ಚುನಾವಣಾ ಅಖಾಡ: ಜ್ಯೋತಿಷಿ ಮನೆಗೆ ಅಭ್ಯರ್ಥಿಗಳ ಲಗ್ಗೆ..!
ಮತದಾನಕ್ಕೂ ಮೊದಲೆ ಅಭ್ಯರ್ಥಿಗಳಿಗೆ ಹೆಚ್ಚಿದ ತಳಮಳ| ಮತದಾರ ಯಾರನ್ನು ಬೆಂಬಲಿಸುತ್ತಾನೆ ಎಂಬ ಆತಂಕ| ತಮ್ಮ ಮನೆದೇವರು ಸೇರಿದಂತೆ ಪ್ರಮುಖ ದೇವಸ್ಥಾನಗಳಿಗೆ ಕುಟುಂಬ ಸಮೇತರಾಗಿ ಹೋಗಿ ವಿಶೇಷ ಪೂಜೆ ಸಲ್ಲಿಸಿ ವರ ಪಡೆಯುತ್ತಿರುವ ಕೆಲ ಅಭ್ಯರ್ಥಿಗಳು|
ಪಿ.ಎಸ್. ಪಾಟೀಲ
ರೋಣ(ಡಿ.26): ತೀವ್ರ ಜಿದ್ದಾಜಿದ್ದನಿಂದ ಕೂಡಿರುವ ಹಳ್ಳಿ ಫೈಟ್‌ನ ಎರಡನೇ ಹಂತದ ಮತದಾನಕ್ಕೆ ಒಂದು ದಿನ ಬಾಕಿ ಇದ್ದು, ಅಭ್ಯರ್ಥಿಗಳು ಮತದಾರ ಯಾರ ಪರ ಇದ್ದಾನೆ ಹಾಗೂ ಗೆಲುವು ಸಾಧ್ಯವೆ ಎಂದು ತಿಳಿಯಲು ಮತದಾನಕ್ಕೂ ಮೊದಲೇ ಜ್ಯೋತಿಷಿಗಳ ಮೊರೆ ಹೋಗಿದ್ದಾರೆ.
ಮುಖಂಡರು ಜಾತಿ, ವರ್ಚಸ್ಸು, ಹಣ ಹಾಗೂ ತೋಳ್ಬಲದ ಲೆಕ್ಕಾಚಾರದಲ್ಲಿ ತೊಡಗಿದ್ದರೆ ಅಭ್ಯರ್ಥಿಗಳು ಗೆಲ್ಲುತ್ತೇವೆಯೋ? ಇಲ್ಲವೋ? ಅವರು ನಮ್ಮ ಪರವಾಗಿ ಇದ್ದಾರೆ ಎಂಬ ತೊಳಲಾಟದಲ್ಲಿದ್ದು ತಿಳಿದುಕೊಳ್ಳಲು ಜ್ಯೋತಿಷಿಗಳ ಮನೆಗಳಿಗೆ ಹೆಜ್ಜೆ ಹಾಕುತ್ತಿದ್ದಾರೆ.
ಅಭ್ಯರ್ಥಿಗಳಿಗೆ ತಳಮಳ:
ಪ್ರಚಾರದ ವೇಳೆ ಮತದಾರ ಮತ ಕೇಳಲು ಹೋದ ಎಲ್ಲರಿಗೂ ನಾವು ನಿಮ್ಮವರೇ. ನಿಮ್ಮನ್ನು ಬಿಟ್ಟು ಯಾರಿಗೂ ಮತ ಹಾಕುವುದಿಲ್ಲ ಎಂದು ಹೇಳುತ್ತಿದ್ದಾರೆ. ಇದು ಅಭ್ಯರ್ಥಿಗಳ ಎದೆಬಡಿತ ಹೆಚ್ಚಿಸಿದೆ. ಯಾರು ನಮ್ಮ ಪರವಾಗಿ ಮತ ಚಲಾಯಿಸುತ್ತಾರೆ ಎಂಬ ಲೆಕ್ಕಾಚಾರದಲ್ಲಿ ತೊಡಗಿರುವ ಅಭ್ಯರ್ಥಿಗಳಿಗೆ ದಿನಕ್ಕೊಂದು ಶಾಕ್ ಸಿಗುತ್ತಿದೆ. ಬೆಳಗ್ಗೆ ಎದುರಾಳಿಗಳೊಂದಿಗೆ ಗುರುತಿಸಿಕೊಂಡಿರುವವರು ಸಂಜೆ ಇವರೊಂದಿಗೆ ಪ್ರಚಾರಕ್ಕೆ ಬರುತ್ತಿದ್ದಾರೆ. ಹೀಗಾಗಿ ಮತ ಭದ್ರಪಡಿಸಿಕೊಳ್ಳಲು ಎಲ್ಲ ರಾಜಕೀಯ ಶಕ್ತಿ ಬಳಸಿಕೊಂಡರೂ ಸ್ಪಷ್ಟತೆ ಸಿಗದೆ ಆತಂಕಕ್ಕೆ ಒಳಗಾಗಿದ್ದಾರೆ. ಇಂತಹ ಅನೇಕ ಗೊಂದಲಗಳಿಗೆ ಒಳಗಾಗಿರುವ ಅಭ್ಯರ್ಥಿಗಳು ಮತದಾನಕ್ಕೂ ಮೊದಲು ಜ್ಯೋತಿಷಿಗಳ ಬಳಿ ಹೋಗಿ ಚರ್ಚಿಸುತ್ತಿದ್ದಾರೆ.
ದಿಂಗಾಲೇಶ್ವರ ಮಠದಲ್ಲಿ ಡಿಕೆಶಿಗೆ ಪೂರ್ಣಕುಂಭ ಸ್ವಾಗತ: ಶ್ರೀಗಳ ನಡೆಗೆ ಭಕ್ತರಲ್ಲಿ ತೀವ್ರ ಅಸಮಾಧಾನ
ಟೆಂಪಲ್ ರನ್:
ಇನ್ನೂ ಕೆಲ ಅಭ್ಯರ್ಥಿಗಳು ತಮ್ಮ ಮನೆದೇವರು ಸೇರಿದಂತೆ ಪ್ರಮುಖ ದೇವಸ್ಥಾನಗಳಿಗೆ ಕುಟುಂಬ ಸಮೇತರಾಗಿ ಹೋಗಿ ವಿಶೇಷ ಪೂಜೆ ಸಲ್ಲಿಸಿ ವರ ಪಡೆಯುತ್ತಿದ್ದಾರೆ. ಶುಕ್ರವಾರ ಏಕಾದಶಿ ಇದ್ದ ಕಾರಣ ಒಂದೇ ದಿನ ನಾಲ್ಕೈದು ದೇವಸ್ಥಾನಗಳನ್ನು ಸುತ್ತುತ್ತಿರುವ ಅಭ್ಯರ್ಥಿಗಳು ಹರಕೆ ಹೊತ್ತುಕೊಳ್ಳುತ್ತಿದ್ದಾರೆ. ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಕುಟುಂಬ ಸಮೇತರಾಗಿ ಬಂದು ನಿನ್ನ ಸೇವೆ ಮಾಡುತ್ತೇವೆ, ಬಂಗಾರ, ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ನೀಡುತ್ತೇವೆ ಎಂದು ಪ್ರಮಾಣ ಮಾಡುತ್ತಿದ್ದಾರೆ.
ಒಟ್ಟಿನಲ್ಲಿ ಅಭ್ಯರ್ಥಿಗಳು ಜ್ಯೋತಿಷಿ ಹಾಗೂ ದೇವಸ್ಥಾನಗಳನ್ನು ಸುತ್ತಿದರೂ ಅವರ ಹಣೆಬರಹ ಬರೆಯುವುದು ಮತದಾರ. ಹೀಗಾಗಿ ಡಿ. 27ರಂದು ಚುನಾವಣೆ ನಡೆಯಲಿದ್ದು ಡಿ. 30ರಂದು ಮತ ಎಣಿಕೆಯಲ್ಲಿ ಯಾರಿಗೆ ವಿಜಯಮಾಲೆ ದೊರೆಯುತ್ತದೆ ಎಂಬುದು ಕಾಯ್ದುನೋಡಬೇಕು.
ಚುನಾವಣೆ ಘೋಷಣೆಯಾದ ದಿನದಿಂದ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಗೆಲ್ಲಬಹುದೇ? ನೀವು ಹೇಳುವ ಮಾತುಗಳ ಮೇಲೆ ನನ್ನ ಭವಿಷ್ಯವಿದೆ. ನನಗೆ ಗೆಲುವು ಸುಲಭವಾಗಲಿ ಎಂದು ಆಶೀರ್ವದಿಸಿ ಎಂದು ಬೇಡಿಕೊಳ್ಳುತ್ತಿದ್ದಾರೆ. ನಾನು, ನನ್ನ ಹೇಳಿಕೆಯಿಂದ ನೀವು ಗೆಲುವು ಸಾಧಿಸಲು ಸಾಧ್ಯವಿಲ್ಲ. ನಿಮ್ಮಲ್ಲಿನ ಪರಿಶ್ರಮ, ಅಭಿವೃದ್ಧಿ ಚಿಂತನೆ, ಸೇವಾಗುಣದ ಮೇಲೆ ನಿರ್ಧಾರವಾಗುತ್ತದೆ. ಈ ದಿಶೆಯಲ್ಲಿ ಕಾರ್ಯೋನ್ಮುಖರಾಗಿ ವಿಜಯಶಾಲಿಗಳಾಗಿ ಎಂದು ಹರಸಿ ಕಳಿಸಿದ್ದೇನೆ ಎಂದು ಆರಾಧಕ ಮೈಲಾರಪ್ಪ ಬಾಗೂರ ಗೋರಪ್ಪ ತಿಳಿಸಿದ್ದಾರೆ.
ಅಭ್ಯರ್ಥಿಯ ಹಸ್ತ ರೇಖೆ, ಜನ್ಮ ಕುಂಡಲಿ, ರಾಶಿ ಫಲ, ಹುಟ್ಟಿದ ಘಳಿಗೆ, ಅದೃಷ್ಟಸಂಖ್ಯೆ, ನಾಮಪತ್ರ ಸಲ್ಲಿಸಿದ ಅವಧಿ ಮತ್ತು ವಾರದ ಮೇಲೆ ಲೆಕ್ಕ ಹಾಕಿ ಭವಿಷ್ಯ ಹೇಳಿದ್ದೇನೆ. ಕಳೆದ ಚುನಾವಣೆಯಲ್ಲಿ ಗೆದ್ದವರು ಈ ಬಾರಿಯೂ ನನ್ನಲ್ಲಿ ಬಂದು ಭವಿಷ್ಯ ಕೇಳಿ ಹೋಗಿದ್ದಾರೆ. ಜತೆಗೆ ಹೊಸಬರು ಭವಿಷ್ಯ ಕೇಳಲು ಬರುತ್ತಿದ್ದಾರೆ ಎಂದು ಜ್ಯೋತಿಷಿ ರಾಘವೇಂದ್ರಸ್ವಾಮಿ ತಿಳಿಸಿದ್ದಾರೆ.
ಜ್ಯೋತಿಷಿಗಳು ಹೇಳುವ ಮಾತಿನಿಂದ, ದೇವಸ್ಥಾನ ಸುತ್ತುವುದು, ಮೂಢಾಚರಣೆಗಳಿಂದ ಗೆಲುವು ಸಾಧಿಸಲು ಸಾಧ್ಯವಿಲ್ಲ. ಅಭಿವೃದ್ಧಿ ಪರ ಚಿಂತನೆ ಹಾಗೂ ಉತ್ತಮ ವ್ಯಕ್ತಿತ್ವ ಹೊಂದಿದವರಿಗೆ ಮತದಾರ ಮತ ನೀಡುತ್ತಾನೆ. ಅವರ ನಿರ್ಧಾರವೇ ಅಂತಿಮ ಎಂದು ವಿಜ್ಞಾನ ಶಿಕ್ಷಕ ಅಶೋಕ ಹುಂಡಿ ಹೇಳಿದ್ದಾರೆ.