ಪೊಲೀಸ್‌ ವರ್ಗಾವಣೆ ಸಂಬಂಧ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಹಾಗೂ ಗೃಹ ಸಚಿವರ ಜತೆ ಮುಖ್ಯಮಂತ್ರಿಗಳು ರಹಸ್ಯ ಸಭೆ ನಡೆಸಿದ ಬಳಿಕ ಮಂಗಳವಾರ ಸಾಮೂಹಿಕ ವರ್ಗಾವಣೆ ನಡೆದಿದೆ. 

ಬೆಂಗಳೂರು(ಆ.02): ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ರಾಜ್ಯದಲ್ಲಿ ನೂರಕ್ಕೂ ಹೆಚ್ಚು ತಹಸೀಲ್ದಾರ್‌, ಬಳಿಕ ಡಿವೈಎಸ್‌ಪಿಗಳ ವರ್ಗಾವಣೆ ನಡೆಸಿದ್ದ ರಾಜ್ಯ ಸರ್ಕಾರ ಇದೀಗ 211 ಪೊಲೀಸ್‌ ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿದೆ. ಪೊಲೀಸ್‌ ವರ್ಗಾವಣೆ ಸಂಬಂಧ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಹಾಗೂ ಗೃಹ ಸಚಿವರ ಜತೆ ಮುಖ್ಯಮಂತ್ರಿಗಳು ರಹಸ್ಯ ಸಭೆ ನಡೆಸಿದ ಬಳಿಕ ಮಂಗಳವಾರ ಸಾಮೂಹಿಕ ವರ್ಗಾವಣೆ ನಡೆದಿದೆ.

ಪೊಲೀಸ್‌ ವರ್ಗಾವಣೆ ವಿಚಾರವಾಗಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹಾಗೂ ಡಿಜಿಪಿ ಅಲೋಕ್‌ ಮೋಹನ್‌ ಅವರೊಂದಿಗೆ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಗೌಪ್ಯ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಪೊಲೀಸರ ವರ್ಗಾವಣೆ ವಿಚಾರವಾಗಿ ಶಾಸಕರ ‘ಮಿನಿಟ್‌’ಗಳ (ಶಿಫಾರಸು) ಬಗ್ಗೆ ಸುದೀರ್ಘವಾಗಿ ಸಮಾಲೋಚಿಸಿದ ಮುಖ್ಯಮಂತ್ರಿಗಳು, ಶಾಸಕರ ಅಭಿಪ್ರಾಯಕ್ಕೆ ಮನ್ನಣೆ ನೀಡುವಂತೆ ಡಿಜಿಪಿಗೆ ಮೌಖಿಕವಾಗಿ ಸೂಚಿಸಿದ್ದರು ಎನ್ನಲಾಗಿದೆ.

146 ತಹಸೀಲ್ದಾರ್‌ ದಿಢೀರ್‌ ವರ್ಗಾವಣೆ: ಶಾಸಕರ ಅತೃಪ್ತಿ ಶಮನಕ್ಕೆ ಸರ್ಕಾರ ಯತ್ನ

ಮುಖ್ಯಮಂತ್ರಿಗಳ ಸಭೆ ಬಳಿಕ ಪೊಲೀಸ್‌ ವರ್ಗಾವಣೆ ಸಲುವಾಗಿರುವ ಪೊಲೀಸ್‌ ಎಸ್ಟಾಬ್ಲಿಷ್ಮೆಂಟ್‌ ಬೋರ್ಡ್‌ (ಪಿಇಬಿ) ಅಧ್ಯಕ್ಷರೂ ಆಗಿರುವ ಅಲೋಕ್‌ ಮೋಹನ್‌ ಅವರು, ಪಿಇಬಿ ಸಭೆಯನ್ನು ಕರೆದು ವರ್ಗಾವಣೆ ಪಟ್ಟಿಅಖೈರುಗೊಳಿಸಿದರು. ನಂತರ ಮೊದಲ ಹಂತವಾಗಿ ರಾತ್ರಿಯೇ 45 ಡಿವೈಎಸ್ಪಿ/ಎಸಿಪಿಗಳ ವರ್ಗಗೊಳಿಸಿದ್ದ ಪೊಲೀಸ್‌ ಇಲಾಖೆ, ಮಂಗಳವಾರ 211 ಇನ್ಸ್‌ಪೆಕ್ಟರ್‌ಗಳನ್ನು ವರ್ಗಗೊಳಿಸಿದೆ.