Asianet Suvarna News Asianet Suvarna News

ಕೇಂದ್ರದ ಮಾರ್ಗದರ್ಶನದಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮೇಲ್ದರ್ಜೆಗೆ

  •   ಆರೋಗ್ಯ ರಕ್ಷಣೆಯ ಕುರಿತು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಮಾರ್ಗದರ್ಶನದಂತೆ ಆದ್ಯತಾ ಕ್ರಮಗಳನ್ನು ಕೈಗೊಂಡಿದೆ
  •  3 ವರ್ಷಗಳ ಅವಧಿಯಲ್ಲಿ ರಾಜ್ಯದ ಎಲ್ಲಾ 2,500 ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು ಕ್ರಮ 
2500 PHCs will upgrade  in 3 years  Says Minister sudhakar snr
Author
Bengaluru, First Published Oct 7, 2021, 3:03 PM IST

 ಪುತ್ತೂರು(ಅ.07):  ಆರೋಗ್ಯ (Health) ರಕ್ಷಣೆಯ ಕುರಿತು ರಾಜ್ಯ ಸರ್ಕಾರವು (Karnataka Govt) ಕೇಂದ್ರ ಸರ್ಕಾರದ ಮಾರ್ಗದರ್ಶನದಂತೆ ಆದ್ಯತಾ ಕ್ರಮಗಳನ್ನು ಕೈಗೊಂಡಿದ್ದು, ಈಗಾಗಲೇ 250 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು (PHC) ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಲಾಗಿದೆ. ಮುಂದಿನ 3 ವರ್ಷಗಳ ಅವಧಿಯಲ್ಲಿ ರಾಜ್ಯದ ಎಲ್ಲಾ 2,500 ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ (Dr K sudhakar) ಹೇಳಿದರು.

ಬುಧವಾರ ಪುತ್ತೂರು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತಿಷ್ಠಿತ ಬಹುರಾಜ್ಯ ಸಹಕಾರ ಸಂಸ್ಥೆ ಕ್ಯಾಂಪ್ಕೋ (Campco) ವತಿಯಿಂದ ರು. 1ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳಿಸಲಾದ ಆಕ್ಸಿಜನ್‌ ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ವೀಡಿಯೋ ಸಂವಾದದ ಮೂಲಕ ಅವರು ಮಾತನಾಡಿದರು.

ಜನತೆಗೆ ಗುಡ್ ನ್ಯೂಸ್: ಕರ್ನಾಟಕದಲ್ಲಿ ಕೊರೋನಾ ಭಾರೀ ಇಳಿಕೆ

ತುರ್ತು ಕಾರ್ಯನಿಮಿತ್ತ ಆರೋಗ್ಯ ಸಚಿವರು ಸ್ವತಃ ಹಾಜರಾಗಲು ಅಸಾಧ್ಯವಾಗಿತ್ತು. ಕೊರೋನಾ 2ನೇ ಅಲೆಯ ಸಂದರ್ಭ ಉಂಟಾದ ಆಕ್ಸಿಜನ್‌ (Oxygen) ಕೊರತೆಯ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕೇಂದ್ರ ಸರ್ಕಾರವು (Central Govt) ಹಾಕಿಕೊಟ್ಟಮಾರ್ಗಸೂಚಿಯಂತೆ ರಾಜ್ಯದಲ್ಲಿ ಈಗ 250ಕ್ಕೂ ಹೆಚ್ಚು ಆಮ್ಲಜನಕ ಉತ್ಪಾದನಾ ಘಟಕಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಇವೆ. ಈ ಪೈಕಿ ಶೇ.50ರಷ್ಟು ಘಟಕಗಳು ಖಾಸಗಿಯವರ ನೆರವಿನಿಂದ ನಿರ್ಮಾಣವಾಗಿವೆ. ರಾಜ್ಯದಲ್ಲಿ ಈಗ 13,588 ಆಕ್ಸಿಜನ್‌ ಸಿಲಿಂಡರ್‌ಗಳಿವೆ. ಆಕ್ಸಿಜನ್‌ ಉತ್ಪಾದನೆಯ ಪ್ರಮಾಣ 1,700 ಮೆಟ್ರಿಕ್‌ ಟನ್‌ಗೆ ತಲುಪಿದೆ. ಇದೀಗ ಆಕ್ಸಿಜನ್‌ ಕುರಿತಂತೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲಾಗಿದೆ ಎಂದರು.

ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಅಂಗಾರ (S Angara) ಮಾತನಾಡಿ, ಹಿಂದಿನ ಸರ್ಕಾರಗಳು ಶಿಕ್ಷಣ ಮತ್ತು ಆರೋಗ್ಯಕ್ಕಾಗಿ ಯಾವುದೇ ಪೂರಕ ವ್ಯವಸ್ಥೆಗಳನ್ನು ಮಾಡಿಲ್ಲದ ಕಾರಣ ಕೋವಿಡ್‌ ಸಂದರ್ಭದಲ್ಲಿ ಅದನ್ನು ನಿಭಾಯಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರವು ಹರಸಾಹಸ ಪಡಬೇಕಾಯಿತು. ಅದರೆ ಕೋವಿಡ್‌ ವಿಚಾರವನ್ನು ಸವಾಲಾಗಿ ಸ್ವೀಕರಿಸಿದ ನಮ್ಮ ಸರ್ಕಾರ ಇದಕ್ಕೆ ಶಾಶ್ವತ ಪರಿಹಾರವನ್ನು ಕಲ್ಪಿಸುವ ಕೆಲಸ ಮಾಡಿದೆ ದ.ಕ. ಜಿಲ್ಲೆಯ 16 ಸರ್ಕಾರಿ ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕಗಳಿವೆ ಎಂದು ಹೇಳಿದರು.

ಸಂಸದ ನಳಿನ್‌ ಕುಮಾರ್‌ ಕಟೀಲ್‌ (Nalin Kumar kateel), ಅಡಿಕೆ ಬೆಳೆಗಾರರ ಹಿತರಕ್ಷಕನಾದ ಕ್ಯಾಂಪ್ಕೋ ಸಂಸ್ಥೆಯು ಈಗ ಜನರ ಆರೋಗ್ಯ ರಕ್ಷಕನಾಗಿಯೂ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಕೊರೋನಾ ಎರಡನೇ ಅಲೆಯ ಬಳಿಕ ಜಿಲ್ಲೆಯಲ್ಲಿ ಆಮ್ಲಜನಕ ಉತ್ಪದನಾ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ. ದ.ಕ. ಜಿಲ್ಲೆಯಲ್ಲಿ ಈಗ ಆಮ್ಲಜನಕದ ಕೊರತೆ ಇಲ್ಲ, ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್‌ಗಳ ಕೊರತೆ ಇಲ್ಲ. ಕೋವಿಡ್‌ ಸಮರ್ಪಕ ನಿಯಂತ್ರಣಕ್ಕಾಗಿ ಕಳೆದ ಸಾಲಿನ ಸಂಸದರ ಪ್ರವೇಶಾಭಿವೃದ್ಧಿ ನಿಧಿಯಿಂದ ರು. 1 ಕೋಟಿ ಹಾಗೂ ಈ ಸಾಲಿನ ನಿಧಿಯಿಂದ ಸಂಪೂರ್ಣವಾಗಿ ರು. 2.50 ಕೋಟಿಯನ್ನು ವೆನ್ಲಾಕ್‌ ಆಸ್ಪತ್ರೆಯ ಅಭಿವೃದ್ಧಿಗಾಗಿ ನೀಡಿದ್ದೇನೆ. ದ.ಕ. ಜಿಲ್ಲೆಯಲ್ಲಿ ಶೇ. 93ರಷ್ಟುಕೊರೋನಾ (Covid) ಲಸಿಕೆ ವಿತರಣೆಯಾಗುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ವೈದ್ಯಕೀಯ ಓದು, ರಾಜಕೀಯ ಅನುಭವ, ಡಾ. ಸುಧಾಕರ್ ಬೆಸ್ಟ್ ಆಗಿದ್ಹೇಗೆ.?

ಕ್ಯಾಂಪ್ಕೊ ಸಂಸ್ಥೆಯ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ, ದ.ಕ. ಜಿಲ್ಲೆಯ ಮತ್ತು ಮಲೆನಾಡು ಪ್ರದೇಶದ ಶಾಸಕರ ಒತ್ತಾಯದಂತೆ ರಾಜ್ಯ ಸರ್ಕಾರ ಅಡಿಕೆ ಗಿಡದ ಹಳದಿ ಎಲೆರೋಗದ ಕುರಿತು ಪರಿಹಾರ ಕಂಡುಕೊಳ್ಳಲು ರು. 25 ಕೋಟಿಯನ್ನು ಮಂಜೂರು ಮಾಡಿದೆ. ಆದರೆ ಈ ಹಣವನ್ನು ಅನುದಾನ ನೀಡಿದ ಉದ್ದೇಶಕ್ಕಾಗಿ ಬಳಸುತ್ತಿಲ್ಲ. ಕೃಷಿ ವಿಜ್ಞಾನಿಗಳು ಈ ವಿಚಾರದಲ್ಲಿ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ. ಈ ಅನುದಾನವು ಮಂಜೂರು ಮಾಡಿದ ಉದ್ದೇಶಕ್ಕೆ ಬಳಕೆಯಾಗುವಂತೆ ಶಾಸಕರು ಸರ್ಕಾರದ ಮೇಲೆ ಒತ್ತಡ ಹಾಕಬೇಕು ಹಾಗೂ ಸರ್ಕಾರ ಇದನ್ನು ಗಮನಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪುತ್ತೂರು ಶಾಸಕ ಸಂಜೀವ ಮಠಂದೂರು ಮಾತನಾಡಿ, ಮುಂದೆ ಜಿಲ್ಲಾ ಕೇಂದ್ರವಾಗಲಿರುವ ಪುತ್ತೂರಿಗೆ ಸರ್ಕಾರಿ ವೈದ್ಯಕೀಯ ಕಾಲೇಜ್‌ ಹಾಗೂ ಅದಕ್ಕೆ ಪೂರ್ವಭಾವಿಯಾಗಿ ಪುತ್ತೂರಿಗೆ 300 ಹಾಸಿಗೆಗಳ ಸಾಮರ್ಥ್ಯದ ಸುಸಜ್ಜಿತ ಆಸ್ಪತ್ರೆಯನ್ನು ಮಂಜೂರು ಮಾಡುವಂತೆ ವೀಡಿಯೋ ಮೂಲಕ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದ ರಾಜ್ಯದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಆಕ್ಷಿಜನ್‌ ಉತ್ಪಾದನಾ ಘಟಕ ಕೊಡುಗೆಯಾಗಿ ನೀಡಿದ ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೂಡ್ಗಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ಪುತ್ತೂರು ನಗರಸಭಾಧ್ಯಕ್ಷ ಕೆ. ಜೀವಂಧರ್‌ ಜೈನ್‌, ಪುತ್ತೂರು ಪುಡಾ ಅಧ್ಯಕ್ಷ ಭಾಮಿ ಅಶೋಕ್‌ ಶೆಣೈ, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್‌, ಜಿಲ್ಲಾ ಆರೋಗ್ಯಾಧಿಕಾರಿ ಕಿಶೋರ್‌ ಕುಮಾರ್‌, ಕ್ಯಾಂಪೋ› ಆಡಳಿತ ನಿರ್ದೇಶಕ ಕೃಷ್ಣ ಕುಮಾರ್‌, ಪುತ್ತೂರು ಸಹಾಯಕ ಕಮಿಷನರ್‌ ಡಾ. ಯತೀಶ್‌ ಉಳ್ಳಾಲ್‌, ತಹಸೀಲ್ದಾರ್‌ ರಮೇಶ್‌ ಬಾಬು, ಕಾರ್ಯನಿರ್ವಹಣಾಧಿಕಾರಿ ನವೀನ್‌ ಕುಮಾರ್‌ ಭಂಡಾರಿ, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್‌ ರೈ ಮತ್ತಿತರರು ಉಪಸ್ಥಿತರಿದ್ದರು.

ಪುತ್ತೂರು ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಆಶಾಜ್ಯೋತಿ ಕೆ ಸ್ವಾಗತಿಸಿದರು. ಆರೋಗ್ಯ ಇಲಾಖೆಯ ನಿವೃತ ಅಧಿಕಾರಿ ಜಯರಾಮ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.

Follow Us:
Download App:
  • android
  • ios