Asianet Suvarna News Asianet Suvarna News

ಬೆಂಗಳೂರು: 166 ಸೈಟಿಂದ ಬಿಡಿಎ ಬೊಕ್ಕಸಕ್ಕೆ 21೦ ಕೋಟಿ

ಬಿಡಿಎ ಹರಾಜಿಗಿಟ್ಟಿದ್ದ 195 ಮೂಲ ನಿವೇಶನಗಳ ಪೈಕಿ 166 ಹರಾಜು| ಇವುಗಳ ಮಾರಾಟದಿಂದ ಒಟ್ಟು 210.82 ಕೋಟಿ ರು. ಬಿಡಿಎಗೆ ಬರಲಿದೆ| ನಿವೇಶನಗಳನ್ನು ಬಿಡ್‌ ಮಾಡಿದವರು ಮೂರು ದಿನಗಳಲ್ಲಿ ಶೇ.25ರಷ್ಟು ಮುಂಗಡ ಹಣ ಕಟ್ಟಬೇಕಿದ್ದು, 52.70 ಕೋಟಿ ರು. ಬಿಡಿಎಗೆ ಸಂದಾಯವಾಗುವ ನಿರೀಕ್ಷೆ ಇದೆ|

210 Crore Rs to BDA from 166 Sites in Bengaluru
Author
Bengaluru, First Published Jul 12, 2020, 9:48 AM IST

ಬೆಂಗಳೂರು(ಜು.12): ಸಂಪನ್ಮೂಲವನ್ನು ಕ್ರೋಢೀಕರಿಸುವ ಸಲುವಾಗಿ ಸರ್ಕಾರದ ಆದೇಶದಂತೆ ತನ್ನ ಮೂಲೆ ನಿವೇಶನ ಹರಾಜಿಗೆ ಮುಂದಾಗಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ದ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮೊದಲ ಹಂತದಲ್ಲೇ 200 ಕೋಟಿಗೂ ಅಧಿಕ ಮೊತ್ತ ಸಂಗ್ರಹವಾಗಲಿದೆ.

"

ಬಿಡಿಎ ಹರಾಜಿಗಿಟ್ಟಿದ್ದ 195 ಮೂಲೆ ನಿವೇಶನಗಳ ಪೈಕಿ 166 ಹರಾಜಾಗಿದ್ದು, ಇವುಗಳ ಮಾರಾಟದಿಂದ ಒಟ್ಟು 210.82 ಕೋಟಿ ರು. ಬಿಡಿಎಗೆ ಬರಲಿದೆ. 195 ಮೂಲೆ ನಿವೇಶನಗಳ ಇ-ಹರಾಜು ಪ್ರಕ್ರಿಯೆ ಶುಕ್ರವಾರ ಅಂತ್ಯಗೊಂಡಿದ್ದು 2500ಕ್ಕೂ ಹೆಚ್ಚು ಮಂದಿ ಬಿಡ್‌ನಲ್ಲಿ ಪಾಲ್ಗೊಂಡಿದ್ದರು. 195 ನಿವೇಶನಗಳ ಪೈಕಿ 10 ನಿವೇಶನಗಳಿಗೆ ಯಾರೂ ಬಿಡ್‌ ಮಾಡಲಿಲ್ಲ. ಬಿಡಿಎ ನಿಗದಿಪಡಿಸಿದ ದರಕ್ಕಿಂತ ಶೇ.5 ಮೌಲ್ಯ ಹೆಚ್ಚಿಗೆ ಬಾರದ ಹಿನ್ನೆಲೆಯಲ್ಲಿ 19 ನಿವೇಶನಗಳ ಹರಾಜನ್ನು ತಡೆ ಹಿಡಿಯಲಾಗಿತ್ತು. ಹೀಗಾಗಿ 29 ನಿವೇಶನಗಳ ಹರಾಜು ರದ್ದುಗೊಳಿಸಲಾಗಿತ್ತು.

ಕೊರೋನಾ ಆರ್ಭಟ: ಫೀವರ್‌ ಕ್ಲಿನಿಕ್‌ ಜತೆ ತುರ್ತು ಚಿಕಿತ್ಸಾ ಕ್ಲಿನಿಕ್‌

ನಿವೇಶನಗಳನ್ನು ಬಿಡ್‌ ಮಾಡಿದವರು ಮೂರು ದಿನಗಳಲ್ಲಿ ಶೇ.25ರಷ್ಟು ಮುಂಗಡ ಹಣ ಕಟ್ಟಬೇಕಿದ್ದು, 52.70 ಕೋಟಿ ರು. ಬಿಡಿಎಗೆ ಸಂದಾಯವಾಗುವ ನಿರೀಕ್ಷೆ ಇದೆ. ಉಳಿದ ಶೇ.75ರಷ್ಟುಹಣವನ್ನು ಬಿಡಿಎಯಿಂದ ಯಶಸ್ವಿ ಬಿಡ್ಡಿಂಗ್‌ ಪತ್ರ ತಲುಪಿದ 45 ದಿನಗಳ ಒಳಗಾಗಿ ಹಣ ಪಾವತಿ ಮಾಡಬೇಕಿದೆ. ತಾಂತ್ರಿಕ ದೋಷ ಉಂಟಾದ ಕಾರಣ ಈ ಬಾರಿ ಬಿಡ್ಡಿಂಗ್‌ ಅವಧಿಯನ್ನು 3 ದಿನ ವಿಸ್ತರಣೆ ಮಾಡಲಾಗಿತ್ತು. ಬಿಡಿಎ ಮುಂದಿನ ವಾರ ಮತ್ತೆ 300 ಮೂಲೆ ನಿವೇಶನಗಳ ಹರಾಜಿಗೆ ಸಿದ್ಧತೆ ಮಾಡಿಕೊಂಡಿದೆ.

ಇಂಜಿನಿಯರ್‌ಗಳಿಗೆ ನೋಟಿಸ್‌

ಬಿಡಿಎ ಮೊದಲ ಹಂತದಲ್ಲಿ 202 ಮೂಲೆ ನಿವೇಶನಗಳನ್ನು ಇ-ಹರಾಜಿಗೆ ಇಟ್ಟಿತ್ತು. ಆದರೆ ಕೊನೆಯ ಹಂತದಲ್ಲಿ ಏಳು ನಿವೇಶನಗಳು ಬಪರ್‌ ಜೋನ್‌ನಲ್ಲಿದ್ದು, ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿ ಇರುವುದು ಬಿಡಿಎ ಗಮನಕ್ಕೆ ಬಂದಿತ್ತು. ಹೀಗಾಗಿ ನೋಟಿಫಿಕೇಷನ್‌ ಬಳಿಕ ಏಳು ನಿವೇಶನಗಳನ್ನು ಹರಾಜಿನಿಂದ ಕೈಬಿಡಲಾಗಿದ್ದು, ಸರಿಯಾದ ಮಾಹಿತಿ ನೀಡುವಲ್ಲಿ ವಿಫಲರಾದ ಇಂಜಿನಿಯರ್‌ಗಳಿಗೆ ಬಿಡಿಎ ಆಯುಕ್ತ ಮಹದೇವ್‌ ನೋಟಿಸ್‌ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿದ ಬಿಡಿಎ ಆಯುಕ್ತ ಡಾ.ಎಚ್‌.ಆರ್‌.ಮಹದೇವ್‌ ಅವರು, ಸರ್ಕಾರದ ಆದೇಶದಂತೆ ಸಂಪನ್ಮೂಲವನ್ನು ಕ್ರೋಢೀಕರಿಸುವ ಪ್ರಯತ್ನದ ಅಂಗವಾಗಿ ಮೂಲೆ ನಿವೇಶನವನ್ನು ಹರಾಜಿಗೆ ಇರಿಸಲಾಗಿತ್ತು. ಈ ಹರಾಜು ಪ್ರಕ್ರಿಯೆಯಲ್ಲಿ ರಾಜ್ಯದ ಸಾಮಾನ್ಯ, ಮಧ್ಯಮ ವರ್ಗದ ಮತ್ತು ಅನಿವಾಸಿ ಕರ್ನಾಟಕ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ​ ಎಂದು ತಿಳಿಸಿದ್ದಾರೆ. 
 

Follow Us:
Download App:
  • android
  • ios