ಬೆಂಗಳೂರು (ನ.24):  ಮನುಕುಲದ ಉಳಿವಿಗೆ ನೈಸರ್ಗಿಕ ಸಂಪತ್ತು ಅತ್ಯಂತ ಮುಖ್ಯವಾಗಿದ್ದು, ಅದರ ಉಳಿವಿಗೆ ಶ್ರಮಿಸಬೇಕಾಗಿರುವುದು ನಮ್ಮೆಲ್ಲರ ಸಂವಿಧಾನಿಕ ಜವಾಬ್ದಾರಿ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ.

ಅರಣ್ಯ ಇಲಾಖೆ ಸೋಮವಾರ ವಿಧಾನಸೌಧದ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ವಿಶೇಷ ಸೇವೆ ಸಲ್ಲಿಸಿದ ಅರಣ್ಯ ಇಲಾಖೆಯ 75 ಸಿಬ್ಬಂದಿಗೆ ಮುಖ್ಯಮಂತ್ರಿ ಪದಕ ಪ್ರದಾನ ಮಾಡಿ ಮಾತನಾಡಿದರು.

ಹೆಚ್ಚುತ್ತಿರುವ ಜನ ಸಂಖ್ಯೆ, ಜನರ ಜೀವನ ಶೈಲಿ ಮತ್ತು ನಗರೀಕರಣದಿಂದ ಅರಣ್ಯ ಮತ್ತು ವನ್ಯಜೀವಿ ಅಸ್ಥಿತ್ವಕ್ಕೆ ಧಕ್ಕೆಯಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಎಲ್ಲ ಒತ್ತಡಗಳನ್ನು ಮೀರಿ, ಅರಣ್ಯ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸಬೇಕಾಗಿರುವ ಜವಾಬ್ದಾರಿ ಇಲಾಖೆಯ ಸಿಬ್ಬಂದಿಯದ್ದಾಗಿದೆ ಎಂದರು.

ಕರ್ನಾಟಕ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಯಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿದೆ. ರಾಜ್ಯದ ಒಟ್ಟು ಭೂ ಭಾಗದ ಶೇ.22 ರಷ್ಟುಭೂಮಿಯನ್ನು ಅರಣ್ಯಕ್ಕಾಗಿ ಮೀಸಲಿರಿಸಲಾಗಿದ್ದು, ವನ್ಯ ಜೀವಿ ಸಂಪತ್ತಿನ ರಕ್ಷಣೆಯಲ್ಲಿ ರಾಜ್ಯ ಅಗ್ರ ಸ್ಥಾನದಲ್ಲಿದೆ. ‘ದೇಶದ ಒಟ್ಟು ಹುಲಿಗಳಲ್ಲಿ ಶೇ.10 ರಷ್ಟು, ಒಟ್ಟು ಆನೆಗಳಲ್ಲಿ ಶೇ.25ರಷ್ಟುರಾಜ್ಯದಲ್ಲಿವೆ’ ಎಂದರು.

ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶಿಸರ ಮಾತನಾಡಿ, ಅರಣ್ಯ ಇಲಾಖೆ ಸಿಬ್ಬಂದಿ ಹಸಿರು ಸಂರಕ್ಷಣೆಯ ವಾರಿಯ​ರ್‍ಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ಕೆಳ ಹಂತದ ಸಿಬ್ಬಂದಿಗೆ ವೇತನ ಸೇರಿದಂತೆ ಹಲವು ಸಮಸ್ಯೆಗಳಿವೆ.ಅಗತ್ಯ ತರಬೇತಿ ಮತ್ತು ಆರ್ಥಿಕ ನೆರವು ನೀಡಲು ಮುಖ್ಯಮಂತ್ರಿಗಳು ಮುಂದಾಗಬೇಕು ಎಂದರು.

ಅರಣ್ಯದಲ್ಲಿ ಪವರ್ ಸ್ಟಾರ್, ರಾಜಕುಮಾರನ ಸುತ್ತಾಟ ...

ಕಾರ್ಯಕ್ರಮದಲ್ಲಿ 2017, 2018 ಮತ್ತು 2019ನೇ ಸಾಲಿನಲ್ಲಿ ವಿಶೇಷ ಸೇವೆ ಸಲ್ಲಿಸಿದ ಸಿಬ್ಬಂದಿಗೆ ಮುಖ್ಯಮಂತ್ರಿ ಪದಕ ಪ್ರದಾನ ಮಾಡಲಾಯಿತು. ‘ಕಾಡು’ ಎಂಬು ಕಾಫಿ ಟೇಬಲ್‌ ಪುಸ್ತಕ ಬಿಡುಗಡೆ ಮಾಡಲಾಯಿತು.

ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಸಂದೀಪ್‌ ದವೆ, ಪ್ರಧಾನ ಕಾರ್ಯದರ್ಶಿ ಸ್ಮಿತಾ ಬಿಜ್ಜೂರ್‌, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಪಡೆ ಮುಖ್ಯಸ್ಥ) ಸಂಜಯ್‌ ಮೋಹನ್‌ ಮತ್ತಿತರರಿದ್ದರು.

ಪೊಲೀಸ್‌ ಸಿಬ್ಬಂದಿ ಮಾದರಿಯಲ್ಲಿ ಸೌಲಭ್ಯ: ಆನಂದ ಸಿಂಗ್‌

ಬೆಂಗಳೂರು: ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿ ತಮ್ಮ ಜೀವ ಪಣಕ್ಕಿಟ್ಟು ವನ್ಯಜೀವಿ ಸಂಪತ್ತು ರಕ್ಷಣೆ ಮಾಡುತ್ತಿದ್ದು, ಅವರಿಗೆ ಪೊಲೀಸ್‌ ಇಲಾಖೆ ಸಿಬ್ಬಂದಿಯ ಮಾದರಿಯಲ್ಲಿ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಅರಣ್ಯ ಇಲಾಖೆ ಸಚಿವ ಆನಂದ್‌ಸಿಂಗ್‌ ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೊಲೀಸ್‌ ಇಲಾಖೆ ಮಾದರಿಯಲ್ಲಿ ವೇತನ ಮತ್ತು ಇತರೆ ಸೌಲಭ್ಯಗಳನ್ನು ನೀಡುವಂತೆ ಇಲಾಖೆ ಸಿಬ್ಬಂದಿ ಮನವಿ ಮಾಡಿದ್ದಾರೆ. ಈ ಅಂಶ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಪೊಲೀಸ್‌ ಸಿಬ್ಬಂದಿಗೆ ಸಿಗುತ್ತಿರುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದರು.

ಕನ್ನಡಪ್ರಭ-ಸುವರ್ಣ ನ್ಯೂಸ್‌ ಅಭಿಯಾನಕ್ಕೆ ಸ್ಪಂದನೆ

ಪೊಲೀಸ್‌ ಇಲಾಖೆ ಮಾದರಿಯಲ್ಲಿ ಅರಣ್ಯ ಸಂರಕ್ಷಣೆಯಲ್ಲಿ ಶ್ರಮಿಸುತ್ತಿರುವ ಸಿಬ್ಬಂದಿಗೆ ಮುಖ್ಯಮಂತ್ರಿಗಳ ಪದಕ ನೀಡಬೇಕು ಎಂದು ಕನ್ನಡಪ್ರಭ- ಸುವರ್ಣ ನ್ಯೂಸ್‌ನಿಂದ 2016ರಲ್ಲಿ ಅಭಿಯಾನ ಪ್ರಾರಂಭಿಸಿತ್ತು. ಅಭಿಯಾನಕ್ಕೆ ಸ್ಪಂದಿಸಿದ ಸರ್ಕಾರ 2017ರಿಂದ ಅರಣ್ಯ ಇಲಾಖೆ ಸಿಬ್ಬಂದಿಗೆ ಮುಖ್ಯಮಂತ್ರಿಗಳ ಪದಕ ನೀಡಲು ಅಧಿಸೂಚನೆ ಹೊರಡಿಸಿತ್ತು. ಕಾರಣಾಂತರಗಳಿಂದ ಕಳೆದ ಮೂರು ವರ್ಷಗಳಿಂದ ಪದಕ ಪ್ರದಾನವಾಗಿರಲಿಲ್ಲ. ಇದೀಗ ಮೂರು ವರ್ಷ ಸೇರಿ ಒಟ್ಟು 75( ವರ್ಷಕ್ಕೆ 25ರಂತೆ) ಸಿಬ್ಬಂದಿಗೆ ಪದಕ ಪ್ರದಾನ ಮಾಡಲಾಗಿದೆ.