ಬೆಂಗಳೂರು(ಡಿ.27): ಗ್ರಾಮ ಪಂಚಾಯತಿ ಎರಡನೇ ಹಂತದ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗವು ಸಕಲ ಸಿದ್ಧತೆಯನ್ನು ಕೈಗೊಂಡಿದ್ದು, ಇಂದು(ಭಾನುವಾರ) ರಾಜ್ಯದ 109 ತಾಲೂಕುಗಳ 2709 ಗ್ರಾಮ ಪಂಚಾಯಿತಿಗಳಲ್ಲಿನ 39,378 ಸ್ಥಾನಗಳಿಗೆ ಮತದಾನ ಆರಂಭವಾಗಿದೆ. 

ಭಾನುವಾರ ಬೆಳ್ಳಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದ್ದು, ಚುನಾವಣಾ ಸಿಬ್ಬಂದಿ ಈಗಾಗಲೇ ಮತದಾನ ಕೇಂದ್ರಗಳಿಗೆ ತೆರಳಿದ್ದಾರೆ. ಎರಡನೇ ಹಂತದಲ್ಲಿ 2709 ಗ್ರಾಮ ಪಂಚಾಯಿತಿಯ ಒಟ್ಟು 43,291 ಸ್ಥಾನಗಳಿದ್ದು, ಈ ಪೈಕಿ 39,378 ಸ್ಥಾನಗಳಿಗೆ ಮತದಾನ ನಡೆಯಲಿದೆ. 1,05,431 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 3,697 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಬೇರೆ ಬೇರೆ ಚುನಾವಣೆಗಳು ನಡೆದಿರುವ ಹಿನ್ನೆಲೆಯಲ್ಲಿ ಮತದಾರರಿಗೆ ಎಡಗೈ ಹೆಬ್ಬರಳಿಗೆ ಶಾಯಿ ಹಾಕಲಾಗುವುದು.

ಮುಕ್ತ ಮತ್ತು ನ್ಯಾಯ ಸಮ್ಮತ ಮತದಾನಕ್ಕೆ ಆಯೋಗವು ಕಟ್ಟೆಚ್ಚರ ವಹಿಸಿದೆ. ಚುನಾವಣಾಧಿಕಾರಿ ಮತ್ತು ಸಹಾಯಕ ಚುನಾವಣಾಧಿಕಾರಿ ಸೇರಿದಂತೆ 1,24,368 ಮಂದಿಯನ್ನು ಚುನಾವಣಾ ಸಿಬ್ಬಂದಿಯನ್ನಾಗಿ ನಿಯೋಜಿಸಲಾಗಿದೆ. ಎರಡನೇ ಹಂತದಲ್ಲಿ ಒಟ್ಟು 1.40 ಕೋಟಿ ಮತದಾರರಿದ್ದಾರೆ. 71 ಲಕ್ಷ ಪುರುಷರು, 69.65 ಲಕ್ಷ ಮಹಿಳೆಯರು ಮತ್ತು 588 ಇತರೆ ಮತದಾರರಿದ್ದಾರೆ. ಅಲ್ಲದೇ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ಸಹ ಚುನಾವಣಾ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ.

ಚುನಾವಣಾ ಅಖಾಡ: ಜ್ಯೋತಿಷಿ ಮನೆಗೆ ಅಭ್ಯ​ರ್ಥಿ​ಗಳ ಲಗ್ಗೆ..!

ಕೋವಿಡ್‌ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಮತದಾರರು ಮತ್ತು ಚುನಾವಣಾ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕೈಗಳನ್ನು ಸ್ಯಾನಿಟೈಸ್‌ ಮಾಡಿಕೊಳ್ಳಬೇಕು. ಯಾರು ಸಹ ಮತದಾನದಿಂದ ಹೊರಗುಳಿಯದಂತೆ ಕ್ರಮ ವಹಿಸಲಾಗಿದ್ದು, ಕೊರೋನಾ ಸೋಂಕಿತರಿಗೂ ಆಯೋಗವು ಮತದಾನ ಮಾಡಲು ಅವಕಾಶ ನೀಡಿದೆ. ಮತದಾನ ಮಾಡಲು ಕೊನೆಯ 1 ಗಂಟೆಯನ್ನು ಸೋಂಕಿತರಿಗೆ ಅವಕಾಶ ನೀಡಲಾಗಿದೆ. ಸೋಂಕಿತರಿಗೆ ಪಿಪಿಇ ಕಿಟ್‌ ಧರಿಸಿ ಮತದಾನ ಮಾಡಬಹುದು.

ಮತಗಟ್ಟೆಗಳ ಹೊರಗೆ ಮತದಾನ ದಿನದಂದು ಚಿಹ್ನೆ ಇರುವ ಕರಪತ್ರಗಳನ್ನು ಮುದ್ರಿಸುವುದು, ಹಂಚುವುದು ಮಾಡುವಂತಿಲ್ಲ. ರಾಜಕೀಯ ಮುಖಂಡರ ಭಾವಚಿತ, ರಾಜಕೀಯ ಪಕ್ಷಗಳ ಚಿಹ್ನೆ ಇರುವ ಕರಪತ್ರಗಳು, ಬ್ಯಾನರ್‌, ಬಂಟಿಂಗ್‌ಗಳ ಮೂಲಕ ಪ್ರಚಾರ ಮಾಡುವಂತಿಲ್ಲ. ಈ ಬಗ್ಗೆ ಪೊಲೀಸರು ಹೆಚ್ಚಿನ ನಿಗಾವಹಿಸಬೇಕು ಎಂದು ರಾಜ್ಯ ಚುನಾವಣಾ ಆಯೋಗವು ಸೂಚನೆ ನೀಡಿದೆ.