ಬೆಂಗಳೂರು(ಫೆ.17): ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಉದ್ದಿಮೆದಾರರಿಗೆ ಕೈಗಾರಿಕಾ ನಿವೇಶನ ಅಥವಾ ಮಳಿಗೆ ಹಂಚಿಕೆಯಲ್ಲಿನ ನಿಬಂಧನೆಗಳನ್ನು ಸಡಿಲಗೊಳಿಸುವ ಮತ್ತು ಈ ಯೋಜನೆಗಾಗಿ 250 ಕೋಟಿ ರು. ಅನುದಾನ ಮೀಸಲಿಟ್ಟ ರಾಜ್ಯ ಸರ್ಕಾರಕ್ಕೆ ಕರ್ನಾಟಕ ದಲಿತ ಉದ್ದಿಮೆದಾರರ ಸಂಘ ಅಭಿನಂದನೆ ಸಲ್ಲಿಸಿದೆ.

ನಿವೇಶನ ಅಥವಾ ಮಳಿಗೆ ಹಂಚಿಕೆಯಲ್ಲಿ ಶೇ.50ರಷ್ಟುರಿಯಾಯಿತಿ ಆದೇಶದಲ್ಲಿನ ನಿಬಂಧನೆಗಳನ್ನೇ ಶೇ.75ರಷ್ಟು ರಿಯಾಯಿತಿ ನೀಡುವಾಗಲು ಮುಂದುವರೆಸಬೇಕು. ಈ ಯೋಜನೆಗಾಗಿ ಅವಶ್ಯಕವಾದ ಹಣ ಮೀಸಲಿಡಬೇಕು ಎಂಬುದು ನಮ್ಮ ಬೇಡಿಕೆಯಾಗಿತ್ತು. ವಿಧಾನಸಭಾ ಅಧಿವೇಶನ ಸಂದರ್ಭದಲ್ಲಿ ನೀಡಿದ ಭರವಸೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈಡೇರಿಸಿದ್ದಾರೆ. ಶೇ.50ರಷ್ಟು ರಿಯಾಯಿತಿ ಷರತ್ತುಗಳನ್ನೇ ಮುಂದುವರೆಸುವುದಾಗಿ ಆದೇಶ ಹೊರಡಿಸಿದ್ದಾರೆ ಎಂದು ಕರ್ನಾಟಕ ದಲಿತ ಉದ್ದಿಮೆದಾರರ ಸಂಘದ ಕಾರ್ಯಾಧ್ಯಕ್ಷ ಸಿ.ಜಿ. ಶ್ರೀನಿವಾಸನ್‌ ಹೇಳಿದರು.

'ವಯಸ್ಸಾದ ಹಸು ಸಾಕಲು ಸರ್ಕಾರದಿಂದಲೇ ಹಣ'

2020-21ನೆ ಸಾಲಿನಲ್ಲಿ ಕೈಗಾರಿಕಾ ನಿವೇಶನ/ಮಳಿಗೆ ಸಹಾಯಧನ ಆಯವ್ಯಯದಲ್ಲಿ ಸುಮಾರು 40 ಕೋಟಿ ರು. ಮಾತ್ರ ಮೀಸಲಿರಿಸಲಾಗಿತ್ತು. ಈ ಹಣದಿಂದ ಇಡೀ ರಾಜ್ಯದಲ್ಲಿ ಕೇವಲ 20ರಿಂದ 30 ಫಲಾನುಭವಿಗಳಿಗೆ ಮಾತ್ರ ರಿಯಾಯಿತಿ ನೀಡಬಹುದಾಗಿತ್ತು. ಇದೀಗ ರಾಜ್ಯ ಸರ್ಕಾರ 250 ಕೋಟಿ ರು. ಹಣ ಮರುಹಂಚಿಕೆ ಮಾಡಲು ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ನೋಡೆಲ್‌ ಏಜೆನ್ಸಿ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಈ ಯೋಜನೆಯಲ್ಲಿ ಈ ಹಿಂದಿನ ಷರತ್ತುಗಳ ಬದಲಾವಣೆ ಮತ್ತು ಈ ಯೋಜನೆಗೆ ಅವಶ್ಯಕವಾದ ಅನುದಾನ ನೀಡುವಲ್ಲಿ ಸಕರಾತ್ಮಕವಾಗಿ ಸ್ಪಂದಿಸಿದ ರಾಜ್ಯದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಇತರೆ ಸಚಿವರು, ಶಾಸಕರು, ರಾಜ್ಯಸಭಾ ಸದಸ್ಯರು ಸೇರಿದಂತೆ ಪ್ರತಿಯೊಬ್ಬರಿಗೂ ಧನ್ಯವಾದ ಅರ್ಪಿಸುತ್ತೇವೆ ಎಂದು ಹೇಳಿದರು.