ತಮ್ಮ ಪಕ್ಷ ಚುನಾವಣೆ ಸಂದರ್ಭದಲ್ಲಿ ನೇಕಾರರಿಗೆ ಉಚಿತ ವಿದ್ಯುತ್‌ ನೀಡುವುದಾಗಿ ಘೋಷಣೆ ಮಾಡಿತ್ತು. ಈ ಘೋಷಣೆಯನ್ನು ಅನುಷ್ಠಾನಗೊಳಿಸಲು ನಿನ್ನೆಯಷ್ಟೇ (ಶುಕ್ರವಾರ) ತಮ್ಮ ಸರ್ಕಾರ ಆದೇಶ ಹೊರಡಿಸಿದೆ. ಇದು ನೇಕಾರರಿಗೆ ದಸರಾ ಹಾಗೂ ದೀಪಾವಳಿಯ ಬಂಪರ್‌ ಕೊಡುಗೆಯಾಗಿದೆ: ಸಚಿವ ಶಿವಾನಂದ ಪಾಟೀಲ 

ವಿಜಯಪುರ(ಅ.22): ರಾಜ್ಯದ ನೇಕಾರರಿಗೆ 10 ಎಚ್‌ಪಿವರೆಗೆ 250 ಯುನಿಟ್‌ ಉಚಿತ ವಿದ್ಯುತ್‌ ನೀಡುವ ನಿಟ್ಟಿನಲ್ಲಿ ಸರ್ಕಾರ ಆದೇಶ ಹೊರಡಿಸುವ ಮೂಲಕ ರಾಜ್ಯದ ನೇಕಾರರಿಗೆ ದಸರೆ, ದೀಪಾವಳಿ ಗಿಫ್ಟ್‌ ನೀಡಿದೆ ಎಂದು ಸಕ್ಕರೆ, ಜವಳಿ ಹಾಗೂ ಎಪಿಎಂಸಿ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.

ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಪಕ್ಷ ಚುನಾವಣೆ ಸಂದರ್ಭದಲ್ಲಿ ನೇಕಾರರಿಗೆ ಉಚಿತ ವಿದ್ಯುತ್‌ ನೀಡುವುದಾಗಿ ಘೋಷಣೆ ಮಾಡಿತ್ತು. ಈ ಘೋಷಣೆಯನ್ನು ಅನುಷ್ಠಾನಗೊಳಿಸಲು ನಿನ್ನೆಯಷ್ಟೇ (ಶುಕ್ರವಾರ) ತಮ್ಮ ಸರ್ಕಾರ ಆದೇಶ ಹೊರಡಿಸಿದೆ. ಇದು ನೇಕಾರರಿಗೆ ದಸರಾ ಹಾಗೂ ದೀಪಾವಳಿಯ ಬಂಪರ್‌ ಕೊಡುಗೆಯಾಗಿದೆ ಎಂದು ಹೇಳಿದರು.

ಈಡೇರದ ಭರವಸೆ, ಸರ್ಕಾರದ ವಿರುದ್ಧ ಸಿಡಿದೆದ್ಧ ನೇಕಾರರು: ಉಚಿತ ವಿದ್ಯುತ್‌ಗೆ ಆಗ್ರಹ..!

0ದಿಂದ 10 ಎಚ್‌ಪಿ ವರೆಗಿನ 250 ಯುನಿಟ್‌ ವರೆಗೆ ರಾಜ್ಯದ ನೇಕಾರರಿಗೆ ಉಚಿತ ವಿದ್ಯುತ್‌ ನೀಡಲಾಗುವುದು. ಈ ಬಗ್ಗೆ ಸರ್ಕಾರ ಆದೇಶ ಹೊರಡಿಸಿದೆ ಎಂದ ಅವರು, 35ರಿಂದ 40 ಸಾವಿರ ನೇಕಾರ ಕುಟುಂಬಗಳಿಗೆ ಈ ಯೋಜನೆಯಿಂದ ಲಾಭ ತಟ್ಟಲಿದೆ. ₹129ರಿಂದ ₹149 ಕೋಟಿವರೆಗೆ ಈ ಯೋಜನೆ ಅನುಷ್ಠಾನಕ್ಕೆ ವೆಚ್ಚವಾಗಲಿದೆ ಎಂದು ಹೇಳಿದರು.

ದೊಡ್ಡ ನೇಕಾರರಿಗೂ 500 ಯುನಿಟ್‌ ವರೆಗೆ ₹1.25 ನಂತೆ ರಿಯಾಯ್ತಿ ದರದಲ್ಲಿ ವಿದ್ಯುತ್‌ ಪೂರೈಕೆ ಮಾಡುವ ಬಗ್ಗೆಯೂ ಸರ್ಕಾರ ಮುಂದಾಗಿದೆ ಎಂದ ಅವರು, ರಾಜ್ಯದಲ್ಲಿ 1ರಿಂದ 10ರಷ್ಟು ಎಚ್‌ಪಿ ಹೊಂದಿದ ನೇಕಾರರು ಶೇ.80ರಷ್ಟು ಇದ್ದಾರೆ. ಶೇ.20ರಷ್ಟು ದೊಡ್ಡ ನೇಕಾರರಿದ್ದಾರೆ. ಶೇ. 80ರಷ್ಟು ನೇಕಾರರಿಗೆ ಉಚಿತ ವಿದ್ಯುತ್‌ ಪ್ರಯೋಜನ ದೊರೆಯಲಿದೆ ಎಂದು ಹೇಳಿದರು.

ನೇಕಾರರಿಗೆ ಉಚಿತ ವಿದ್ಯುತ್‌ ವಿತರಣೆಗೆ ಸರ್ಕಾರ ಆದೇಶ ಹೊರಡಿಸಿದ್ದಕ್ಕೆ ಸಚಿವ ಶಿವಾನಂದ ಪಾಟೀಲ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಅಭಿನಂದಿಸಿದರು.

ನ.20ರಂದು ವಿಜಯಪುರದಲ್ಲಿ ರಾಜ್ಯಮಟ್ಟದ ಸಹಕಾರಿ ಸಪ್ತಾಹ:

ವಿಜಯಪುರದಲ್ಲಿ ನ.20ಕ್ಕೆ ರಾಜ್ಯಮಟ್ಟದ ಸಹಕಾರಿ ಸಪ್ತಾಹ ಆಚರಿಸಲಾಗುವುದು. ಡಿಸಿಸಿ ಬ್ಯಾಂಕ್‌ ಆವರಣದಲ್ಲಿ ಈ ಸಪ್ತಾಹ ಆಚರಿಸಲು ನಿರ್ಧರಿಸಲಾಗಿದೆ. ಈ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳು ಉದ್ಘಾಟಿಸಲಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ, ಸಹಕಾರಿ ಸಚಿವರು ಆಗಮಿಸಲಿದ್ದಾರೆ. ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರಿಗೂ ಈ ಕಾರ್ಯಕ್ರಮಕ್ಕೆ ಆಗಮಿಸಲು ಆಹ್ವಾನ ನೀಡಲಾಗಿದೆ ಎಂದು ತಿಳಿಸಿದರು.
ಬರದ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಣೆ ಮಾಡದೇ ಸರಳ ರೀತಿಯಲ್ಲಿ ಆಚರಿಸಲಾಗುವುದು. ಸಹಕಾರಿ ರತ್ನ ಪ್ರಶಸ್ತಿಯನ್ನು ಈ ಕಾರ್ಯಕ್ರಮದಲ್ಲಿಯೇ ಪ್ರದಾನ ಮಾಡಲಾಗುವುದು ಎಂದು ಹೇಳಿದರು.

ದುಡ್ಡು ಎಸೆದಿದ್ದಕ್ಕೂ ನನಗೂ ಯಾವ ಸಂಬಂಧವಿಲ್ಲ

ಹೈದ್ರಾಬಾದ್‌ನಲ್ಲಿ ಮದುವೆ ಸಮಾರಂಭದಲ್ಲಿ ಕವಾಲಿ ಕಾರ್ಯಕ್ರಮದಲ್ಲಿ ನೋಟಿನ ಸುರಿಮಳೆಗರೆದಿರುವುದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಮದುವೆಗೆ ನಾನು ಅತಿಥಿಯಾಗಿ ತೆರಳಿದ್ದೆನು ಎಂದು ಸಕ್ಕರೆ, ಜವಳಿ ಹಾಗೂ ಎಪಿಎಂಸಿ ಸಚಿವ ಶಿವಾನಂದ ಪಾಟೀಲ ಹೇಳಿದರು.

ಸಣ್ಣ ನೇಕಾರರಿಗೂ ಉಚಿತ ವಿದ್ಯುತ್‌: ಸಿಎಂ ಸಿದ್ದರಾಮಯ್ಯ

ಶನಿವಾರ ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಮದುವೆ ಸಮಾರಂಭದಲ್ಲಿ ಕವಾಲಿ ಕಾರ್ಯಕ್ರಮದಲ್ಲಿ ಹಾಡುಗಾರನ ಮೇಲೆ ಅಭಿಮಾನಿಗಳು ನೋಟಿನ ಸುರಿಮಳೆ ಹರಿಸುವುದು ಅಲ್ಲಿನ ಸಂಪ್ರದಾಯ. ಅಲ್ಲಿ ನಾನು ಅತಿಥಿಯಾಗಿ ಹೋಗಿದ್ದೆ. ನನಗೆ ತಡೆಯುವ ಅಧಿಕಾರ ಇರುವುದಿಲ್ಲ. ಅಲ್ಲಿನ ಗೃಹ ಸಚಿವರು ಮದುವೆ ಕಾರ್ಯಕ್ರಮದಲ್ಲಿ ಬಂದಿದ್ದರು. ಅದನ್ನು ತಡೆಯುವ ಬಗ್ಗೆ ಅವರನ್ನು ಕೇಳಬೇಕು. ನಾನು ಕವಾಲಿ ಹಾಡು ಆಲಿಸಲು ಕೆಲ ಹೊತ್ತು ಕುಳಿತುಕೊಂಡಿದ್ದೆ ಅಷ್ಟೇ. ಕವಾಲಿ ಹಾಡುಗಾರನ ಮೇಲೆ ಅಭಿಮಾನಿಗಳು ನೋಟುಗಳನ್ನು ಹಾರಿಸುತ್ತಿದ್ದರು. ಕೆಲವೊಂದು ನೋಟುಗಳು ತಮ್ಮ ಬಳಿ ಬಂದು ಬಿದ್ದವು. ಈ ಬಗ್ಗೆ ಅಪಾರ್ಥ ಮಾಡಿಕೊಳ್ಳುವುದು ಸರಿಯಲ್ಲ ಎಂದರು.

ಈ ಸಂಬಂಧ ಈಗಾಗಲೇ ಒಂದು ಸುದ್ದಿವಾಹಿನಿ ಮೇಲೆ ಮಾನಹಾನಿ ಖಟ್ಲೆ ಹಾಕಲು ನೋಟಿಸ್‌ ನೀಡಿದ್ದೇನೆ. ಇನ್ನೂ ಒಂದು ಸುದ್ದಿ ವಾಹಿನಿ ಮೇಲೆ ಕೇಸ್‌ ಹಾಕುತ್ತೇನೆ ಎಂದು ತಿಳಿಸಿದರು.