ಬೆಂಗಳೂರು(ಡಿ.26): ರಾಜ್ಯದ ಗ್ರಾಮೀಣ ಭಾಗದಲ್ಲಿ ಚುನಾವಣಾ ಕಾವು ರಂಗೇರಿದ್ದು, ಗ್ರಾಮ ಪಂಚಾಯಿತಿಗಳ ಎರಡನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಶುಕ್ರವಾರ ತೆರೆ ಬಿದ್ದಿದೆ. ಶನಿವಾರ ಅಭ್ಯರ್ಥಿಗಳು ಮನೆ-ಮನೆ ಪ್ರಚಾರ ನಡೆಸಿ ಮತದಾರರ ಬಳಿಕ ಅಂತಿಮ ಹಂತದ ಕಸರತ್ತು ನಡೆಸಲಿದ್ದಾರೆ.

ಭಾನುವಾರದಂದು (ಡಿ.27) ರಾಜ್ಯದ 109 ತಾಲೂಕುಗಳ 2709 ಗ್ರಾಮ ಪಂಚಾಯಿತಿಗಳಲ್ಲಿನ 39,378 ಸ್ಥಾನಗಳಿಗೆ ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಮರು ಮತದಾನ ಅಗತ್ಯ ಇದ್ದರೆ ಮಂಗಳವಾರ ನಡೆಯಲಿದ್ದು, ಡಿ.30ರಂದು ಮತ ಎಣಿಕೆ ನಡೆಯಲಿದೆ.

'ರಾಜ್ಯ ಸರ್ಕಾರದಿಂದ ಕನ್ನಡ ವಿರೋಧಿ ನೀತಿ'

ಒಟ್ಟು 43,291 ಸ್ಥಾನಗಳಿದ್ದು, ಈ ಪೈಕಿ 39,378 ಸ್ಥಾನಗಳಿಗೆ ಮತದಾನ ನಡೆಯಲಿದೆ. 1,05,431 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 3,697 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ. ಇತ್ತೀಚೆಗೆ ಬೇರೆ ಬೇರೆ ಚುನಾವಣೆಗಳು ನಡೆದಿರುವ ಹಿನ್ನೆಲೆಯಲ್ಲಿ ಮತದಾರರಿಗೆ ಎಡಗೈ ಹೆಬ್ಬರಳಿಗೆ ಶಾಯಿ ಹಾಕಲಾಗುವುದು.

ಶನಿವಾರ ನಡೆಯುವ ಮನೆ-ಮನೆ ಪ್ರಚಾರವೇ ನಿರ್ಣಾಯಕವಾಗಿರುವುದರಿಂದ ಅಂತಿಮ ಹಂತದ ಪ್ರಚಾರವು ಕುತೂಹಲ ಕೆರಳಿಸಿದೆ. ಉದ್ಯೋಗ, ಶಿಕ್ಷಣಕ್ಕಾಗಿ ಹೊರ ಹೋಗಿರುವ ಬಹುತೇಕ ಮಂದಿ ಮತದಾನ ಚಲಾಯಿಸಲು ಗ್ರಾಮಗಳಿಗೆ ಹಿಂತಿರುಗುತ್ತಿದ್ದಾರೆ. ನೈಟ್‌ ಕಫäರ್‍ ಜಾರಿ ಘೋಷಿಸಿದ್ದ ಕಾರಣ ಎರಡನೇ ಹಂತದ ಮತದಾನಕ್ಕೆ ಹಿನ್ನೆಡೆಯಾಗುವ ಸಾಧ್ಯತೆ ಇತ್ತು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಸರ್ಕಾರವು ನೈಟ್‌ ಕಫä್ರ್ಯವನ್ನು ವಾಪಸ್‌ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಮತದಾನಕ್ಕೆ ಹಿನ್ನಡೆಯಾಗುವ ಆತಂಕ ದೂರವಾಗಿದೆ. ಭಾನುವಾರ ಸಾರ್ವತ್ರಿಕ ರಜೆಯಾಗಿರುವ ಕಾರಣ ಮತದಾನಕ್ಕಾಗಿ ವೇತನ ಸಹಿತ ರಜೆಯನ್ನು ಘೋಷಣೆ ಮಾಡಿಲ್ಲ.

ಸಂಪುಟ ಕಸರತ್ತು ಸಂಕ್ರಾಂತಿ ನಂತರವೇ? ಬಜೆಟ್‌ ಬಳಿಕವೇ?

ಶುಕ್ರವಾರ ಸಂಜೆ ಬಹಿರಂಗ ಪ್ರಚಾರ ಅಂತಿಮಗೊಂಡಿರುವ ಹಿನ್ನೆಲೆಯನ್ನು ಅಭ್ಯರ್ಥಿಗಳನ್ನು ಹೊರತುಪಡಿಸಿ ಇನ್ನುಳಿದವರು ಕ್ಷೇತ್ರದಿಂದ ಹೊರ ಹೋಗುವಂತೆ ಚುನಾವಣೆ ಆಯೋಗವು ಸೂಚಿಸಿದೆ. ಮತಕ್ಷೇತ್ರದಲ್ಲಿ ಆಯೋಗದ ಸಿಬ್ಬಂದಿ ಓಡಾಟ ನಡೆಸಿದ್ದು, ಕ್ಷೇತ್ರಕ್ಕೆ ಸಂಬಂಧಪಡದವರು ಯಾರಾದರೂ ಕಂಡು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ. ಇನ್ನು ಚುನಾವಣೆ ನಡೆಯುತ್ತಿರುವ ವ್ಯಾಪ್ತಿಗಳಲ್ಲಿ ಮದ್ಯ ಮಾರಾಟವನ್ನು ಸಹ ನಿಷೇಧಿಸಲಾಗಿದೆ. ಅಕ್ರಮ ಮದ್ಯ ಸಾಗಾಣೆಯಾಗದಂತೆ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದು, ಗಡಿಭಾಗದಲ್ಲಿರುವ ಗ್ರಾಮಗಳಲ್ಲಿ ಪೊಲೀಸರು ಕಣ್ಗಾವಲು ಹಾಕಿದ್ದಾರೆ. ಜತೆಗೆ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.