ಬೆಂಗಳೂರು(ಫೆ.06): ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿರುವುದರಿಂದ ವಯಸ್ಸಾದ ಹಸುಗಳನ್ನು ಸರ್ಕಾರ ಖರೀದಿ ಮಾಡುವುದಿಲ್ಲ, ಆದರೆ ಗೋಶಾಲೆಗಳಿಗೆ ಬಿಡಲು ಅವಕಾಶವಿದ್ದು, ಇವುಗಳ ನಿರ್ವಹಣೆಗೆ ಸರ್ಕಾರದಿಂದ ಅನುದಾನ ನೀಡಲಿದೆ ಎಂದು ಪಶು ಸಂಗೋಪನೆ ಸಚಿವ ಪ್ರಭು ಬಿ.ಚೌವ್ಹಾಣ್‌ ಹೇಳಿದ್ದಾರೆ. 

ಜೆಡಿಎಸ್‌ ಸದಸ್ಯ ಸಿ.ಎಂ.ಇಬ್ರಾಹಿಂ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸರ್ಕಾರೇತರ ಸಂಸ್ಥೆಗಳು, ಖಾಸಗಿ ಗೋಶಾಲೆಗಳು, ಮಠಗಳಿಗೆ ಇಂತಹ ಗೋವುಗಳನ್ನು ನಿರ್ವಹಣೆ ಮಾಡಲು ಸರ್ಕಾರದಿಂದ ಅನುದಾನ ನೀಡಲಾಗುವುದು. ಗೋ ಹತ್ಯೆ ನಿಷೇಧ ಕಾಯ್ದೆಯಿಂದ ರೈತರಿಗೆ, ವೃತ್ತಿನಿರತರಿಗೆ ಹಾಗೂ ಸೇವಿಸುವವರಿಗೆ ಯಾವುದೇ ಗಂಭೀರ ಸಮಸ್ಯೆ ಆಗಿರುವುದು ಸರ್ಕಾರದ ಗಮನಕ್ಕೆ ಬಂದಿರುವುದಿಲ್ಲ. 13 ವರ್ಷ ಮೇಲ್ಪಟ್ಟ ಎಮ್ಮೆ/ ಕೋಣಗಳನ್ನು ಮಾಂಸಕ್ಕಾಗಿ ವಧೆ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಆದರೆ ಈ ಮಾತನ್ನು ಒಪ್ಪದ ಸಿ.ಎಂ.ಇಬ್ರಾಹಿಂ ಅವರು, ವಯಸ್ಸಾದ ಎತ್ತು, ಕೋಣಗಳು ಯಾವ ಕೆಲಸಕ್ಕೂ ಬರುವುದಿಲ್ಲ. ವಯಸ್ಸಾದ ತಂದೆ-ತಾಯಿಯನ್ನೇ ಸಾಕಲು ಮಕ್ಕಳು ಸಿದ್ಧರಿಲ್ಲ. ಹೀಗಿರುವಾಗ ವಯಸ್ಸಾದ ರಾಸುಗಳನ್ನು ಯಾರು ಸಾಕುತ್ತಾರೆ? ಹಸು ಸತ್ತರೆ ಹೂಳಬೇಕೆಂಬ ನಿಯಮ ಮಾಡಿದ್ದೀರಿ. ಮನುಷ್ಯ ಸತ್ತರೇ ಹೂಳಲು ಜಾಗ ಇಲ್ಲ, ಪಶು ಸತ್ತರೆ ಎಲ್ಲಿ ಹೂಳುತ್ತೀರಿ ಎಂದು ಪ್ರಶ್ನಿಸಿದರು.

ಹಾಲು ಹೆಚ್ಚಿಸೋ ಪಶು ಆಹಾರದಿಂದಲೇ ಎದುರಾಗಿದೆ ಅಪಾಯ!

ವಯಸ್ಸಾದ ರಾಸುಗಳನ್ನು ಸಾಕಲು ಬಜೆಟ್‌ನಲ್ಲಿ ಹಣ ಇಟ್ಟಿದ್ದೀರಾ? ವರ್ಷಕ್ಕೆ ಎಷ್ಟು ಗೊಡ್ಡು ಹಸು ಬರುತ್ತದೆ? ಕುರಿ, ಕೋಳಿ, ಮೀನಿನಲ್ಲೂ ದೈವಾಂಶ ಇದೆ ಎಂದ ಇಬ್ರಾಹಿಂ, ಇದ್ದಕ್ಕಿದ್ದಂತೆ ಕಾಯ್ದೆ ತಂದರೆ ಹೇಗೆ? ರೈತ ಸಂಘ, ನಮ್ಮ ನಾಯಕರನ್ನು ಕರೆದು ಚರ್ಚಿಸಬೇಕು. ಅದನ್ನು ಬಿಟ್ಟು ಕಾಯ್ದೆ ಜಾರಿಗೆ ತಂದು ಆಮೇಲೆ ಚರ್ಚಿಸುವುದಾಗಿ ಹೇಳುವುದು ಸರಿಯಲ್ಲ ಎಂದರು. ಆಗ ಮಧ್ಯ ಪ್ರವೇಶಿಸಿದ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಮುಂದಿನ ಬಜೆಟ್‌ನಲ್ಲಿ ಗೋ ಸಂರಕ್ಷಣೆಗೆ ಸಂಬಂಧಿಸಿದಂತೆ ಅನುದಾನ ಹಂಚಿಕೆ ಮಾಡಲಾಗುವುದು. ಅದರ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಪಶು ವೈದ್ಯರ ಹುದ್ದೆ ಭರ್ತಿಗೆ ಕ್ರಮ:

ಪಶು ಸಂಗೋಪನೆ ಇಲಾಖೆಯಲ್ಲಿ ಪಶು ವೈದ್ಯರು ಸೇರಿದಂತೆ ವಿವಿಧ ವೃಂದದ 3317 ಹುದ್ದೆಗಳ ಮಂಜೂರಾತಿ ಇದ್ದು, 1240 ಹುದ್ದೆಗಳು ಖಾಲಿ ಇವೆ. ಖಾಲಿ ಇರುವ ಮುಖ್ಯ ಪಶು ವೈದ್ಯಾಧಿಕಾರಿ (ಆಡಳಿತ) ಹಾಗೂ ಮುಖ್ಯ ಪಶು ವೈದ್ಯಾದಿಕಾರಿ ಮತ್ತು ಹಿರಿಯ ಪಶು ವೈದ್ಯಾಧಿಕಾರಿಗಳ ಹುದ್ದೆಗಳನ್ನು ಹಂತ ಹಂತವಾಗಿ ಮುಂಬಡ್ತಿ ಅಥವಾ ಪದನ್ನೋತಿ ಮೂಲಕ ತುಂಬಲು ಕ್ರಮ ವಹಿಸಲಾಗಿದೆ. ಖಾಲಿ ಇರುವ 639 ಪಶು ವೈದ್ಯಾಧಿಕಾರಿ ಹುದ್ದೆ ಹಾಗೂ 371 (ಜೆ) ಅಡಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ 61 ಪಶು ವೈದ್ಯಾಧಿಕಾರಿ ಹುದ್ದೆಗಳನ್ನು ವಿಶೇಷ ನೇಮಕಾತಿ ನಿಯಮಗಳ ಮೂಲಕ ಭರ್ತಿ ಮಾಡುವ ಪ್ರಸ್ತಾವನೆಗೆ ಆರ್ಥಿಕ ನಿರ್ಬಂಧದ ಕಾರಣ ಆರ್ಥಿಕ ಇಲಾಖೆ ತಡೆ ಹಿಡಿದಿದೆ. ಹಾಗಾಗಿ ಈ ಸಂಬಂಧ ಆರ್ಥಿಕ ಇಲಾಖೆ ಜೊತೆ ಚರ್ಚಿಸಿ, ಒಪ್ಪಿಗೆ ಪಡೆದು ನೇಮಕಾತಿ ಮಾಡಲಾಗುವುದು ಎಂದು ಸಚಿವ ಪ್ರಭು ಚೌವ್ಹಾಣ್‌ ವಿವರಿಸಿದರು.

2 ವರ್ಷದಲ್ಲಿ 200 ಪಶು ಆಸ್ಪತ್ರೆಗಳಿಗೆ ಕಟ್ಟಡ:

ಮುಂದಿನ ಎರಡು ವರ್ಷದಲ್ಲಿ ನಬಾರ್ಡ್‌, ಐಆರ್‌ಡಿಎಫ್‌ ಯೋಜನೆಯಡಿ 200 ಪಶು ಆಸ್ಪತ್ರೆಗಳಿಗೆ ಸ್ವಂತ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದು ಜೆಡಿಎಸ್‌ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಅವರ ಪ್ರಶ್ನೆಗೆ ಸಚಿವ ಪ್ರಭು ಚೌವ್ಹಾಣ್‌ ಉತ್ತರಿಸಿದರು.