* ನಗರದಲ್ಲಿ ಪೊಲೀಸ್‌ ಇಲಾಖೆಗೆ ಮೇಜರ್‌ ಸರ್ಜರಿ * ಒಂದೇ ಬಾರಿಗೆ 2616 ಪೊಲೀಸರ ವರ್ಗ

ಬೆಂಗಳೂರು(ಜು.03): ಬೆಂಗಳೂರಿನಲ್ಲಿ ಪೊಲೀಸ್‌ ಆಡಳಿತಕ್ಕೆ ಮೇಜರ್‌ ಸರ್ಜರಿ ನಡೆದಿದ್ದು, ಒಂದೇ ಬಾರಿಗೆ 163 ಸಬ್‌ ಇನ್ಸ್‌ಪೆಕ್ಟರ್‌ಗಳು ಸೇರಿದಂತೆ 2616 ಪೊಲೀಸರನ್ನು ಸಾಮೂಹಿಕವಾಗಿ ವರ್ಗಾವಣೆಗೊಳಿಸಿ ನಗರದ ಆಡಳಿತ ವಿಭಾಗದ ಡಿಸಿಪಿ ನಿಶಾ ಜೇಮ್ಸ್‌ ಆದೇಶ ಹೊರಡಿಸಿದ್ದಾರೆ. ಈ ಮೂಲಕ ಕಳೆದ ಎರಡು ತಿಂಗಳ ಅವಧಿಯಲ್ಲಿ ಸುಮಾರು 3200ಕ್ಕೂ ಅಧಿಕ ಪೊಲೀಸರು ವರ್ಗವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಪೈಕಿ 15 ವರ್ಷಗಳಿಂದ ಒಂದೇ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದ ಹೆಡ್‌ ಕಾನ್‌ಸ್ಟೇಬಲ್‌ ಹಾಗೂ ಕಾನ್‌ಸ್ಟೇಬಲ್‌ಗಳಿಗೆ ಆ ವಿಭಾಗದಿಂದ ಗೇಟ್‌ ಪಾಸ್‌ ಕೊಟ್ಟಿದ್ದು, ಸೇವಾ ಅರ್ಹತೆ ಆಧಾರಿಸಿ ಠಾಣೆಗಳಿಗೆ ಪೊಲೀಸರನ್ನು ನಿಯೋಜಿಸಿದ್ದಾರೆ ಎಂದು ತಿಳಿದು ಬಂದಿದೆ.

ಪಿಎಸ್‌ಐ ಹಾಗೂ ಎಎಸ್‌ಐ ಸೇರಿದಂತೆ ಆಯಾ ಹುದ್ದೆಗಳಿಗೆ ಇಲಾಖೆಯ ವರ್ಗಾವಣೆ ನಿಯಮಾನುಸಾರ ಪೊಲೀಸರನ್ನು ವರ್ಗಾವಣೆ ಮಾಡಲಾಗಿದೆ. ಪಿಎಸ್‌ಐ ಹಾಗೂ ಎಚ್‌ಸಿ ಮತ್ತು ಪಿಸಿಗಳಿಗೆ ನಿಯಮಗಳು ಬೇರೆ ಇವೆ. ಹೀಗಾಗಿ ವರ್ಗಾವಣೆ ನೀತಿಗೆ ತಕ್ಕಂತೆ ಪೊಲೀಸರ ವರ್ಗವಾಗಿದೆ ಎಂದು ಡಿಸಿಪಿ ನಿಶಾ ಜೇಮ್ಸ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಶಿಫಾರಸಿಗೆ ಕ್ಯಾರೆ ಎನ್ನದ ಡಿಸಿಪಿ

ನಗರದ ಆರ್ಥಿಕವಾಗಿ ಫಲವತ್ತಾಗಿರುವ ಠಾಣೆಗಳಿಗೆ ಕೆಲ ಪೊಲೀಸರು ನಡೆಸಿದ್ದ ಲಾಬಿಗೆ ಮಣಿಯದ ನಿಶಾ ಜೇಮ್ಸ್‌, ತಮ್ಮ ವರ್ಗಾವಣೆಗೆ ಶಿಫಾರಸು ಪತ್ರ ತಂದ ಸಿಬ್ಬಂದಿಗೆ ಬೆವರಿಳಿಸಿದ್ದಾರೆ.

ಆಯಕಟ್ಟಿನ ಠಾಣೆಗಳಿಗೆ ವರ್ಗಾವಣೆಗಾಗಿ ಸರ್ಕಾರದ ಪ್ರಭಾವಿ ಸಚಿವರು, ಲೋಕಸಭಾ ಸದಸ್ಯರು ಹಾಗೂ ಶಾಸಕರಿಂದಲೂ ಕೆಲ ಪೊಲೀಸರು ಶಿಫಾರಸು ಪಡೆದಿದ್ದರು ಎನ್ನಲಾಗಿದೆ. ಆದರೆ ಯಾವುದೇ ಬಾಹ್ಯ ಒತ್ತಡ ಮಾತ್ರವಲ್ಲ ಇಲಾಖೆಯ ಹಿರಿಯ ಅಧಿಕಾರಿಗಳು ಹೇಳಿದರೂ ಸಹ ಬಗ್ಗದೆ ನಿಶಾ ಜೇಮ್ಸ್‌ ಅವರು, ವರ್ಗಾವಣೆ ನೀತಿಗೆ ಅರ್ಹತೆ ಹೊಂದಿರುವವರಿಗೆ ಅವರ ಯೋಗ್ಯತೆಗೆ ತಕ್ಕಂತೆ ಕೌನ್ಸಲಿಂಗ್‌ ಮೂಲಕ ಹುದ್ದೆ ಕಲ್ಪಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ವರ್ಗಾವಣೆಯಾದ ಪೊಲೀಸರು

ಪಿಎಸ್‌ಐ 163

ಎಎಸ್‌ಐ 112

ಹೆಡ್‌ ಕಾನ್‌ಸ್ಟೇಬಲ್‌ 1292

ಕಾನ್‌ಸ್ಟೇಬಲ್‌ 1049