2ಎ ಮೀಸಲಿಗಾಗಿ ಸೆ.20ಕ್ಕೆ ಸಿಎಂ ಮನೆ ಮುಂದೆ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪ್ರತಿಭಟನೆ
ಲಿಂಗಾಯತ ಪಂಚಮಸಾಲಿಗಳಿಗೆ 2ಎ ಮೀಸಲಾತಿಗಾಗಿ ರಾಜ್ಯ ಸರ್ಕಾರ ಕಡೆಗಣಿಸುತ್ತಿರುವುದನ್ನು ವಿರೋಧಿಸಿ ಸೆ.20 ರಂದು ಶಿಗ್ಗಾವಿಯಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸದ ಎದುರು ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.
ಚಿತ್ರದುರ್ಗ (ಸೆ.17): ಲಿಂಗಾಯತ ಪಂಚಮಸಾಲಿಗಳಿಗೆ 2ಎ ಮೀಸಲಾತಿಗಾಗಿ ಕಳೆದ ಎರಡು ವರ್ಷಗಳಿಂದಲೂ ನಿರಂತರ ಹೋರಾಟ ಮಾಡಿಕೊಂಡು ಬರುತ್ತಿದ್ದರೂ ರಾಜ್ಯ ಸರ್ಕಾರ ಕಡೆಗಣಿಸುತ್ತಿರುವುದನ್ನು ವಿರೋಧಿಸಿ ಸೆ.20 ರಂದು ಶಿಗ್ಗಾವಿಯಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸದ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದೆಂದು ಲಿಂಗಾಯತ ಪಂಚಮಸಾಲಿ ಮಹಾಸಭಾ ಜಿಲ್ಲಾಧ್ಯಕ್ಷ ಕೆ.ಸಿ.ಗಂಗಾಧರಪ್ಪ ತಿಳಿಸಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗಾಯತ ಪಂಚಮಮಸಾಲಿ ಜನಾಂಗಕ್ಕೆ 2ಎ. ಮೀಸಲಾತಿ ನೀಡುವುದಾಗಿ ನಾಲ್ಕು ಬಾರಿ ಮಾತು ಕೊಟ್ಟು ವಚನ ಭ್ರಷ್ಟರಾಗಿರುವ ಮುಖ್ಯಮಂತ್ರಿ ನಿವಾಸದ ಮುಂದೆ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಧರಣಿ ನಡೆಸಲಾಗುವುದು. ರಾಜ್ಯಾದ್ಯಂತ ಸುತ್ತಾಡಿ ಜನಾಂಗವನ್ನು ಸಂಘಟಿಸಿ 2 ಎ.ಮೀಸಲಾತಿಗಾಗಿ ಸ್ವಾಮೀಜಿ ಹೋರಾಟ ನಡೆಸುತ್ತಿದ್ದಾರೆ. ಮಕ್ಕಳ ಶಿಕ್ಷಣ ಉದ್ಯೋಗಕ್ಕಾಗಿ ಮೀಸಲಾತಿ ನಮಗೆ ಅತ್ಯವಶ್ಯಕವಾಗಿದೆ ಎನ್ನುವುದನ್ನು ರಾಜ್ಯ ಸರ್ಕಾರದ ಗಮನಕ್ಕೆ ತರಲು ಪ್ರತಿಭಟನೆಗೆ ಮುಂದಾಗಿದ್ದೇವೆ. ಒಂದು ವೇಳೆ ಮುಖ್ಯಮಂತ್ರಿ ನಮಗೆ 2 ಎ.ಮೀಸಲಾತಿ ನೀಡದಿದ್ದರೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದೆಂದು ಎಚ್ಚರಿಸಿದರು. ಲಿಂಗಾಯತ ಪಂಚಮಸಾಲಿ ಯುವ ಘಟಕದ ಜಿಲ್ಲಾಧ್ಯಕ್ಷ ಮಂಜುನಾಥ್ ಎಚ್.ಎಂ, ಎಸ್ .ತಿಪ್ಪೇಸ್ವಾಮಿ, ಕಾರ್ತಿಕ್ ಬಿವಿಕೆಎಸ್, ಎಸ್.ಟಿ ನವೀನ್‌ಕುಮಾರ್, ನಾಗರಾಜ್ ನಂದಿಪುರ, ಜಿತೇಂದ್ರ ಹುಲಿಕುಂಟೆ, ಪ್ರಶಾಂತ್ ರೆಡ್ಡಿ, ವಿಜಯಕುಮಾರ್, ಮನು ಇದ್ದರು.
ಬೊಮ್ಮಾಯಿ ಶಿಗ್ಗಾಂವಿ ನಿವಾಸದ ಎದುರು ಧರಣಿ
ವಿಜಯಪುರ: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸದ ಎದುರು ಸೆ.19ರಂದು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.
ಗುರುವಾರ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ಯುವಘಟಕದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಂಕರಗೌಡ ಬಿರಾದಾರ ಹಾಗೂ ವಿಜಯಪುರ ಜಿಲ್ಲಾಧ್ಯಕ್ಷ ಬಿ.ಎಂ. ಪಾಟೀಲ ದೇವರ ಹಿಪ್ಪರಗಿ ಮತ್ತು ವಿಜಯಪುರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಗನಗೌಡ ಸೋಲಾಪುರ ಅವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ವರ್ಷ ಜ.14 ರಿಂದ ಕೂಡಲಸಂಗಮದಿಂದ ಬೆಂಗಳೂರಿನವರೆಗೆ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಪ್ರಥಮ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆದ ಪಾದಯಾತ್ರೆ ಅರಮನೆ ಮೈದಾನದಲ್ಲಿ ಬೃಹತ್ ಪ್ರತಿಭಟನಾ ರಾರಯಲಿ, ಸ್ವತಂತ್ರ ಉದ್ಯಾನದಲ್ಲಿ ಧರಣಿ ಸತ್ಯಾಗ್ರಹ, ಶರಣು ಶರಣಾರ್ಥಿ ಯಾತ್ರೆ ಹೀಗೆ ಅನೇಕ ಹಲವಾರು ರೀತಿಯ ಹೋರಾಟಗಳನ್ನು ಮಾಡಿದರೂ ಸರ್ಕಾರ ಇಲ್ಲಿಯವರೆಗೂ ನಮ್ಮ ಸಮುದಾಯಕ್ಕೆ ಮೀಸಲಾತಿ ಕೊಡುವುದನ್ನು ವಿನಾಕಾರಣ ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರದ ಧೋರಣೆಯನ್ನು ವಿರೋಧಿಸಿ ಸೆ. 19ರಂದು ಹಾವೇರಿ ಜಿಲ್ಲೆ ಶಿಗ್ಗಾವಿಯಲ್ಲಿ ಇರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸದ ಎದುರು ಬೃಹತ್ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಹೋರಾಟದಲ್ಲಿ ವಿಜಯಪುರ ಜಿಲ್ಲೆಯ ಎಲ್ಲ ತಾಲೂಕಿನಿಂದ ಸಮಾಜದ ಪದಾಧಿಕಾರಿಗಳು, ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ನಮ್ಮ ಜಿಲ್ಲೆಯಿಂದ ಸುಮಾರು 2000 ಜನ ಭಾಗವಹಿಸುವರು ಎಂದು ಹೇಳಿದರು.
ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಇತ್ತೀಚೆಗೆ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೊಡಬಾರದು ಎಂದು ಹೇಳಿರುವುದು ಖಂಡನೀಯ. ಸ್ವತಃ ಈಶ್ವರಪ್ಪನವರೇ ಕುರುಬ ಸಮಾಜವನ್ನು ಎಸ್‌ಟಿ ಮೀಸಲಾತಿಗೆ ಸೇರಿಸಬೇಕೆಂದು ಪಾದಯಾತ್ರೆ ಹೋರಾಟ ಮಾಡಿ ಇದೀಗ ನಮ್ಮ ಸಮುದಾಯಕ್ಕೆ ಮೀಸಲಾತಿ ಕೊಡಬೇಡಿ ಎಂದು ಹೇಳಿಕೆ ಕೊಟ್ಟಿರುವುದನ್ನು ನೋಡಿದರೆ ಇವರಿಗೆ ಸಚಿವ ಸ್ಥಾನದಿಂದ ವಜಾ ಮಾಡಿರುವುದರಿಂದ ಬುದ್ಧಿ ಭ್ರಮಣೆಯಾಗಿದೆ ಎಂದು ದೂರಿದರು.
ಪಂಚಮಸಾಲಿಗಳಿಗೆ 2ಎ ಮೀಸಲಾತಿ ನೀಡದಿದ್ದರೆ ಸರ್ಕಾರಕ್ಕೆ ತಕ್ಕ ಪಾಠ: ಕೂಡಲ ಶ್ರೀ
ರಾಜ್ಯ ಸರ್ಕಾರ ಸಚಿವ ಸಂಪುಟ ವಿಸ್ತರಣೆ ಮಾಡಿ ವಿಜಯಪುರ ಜಿಲ್ಲೆಗೆ ಸಚಿವ ಸಂಪುಟದಲ್ಲಿ ನ್ಯಾಯ ಒದಗಿಸಬೇಕು. ಜಿಲ್ಲೆಯ ಅಭಿವೃದ್ಧಿ ಹರಿಕಾರ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಸಚಿವರನ್ನಾಗಿ ಮಾಡಿ ಅವರಿಗೆ ವಿಜಯಪುರ ಜಿಲ್ಲಾ ಉಸ್ತುವಾರಿಯನ್ನು ಕೊಡಬೇಕು. ಈಗ ನಡೆದಿರುವ ಅಧಿವೇಶನದಲ್ಲಿ ನಮ್ಮ ಸಮಾಜದ ಎಲ್ಲಾ ಶಾಸಕರು ಪಕ್ಷಾತೀತವಾಗಿ ಮೀಸಲಾತಿ ಬಗ್ಗೆ ಧ್ವನಿ ಎತ್ತಬೇಕು ಎಂದು ಹೇಳಿದರು.
ಮೀಸಲಾತಿ ಕೊಡಿಸುವುದು ಪೀಠದ ಜವಾಬ್ದಾರಿ; ವಚನಾನಂದ ಸ್ವಾಮೀಜಿ
ಪತ್ರಿಕಾಗೋಷ್ಠಿಯಲ್ಲಿ ವಿಜಯಪುರ ನಗರ ಘಟಕದ ಅಧ್ಯಕ್ಷ ಶ್ರೀಶೈಲ ಬುಕ್ಕಣಿ, ಪ್ರಶಾಂತ ಮುಂಜಾನೆ, ದಯಾನಂದ ಜಾಲಗೇರಿ, ಸದಾಶಿವ ಅಳ್ಳಿಗಿಡದ, ಸಿದ್ದು ಹಳ್ಳೂರ, ಸಿಂದಗಿ ತಾಲೂಕ ಅಧ್ಯಕ್ಷ ಎಂ.ಎಂ. ಹಂಗರಗಿ, ಬಸವನಬಾಗೇವಾಡಿ ತಾಲೂಕ ಯುವಘಟಕಾಧ್ಯಕ್ಷ ಸಂಜು ಬಿರಾದಾರ, ಮುದ್ದೇಬಿಹಾಳ ತಾಲೂಕಾಧ್ಯಕ್ಷ ಅಂಬರೀಶ ಗೂಳಿ, ಕಾಮರಾಜ ಬಿರಾದಾರ, ಚಡಚಣ ತಾಲೂಕಾಧ್ಯಕ್ಷ ವಿಠಲ ವಡಗಾವ, ಪ್ರವೀಣ ಪಾಟೀಲ, ಶೋಭಾ ಬಿರಾದಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.