ಬೆಂಗಳೂರು(ಜು.12): ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೋನಾ ಸೋಂಕು ನಿಯಂತ್ರಣಕ್ಕೆ ಬಿಬಿಎಂಪಿ ಎಂಟು ವಲಯಗಳಿಗೆ ಎಂಟು ಮಂದಿ ಸಚಿವರಿಗೆ ಉಸ್ತುವಾರಿ ನೀಡಲಾಗಿದ್ದು, ಶನಿವಾರ ಪಶ್ಚಿಮ ವಲಯದ ಉಸ್ತುವಾರಿ ಹೊತ್ತಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಹಾಗೂ ದಕ್ಷಿಣ ವಲಯದ ಉಸ್ತುವಾರಿ ಹೊತ್ತಿರುವ ಕಂದಾಯ ಸಚಿವ ಆರ್‌. ಅಶೋಕ್‌ ಬಿಬಿಎಂಪಿ ಅಧಿಕಾರಿಗಳು, ಶಾಸಕರು ಮತ್ತು ವಾರ್ಡ್‌ ಸದಸ್ಯರೊಂದಿಗೆ ಶನಿವಾರ ಪ್ರತ್ಯೇಕ ಸಭೆ ನಡೆಸಿದ್ದಾರೆ. 

ಬಿಬಿಎಂಪಿ ಪಶ್ಚಿಮ ವಲಯದ ಶಾಸಕರು, ಬಿಬಿಎಂಪಿ ಸದಸ್ಯರು ಮತ್ತು ಅಧಿಕಾರಿಗಳೊಂದಿಗೆ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಶ್ವತ್ಥ ನಾರಾಯಣ, ಪಶ್ಚಿಮ ವಲಯದಲ್ಲಿ ಕೊರೋನಾ ಸೋಂಕಿನ ಬಗ್ಗೆ ಸಮಗ್ರ ಮಾಹಿತಿ ನೀಡಲು ಹಾಗೂ ಆಸ್ಪತ್ರೆ, ಕೊರೋನಾ ಆರೈಕೆ ಕೇಂದ್ರಗಳು, ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಹಾಗೂ ಸಾರ್ವಜನಿಕರ ನಡುವೆ ನೇರ ಸಂಪರ್ಕ ಸೇತುವೆಯಾಗಿ ದಿನದ 24 ಗಂಟೆ ಕೆಲಸ ಮಾಡುವ ಸಹಾಯವಾಣಿ ಆರಂಭಿಸಲಾಗುತ್ತಿದೆ. ಇದರಿಂದ ಎಲ್ಲ ಮಾಹಿತಿ ಅಂಗೈನಲ್ಲೇ ಸಿಗಲಿದೆ. ಸೋಂಕಿತರ ಪರೀಕ್ಷೆ, ಅವರನ್ನು ಆಸ್ಪತ್ರೆಗೆ ಸಾಗಿಸುವುದು, ಕ್ವಾರಂಟೈನ್‌, ಹೋಮ್‌ ಆರೈಕೆ ಸೇರಿ ಎಲ್ಲ ಸಂಗತಿಗಳ ಬಗ್ಗೆ ಇಲ್ಲಿ ಮಾಹಿತಿ ಲಭ್ಯವಾಗುತ್ತದೆ ಎಂದು ತಿಳಿಸಿದರು.

ಬ್ರೆಕಿಂಗ್; ಒಂದು ವಾರ ಬೆಂಗಳೂರು ಕಂಪ್ಲೀಟ್ ಲಾಕ್‌ಡೌನ್; ಸರ್ಕಾರದ ಅಧಿಕೃತ ಆದೇಶ

ತುರ್ತು ಚಿಕಿತ್ಸಾ ಕ್ಲಿನಿಕ್‌: 

ಬಿಬಿಎಂಪಿಯ ಎಲ್ಲ ವಾರ್ಡ್‌ಗಳಲ್ಲಿರುವ ಫೀವರ್‌ ಕ್ಲಿನಿಕ್‌ಗಳಿಗೆ ಪರ್ಯಾಯವಾಗಿ ತುರ್ತು ಕ್ಲಿನಿಕ್‌ಗಳನ್ನು ತೆರೆಯಲಾಗುತ್ತಿದೆ. ಜತೆಗೆ ಎಲ್ಲ ಆಸ್ಪತ್ರೆಗಳಲ್ಲಿಯೂ ಕೊರೋನಾ ಸೋಂಕು ರಹಿತ ರೋಗಿಗಳಿಗೆ ಆದ್ಯತೆಯ ಮೇರೆಗೆ ಚಿಕಿತ್ಸೆ ನೀಡಬೇಕು. ಪ್ರತಿ ಉಪ ವಿಭಾಗದಲ್ಲಿಯೂ ಬಿಬಿಎಂಪಿ ಆಸ್ಪತ್ರೆಗಳು ಹಾಗೂ ಖಾಸಗಿ ನರ್ಸಿಂಗ್‌ ಹೋಂಗಳಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು. ಕೊರೋನಾ ಚಿಕಿತ್ಸೆಗೆ ಒಂದು ವೇಳೆ ಹಣದ ಕೊರತೆ ಉಂಟಾದರೆ ಅಭಿವೃದ್ಧಿ ಕಾಮಗಾರಿಗಳಿಗೆ ಮೀಸಲಾದ ಅನುದಾನ ಬಳಸುವಂತೆ ಸೂಚಿಸಿದರು.

ಖಾಸಗಿ ಆಸ್ಪತ್ರೆಯಲ್ಲಿ ಹಾಸಿಗೆ ಸಂಖ್ಯೆ ಹೆಚ್ಚಳ

ಇನ್ನು ದಕ್ಷಿಣ ವಲಯದ ಶಾಸಕರು, ಪಾಲಿಕೆ ಸದಸ್ಯರು ಮತ್ತು ಅಧಿಕಾರಿಗಳೊಂದಿಗೆ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಆರ್‌. ಅಶೋಕ, ಸೋಂಕು ಪರಿಣಾಮಕಾರಿಯಾಗಿ ತಡೆಯುವ ನಿಟ್ಟಿನಲ್ಲಿ ಆಸ್ಪತ್ರೆಗಳಲ್ಲಿನ ಹಾಸಿಗೆ ಸಂಖ್ಯೆ ಹೆಚ್ಚಿಸಲು ತೀರ್ಮಾನ ಮಾಡಿದ್ದೇವೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಎಷ್ಟುಹಾಸಿಗೆಗಳು ಲಭ್ಯ ಇವೆ. ಎಷ್ಟುಆಸ್ಪತ್ರೆಗಳಿವೆ ಎನ್ನುವುದು ಆಯಾ ಕ್ಷೇತ್ರದ ಶಾಸಕರಿಗೆ ತಿಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಸೋಮವಾರ ಸಂಪೂರ್ಣ ಮಾಹಿತಿ ಸಿಗಲಿದೆ ಎಂದರು.

ದಕ್ಷಿಣ ವಲಯದಲ್ಲಿ ವಾರ್ಡ್‌ವಾರು ತಲಾ ಹತ್ತು ಸ್ವಯಂ ಸೇವಕರ ನೇಮಕ ಮಾಡಿಕೊಳ್ಳಲಾಗಿದೆ. ಇವರು ಸೋಂಕು ಪತ್ತೆಯಾದ ವಾರ್ಡ್‌ಗಳಲ್ಲಿ ಕೂಡಲೇ ಸೋಂಕಿತರ ಮನೆ, ಬೀದಿಯನ್ನು ಕಂಟೈನ್ಮೆಂಟ್‌ ನಿಯಮ ಪಾಲನೆ ಮಾಡುವುದಕ್ಕೆ ಸಹಕಾರ ನೀಡುತ್ತಾರೆ. ಸೋಂಕಿತರ ಮನೆಗಳಿಗೆ ದಿನಸಿ ಹಾಗೂ ಅಗತ್ಯ ವಸ್ತುಗಳನ್ನು ಪೂರೈಕೆಯನ್ನು ಸ್ವಯಂ ಸೇವಕರು ಸ್ವಂತ ವೆಚ್ಚದಲ್ಲಿ ನಿರ್ವಹಿಸಲು ಮುಂದೆ ಬಂದಿದ್ದಾರೆ. ಸಂಸದ ತೇಜಸ್ವಿನಿ ಸೂರ್ಯ ಅವರು ದಕ್ಷಿಣ ವಲಯದಲ್ಲಿ ಸಹಾಯವಾಣಿ ತೆರೆಯಲಿದ್ದಾರೆ. ಆಯಾ ವಾರ್ಡ್‌ನ ಸದಸ್ಯರಿಗೆ ಹೆಚ್ಚು ಹೊಣೆ ನೀಡಲಾಗುವುದು ಎಂದು ಹೇಳಿದರು.

ದುಡ್ಡು ಮಾಡಿದ್ದು ಸಾಕು: 

ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡ ಅಶೋಕ, ಇಷ್ಟು ದಿನ ದುಡ್ಡು ಮಾಡಿದ್ದು ಸಾಕು. ಈಗ ಮಾನವೀಯತೆ ಮೆರೆಯುವ ಸಮಯ. ಸಾಯೋವರೆಗೂ ದುಡ್ಡು ಮಾಡಬಹುದು. ಆದರೆ, ಈ ಸಮಯದಲ್ಲಿ ನೀವು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಇನ್ನು ಆರು ತಿಂಗಳ ಕಾಲ ಧಾರಾಳ ಮನಸ್ಸಿನಿಂದ ಕೆಲಸ ಮಾಡಬೇಕು ಎಂದರು.