಎಂದು ತೀರ್ಮಾನಿಸಿ ಎನ್‌ಐಎ ವಿಶೇಷ ನ್ಯಾಯಾಲಯವು 2021ರ ಅ.8ರಂದು ಆದೇಶಿಸಿತ್ತು. ಶಿಕ್ಷೆ ಪ್ರಮಾಣವನ್ನು ಸೋಮವಾರ ಪ್ರಕಟಿಸಲಾಗಿದೆ.
ಈ ಮಧ್ಯೆ ಅಪರಾಧಿ ಎಸ್.ದಾವೂದ್ ಸುಲೇಮಾನ್‌ನ ತಂದೆ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದು, ಮಗನನ್ನು ಕಾಣಲು ಪರಿತಪಿಸುತ್ತಿದ್ದಾರೆ. ಹೀಗಾಗಿ, ತಂದೆಯನ್ನು ಕಾಣಲು ಸುಲೇಮಾನ್‌ಗೆ ಅವಕಾಶ ನೀಡಬೇಕು ಎಂದು ಕೋರಿ ಆತನ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ಅದನ್ನು ಪುರಸ್ಕರಿಸಲು ನಿರಾಕರಿಸಿದ ನ್ಯಾಯಾಧೀಶರು, ಈಗಾಗಲೇ ಶಿಕ್ಷೆ ಪ್ರಮಾಣ ಘೋಷಿಸಿರುವುರಿಂದ ಸುಲೇಮಾನ್ ಅರ್ಜಿ ಮಾನ್ಯ ಮಾಡಲು ಈ ನ್ಯಾಯಾಲಯಕ್ಕೆ ಅಧಿಕಾರ ಇಲ್ಲ. ಆ ಮನವಿಯನ್ನು ಜೈಲಧಿಕಾರಿಗಳು ಪರಿಗಣಿಸಬಹುದು ಎಂದು ಆದೇಶದಲ್ಲಿ ನ್ಯಾಯಾಧೀಶರು ತಿಳಿಸಿದ್ದಾರೆ.
ಯಾರಿಗೆ ಎಷ್ಟು ಶಿಕ್ಷೆ?:
ಒಂದನೇ ಅಪರಾಧಿ ನೈನರ್ ಅಬ್ಬಾಸ್ ಅಲಿಗೆ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 120-ಬಿ, 465, 471, ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆಯ ಸೆಕ್ಷನ್ 16(1)(ಬಿ), 18(ಬಿ) 18, 20 ಮತ್ತು 23, ಸ್ಫೋಟಕ ವಸ್ತು ಕಾಯ್ದೆ-1908ರ ಸೆಕ್ಷನ್ 3, 4, 5 ಮತ್ತು ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯ್ದೆ-1984ರಡಿ ಸೆಕ್ಷನ್ 4ರಡಿಯಲ್ಲಿ ಒಟ್ಟಾರೆ 10 ವರ್ಷ ಜೈಲು (ಏಳು ವರ್ಷ ಕಠಿಣ, ಮೂರು ವರ್ಷ ಸಾಧಾರಣ) ಮತ್ತು ಒಟ್ಟಾರೆ 43 ಸಾವಿರ ರು. ದಂಡ.
ಮೈಸೂರು : ಗಮನಿಸಿ! ಹಲವೆಡೆ ವಾಹನ ಸಂಚಾರ -ಪಾರ್ಕಿಂಗ್ ನಿಷೇಧ
ಎರಡನೇ ಅಪರಾಧಿ ಸಂಸುಮ್ ಕರೀಂ ರಾಜಾಗೆ ಐಪಿಸಿ ಸೆಕ್ಷನ್ 120-ಬಿ, ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆಯ ಸೆಕ್ಷನ್ 16(1)(ಬಿ), 18, 20 ಮತ್ತು 23, ಸ್ಫೋಟಕ ವಸ್ತು ಕಾಯ್ದೆ-1908ರ ಸೆಕ್ಷನ್ 4(ಬಿ) ಹಾಗೂ 5, ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯ್ದೆ-1984ರಡಿ ಸೆಕ್ಷನ್ 4ಡಿ ಒಟ್ಟಾರೆ ಗರಿಷ್ಠ 5 ವರ್ಷ, ಒಟ್ಟಾರೆ 25 ಸಾವಿರ ರು. ದಂಡ.
ಮೂರನೇ ಅಪರಾಧಿ ಎಸ್. ದಾವೂದ್ ಸುಲೇಮಾನ್‌ಗೆ ಐಪಿಸಿ ಸೆಕ್ಷನ್ 120-ಬಿ, 465, 471, ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆಯ ಸೆಕ್ಷನ್ 16 (1)(ಬಿ), 18, 20 ಮತ್ತು 23, ಸ್ಫೋಟಕ ವಸ್ತು ಕಾಯ್ದೆ-1908ರ ಸೆಕ್ಷನ್ 3, 4, 5 ಮತ್ತು ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯ್ದೆ-1984ರಡಿ ಸೆಕ್ಷನ್ 4 ಅಡಿಯಲ್ಲಿ ಒಟ್ಟಾರೆ 10 ವರ್ಷ ಜೈಲು (ಏಳು ವರ್ಷ ಕಠಿಣ, ಮೂರು ವರ್ಷ ಸಾಧಾರಣ) ಮತ್ತು ಒಟ್ಟಾರೆ 38 ಸಾವಿರ ರು. ದಂಡ ವಿಧಿಸಲಾಗಿದೆ.
ಏಕ ಕಾಲಕ್ಕೆ ಈ ಎಲ್ಲಾ ಶಿಕ್ಷೆಗಳು ಜಾರಿಯಾಗುತ್ತವೆ. ತನಿಖೆ ಹಾಗೂ ವಿಚಾರಣೆ ಹಂತದಲ್ಲಿ ಅಪರಾಧಿಗಳು ಈಗಾಗಲೇ ಅನುಭವಿಸಿರುವ ಜೈಲು ಶಿಕ್ಷೆ ಪ್ರಮಾಣವನ್ನು ಈ ಶಿಕ್ಷೆ ಅವಧಿಯಿಂದ ಕಡಿತಗೊಳಿಸಲಾಗುತ್ತದೆ ಎಂದು ಆದೇಶದಲ್ಲಿ ನ್ಯಾಯಪೀಠ ತಿಳಿಸಿದೆ.
ಪ್ರಕರಣವೇನು?:
ಮೈಸೂರು ನಗರದ ಚಾಮರಾಜಪುರದಲ್ಲಿರುವ ಜಿಲ್ಲಾ ನ್ಯಾಯಾಲಯದ ಹಿಂಬದಿಯಲ್ಲಿರುವ ಸಾರ್ವಜನಿಕ ಶೌಚಾಲಯದಲ್ಲಿ 2016ರ ಆ.1ರಂದು ಬಾಂಬ್ ಸ್ಫೋಟವಾಗಿತ್ತು. ಅದೇ ದಿನ ಮೈಸೂರಿನ ಲಕ್ಷ್ಮೀಪುರ ಪೊಲೀಸ್ ಠಾಣೆಯಲ್ಲಿ ಅನಾಮಧೇಯ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ನಂತರ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಆದೇಶದ ಅನುಸಾರ ಎನ್‌ಐಎ ಪ್ರಕರಣದ ತನಿಖೆಯನ್ನು ಕೈಗತ್ತಿಕೊಂಡಿತ್ತು. ತಮಿಳುನಾಡು ಮೂಲದ ನೈನರ್ ಅಬ್ಬಾಸ್ ಅಲಿ, ಎಂ.ಸಂಸುಮ್ ಕರೀಂ ರಾಜ ಮತ್ತು ಎಸ್. ದಾವೂದ್ ಸುಲೇಮಾನ್ ಅವರನ್ನು ಎನ್‌ಐಐ ತನಿಖಾಧಿಕಾರಿಗಳು 2017 ನ.27ರಂದು ಬಂಧಿಸಿದ್ದರು. ಬಳಿಕ ತನಿಖೆ ಪೂರ್ಣಗೊಳಿಸಿ 2018ರ ಮೇ 25ರಂದು ಈ ಮೂವರ ವಿರುದ್ಧ ದೋಷಾರೋಪ ಪಟ್ಟಿಸಲ್ಲಿಸಿದ್ದರು. ಎನ್‌ಐಎ ವಿಶೇಷ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು 2021ರ ಸೆ.29ರಂದು ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿತ್ತು.
ಯಾರಿಗೆ ಎಷ್ಟು ಶಿಕ್ಷೆ?
1. ನೈನರ್ ಅಬ್ಬಾಸ್ ಅಲಿ - 10 ವರ್ಷ ಜೈಲು
2. ಸಂಸುಮ್ ಕರೀಂ ರಾಜಾ - 5 ವರ್ಷ ಜೈಲು
3. ದಾವೂದ್ ಸುಲೇಮಾನ್ - 10 ವರ್ಷ ಜೈಲು