ಬೆಂಗಳೂರು(ಜು.13): ನಗರದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕಿತರ ಚಿಕಿತ್ಸೆ ಮತ್ತು ಆರೈಕೆಗೆ ವಿವಿಧ ಕಡೆ 22 ಸಾವಿರ ಹಾಸಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಕೋವಿಡ್‌ ಆರೈಕೆ ಕೇಂದ್ರದ ಮುಖ್ಯಸ್ಥ ರಾಜೇಂದರ್‌ ಕಟಾರಿಯಾ ತಿಳಿಸಿದ್ದಾರೆ.

ನಗರದ ವಿವಿಧ ಕಡೆ ಕೊರೋನಾ ಆರೈಕೆ ಕೇಂದ್ರಗಳನ್ನು ನಿರ್ಮಾಣ ಮಾಡಲಾಗಿದ್ದು, ಸೋಂಕಿನ ಲಕ್ಷಣ ಇಲ್ಲದವರನ್ನು ದಾಖಲು ಮಾಡಲು ಒಟ್ಟು 22,258 ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಈ ಪೈಕಿ ಹಜ್‌ ಭವನದಲ್ಲಿ 384 ಹಾಸಿಗೆಗಳಿದ್ದು 352 ಭರ್ತಿಯಾಗಿವೆ. ಕನಕಪುರ ರಸ್ತೆಯ ರವಿಶಂಕರ ಗುರೂಜಿ ಆಯುರ್ವೇದ ಆಸ್ಪತ್ರೆಯಲ್ಲಿ 176 ಹಾಸಿಗೆಗಳಿದ್ದು, ಎಲ್ಲವೂ ಭರ್ತಿಯಾಗಿವೆ.

ಕೊರೋನಾ ವೈರಸ್‌ಗೆ ತುತ್ತಾದ ಕರ್ನಾಟಕದ ಪ್ರಮುಖ ರಾಜಕಾರಣಿಗಳಿವರು

ಜಿಕೆವಿಕೆ ಕೃಷಿ ವಿವಿಯಲ್ಲಿ 716 ಹಾಸಿಗೆಗಳ ಪೈಕಿ 677 ಭರ್ತಿಯಾಗಿವೆ. ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿನ 245ರಲ್ಲಿ 25 ಭರ್ತಿಯಾಗಿವೆ. ತೋಟಗಾರಿಕೆ ಇಲಾಖೆ ಆವರಣದ ಬಾಲಕರ ಹಾಸ್ಟೆಲ್‌ನಲ್ಲಿ ಇರುವ 200 ಹಾಸಿಗೆಗಳ ಪೈಕಿ 11 ಹಾಸಿಗೆಗಳು ಭರ್ತಿಯಾಗಿವೆ ಎಂದರು.

ಇನ್ನು ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಬೃಹತ್‌ ಕೊರೋನಾ ಆರೈಕೆ ಕೇಂದ್ರವನ್ನು ನಿರ್ಮಾಣ ಮಾಡಲಾಗಿದ್ದು 10,100 ಹಾಸಿಗೆಗಳು ಲಭ್ಯವಾಗಲಿದ್ದು, ಈ ವಾರದಲ್ಲಿ ಇದಕ್ಕೆ ಚಾಲನೆ ಸಿಗಲಿದೆ. ಇದರ ಜತೆಗೆ ವಿವಿಧ ಕಾಲೇಜುಗಳ ಹಾಸ್ಟೆಲ್‌ಗಳು, ಅಪಾರ್ಟ್‌ಮೆಂಟ್‌ಗಳು ಸೇರಿದಂತೆ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ ಎಂದರು.

ಸಂಡೇ ಲಾಕ್‌ಡೌನ್‌ಗೆ ಕೊರೋನಾ ಡೋಂಟ್‌ ಕೇರ್: ಕರುನಾಡಲ್ಲಿ ಮಾಹಾಮಾರಿ ಅಟ್ಟಹಾಸ

ಜಿಕೆವಿಕೆ ಬಾಲಕಿಯರ ಹಾಸ್ಟೆಲ್‌ನಲ್ಲಿ 160 ಹಾಸಿಗೆ, ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ 500 ಹಾಸಿಗೆ, ಬಾಲಕಿಯರ ಹಾಸ್ಟೆಲ್‌ನಲ್ಲಿ 350 ಹಾಸಿಗೆ ಬಿಜಿಎಸ್‌ನಲ್ಲಿ 200 ಹಾಸಿಗೆ ಹಾಗೂ ಆರ್‌ಎನ್‌ಶೆಟ್ಟಿತಾಂತ್ರಿಕ ವಿದ್ಯಾಲಯದಲ್ಲಿ 750 ಹಾಸಿಗೆಗಳು ಸಿದ್ಧವಾಗಿವೆ.

ಅಲ್ಲದೇ ಪಿಇಎಸ್‌ ಕಾಲೇಜಿನಲ್ಲಿ 110 ಹಾಸಿಗೆಗಳು, ಆರ್‌ವಿ ಕಾಲೇಜಿನಲ್ಲಿ 577 ಹಾಸಿಗೆಗಳು, ಬಿಜಿಎಸ್‌ ಎಂಜಿನಿಯರಿಂಗ್‌ ಹಾಸ್ಟೆಲ್‌ನಲ್ಲಿ 300 ಹಾಸಿಗೆಗಳು, ದಯಾನಂದಸಾಗರ ಹಾಸ್ಟೆಲ್‌ನಲ್ಲಿ 250 ಹಾಸಿಗೆಗಳು, ಅರಮನೆ ಮೈದಾನದಲ್ಲಿ ಮೂರು ಸಾವಿರ ಹಾಸಿಗೆಗಳು, ಪೊಲೀಸ್‌ ಕ್ವಾಟ್ರರ್ಸ್‌ ಕಾಂಪ್ಲೆಕ್ಸ್‌ನಲ್ಲಿ 800 ಹಾಸಿಗೆಗಳು, ಮೈಸೂರು ರಸ್ತೆಯ ಬಿಡಿಎ ಇಂದ್ರಪ್ರಸ್ಥ ಅಪಾರ್ಟ್‌ಮೆಂಟ್‌ನಲ್ಲಿ ಎರಡು ಸಾವಿರ ಹಾಸಿಗೆಗಳನ್ನು ಗುರುತಿಸಲಾಗಿದ್ದು, ಒಟ್ಟಾರೆ 22,258 ಹಾಸಿಗೆಗಳು ಕೊರೋನಾ ಆರೈಕೆ ಕೇಂದ್ರಕ್ಕೆ ಲಭ್ಯವಾಗಲಿದೆ ಎಂದು ಮಾಹಿತಿ ನೀಡಿದರು.