1 ವಾರದ ಬಳಿಕ ರಾಜ್ಯದಲ್ಲಿ ಮತ್ತೆ 2000+ ಕೋವಿಡ್ ಕೇಸ್, 5 ಸಾವು
ರಾಜ್ಯದಲ್ಲಿ ಕೊರೋನಾ ಹೊಸ ಪ್ರಕರಣಗಳು ಒಂದು ವಾರದ ಬಳಿಕ ಮತ್ತೆ ಎರಡು ಸಾವಿರ ಗಡಿ ದಾಟಿವೆ. ಶುಕ್ರವಾರ 2,032 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 1686 ಮಂದಿ ಗುಣಮುಖರಾಗಿದ್ದಾರೆ.
ಬೆಂಗಳೂರು (ಆ.13): ರಾಜ್ಯದಲ್ಲಿ ಕೊರೋನಾ ಹೊಸ ಪ್ರಕರಣಗಳು ಒಂದು ವಾರದ ಬಳಿಕ ಮತ್ತೆ ಎರಡು ಸಾವಿರ ಗಡಿ ದಾಟಿವೆ. ಶುಕ್ರವಾರ 2,032 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 1686 ಮಂದಿ ಗುಣಮುಖರಾಗಿದ್ದಾರೆ. ಐದು ಮಂದಿ ಸಾವಿಗೀಡಾಗಿದ್ದಾರೆ. 30 ಸಾವಿರ ಸೋಂಕು ಪರೀಕ್ಷೆಗಳು ನಡೆದಿದ್ದು, ಪಾಸಿಟಿವಿಟಿ ದರ ಶೇ.6.6 ರಷ್ಟುದಾಖಲಾಗಿದೆ. ಗುರುವಾರಕ್ಕೆ ಹೋಲಿದರೆ 3000 ಹೆಚ್ಚು ಪರೀಕ್ಷೆ ನಡೆಸಲಾಗಿದೆ. ಹೀಗಾಗಿ, ಹೊಸ ಪ್ರಕರಣಗಳು 341 ಏರಿಕೆಯಾಗಿವೆ.(ಗುರುವಾರ 1691 ಕೇಸ್, ಸಾವು ಆರು)
ಆಗಸ್ಟ್ ಮೊದಲ ವಾರ ಹೊಸ ಪ್ರಕರಣಗಳು ಎರಡು ಸಾವಿರ ಗಡಿದಾಟಿದ್ದವು. ಆಗಸ್ಟ್ 5 ರಂದು 2042 ಹೊಸ ಪ್ರಕರಣಗಳು ವರದಿಯಾಗಿದ್ದವು. ಸದ್ಯ ಒಂದು ವಾರಗಳ ನಂತರ ಮತ್ತೆ ಎರಡು ಸಾವಿರ ಗಡಿದಾಟಿವೆ. ಧಾರವಾಡದಲ್ಲಿ 52 ವರ್ಷದ ಮಹಿಳೆ, ಬಳ್ಳಾರಿಯಲ್ಲಿ ಇಬ್ಬರು ವೃದ್ಧರು, ಕೊಪ್ಪಳ, ಉತ್ತರ ಕನ್ನಡದಲ್ಲಿ ತಲಾ ಒಬ್ಬರು ವೃದ್ಧರು ಸಾವಿಗಿಡಾಗಿದ್ದಾರೆ. ಎಲ್ಲರು ಸರ್ಕಾರಿ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದು, ವಯೋಸಜಹ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಉಚಿತ 3ನೇ ಡೋಸ್ ನೀಡಿದರೂ ಜನ ಪಡೆಯುತ್ತಿಲ್ಲ: ಸಚಿವ ಸುಧಾಕರ್
ಉಡುಪಿಯಲ್ಲಿ 7 ಮಂದಿಗೆ ಕೋವಿಡ್: ಜಿಲ್ಲೆಯಲ್ಲಿ ಶುಕ್ರವಾರ 548 ಮಂದಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದ್ದು, ಅವರಲ್ಲಿ ಉಡುಪಿ ತಾಲೂಕಿನ 4 ಮತ್ತು ಕುಂದಾಪುದ 3 ಮಂದಿಗೆ ಸೋಂಕು ತಗಲಿರುವುದು ಪತ್ತೆಯಾಗಿದೆ. ಈದಿನ 6 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ 29 ಮಂದಿ ಸಕ್ರಿಯ ಸೋಂಕಿತರಿದ್ದಾರೆ. ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 540 ಮಂದಿ ಕೋವಿಡ್ ನಿಂದ ಮೃತಪಟ್ಟಿದ್ದಾರೆ.
ದ.ಕ.ಜಿಲ್ಲೆಯಲ್ಲಿ 14 ಕೊರೋನಾ ಕೇಸ್: ದ.ಕ.ಜಿಲ್ಲೆಯಲ್ಲಿ ಶುಕ್ರವಾರ 14 ಕೊರೋನಾ ಕೇಸ್ ಪತ್ತೆಯಾಗಿದೆ. 15 ಮಂದಿ ಗುಣಮುಖರಾಗಿದ್ದು, ಪ್ರಸಕ್ತ 53 ಸಕ್ರಿಯ ಪ್ರಕರಣ ಇದೆ. ಜಿಲ್ಲೆಯ ಪಾಸಿಟಿವಿಟಿ ರೇಟ್ ಶೇ.1.32 ಆಗಿದೆ. ಇಲ್ಲಿವರೆಗೆ ಒಟ್ಟು ಪಾಸಿಟಿವ್ ಕೇಸ್‌ಗಳ ಸಂಖ್ಯೆ 1,36,398ಕ್ಕೆ ಏರಿಕೆಯಾಗಿದ್ದು, 1,34,488 ಮಂದಿ ಗುಣಮುಖರಾಗಿದ್ದಾರೆ. ಕೋವಿಡ್ ಸಾವಿನ ಸಂಖ್ಯೆ 1,857 ಆಗಿದೆ ಎಂದು ಹೆಲ್ತ್ ಬುಲೆಟಿನ್ ತಿಳಿಸಿದೆ.
ಕೊಡಗಿನಲ್ಲಿ 25 ಹೊಸ ಕೋವಿಡ್ ಪ್ರಕರಣ ಪತ್ತೆ: ಜಿಲ್ಲೆಯಲ್ಲಿ ಶುಕ್ರವಾರ 25 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದೆ. ಮಡಿಕೇರಿ ತಾಲೂಕಿನಲ್ಲಿ 5, ವಿರಾಜಪೇಟೆ ತಾಲೂಕಿನಲ್ಲಿ 12, ಸೋಮವಾರಪೇಟೆ ತಾಲೂಕಿನಲ್ಲಿ 8 ಕೋವಿಡ್ ಕೇಸ್‌ಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿನ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 48,081 ಆಗಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ 12 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಒಟ್ಟು 47, 506 ಮಂದಿ ಗುಣಮುಖರಾಗಿದ್ದಾರೆ. ಇದುವರೆಗೆ ಒಟ್ಟು 451 ಮರಣ ಪ್ರಕರಣಗಳು ವರದಿಯಾಗಿದೆ. 124 ಸಕ್ರಿಯ ಪ್ರಕರಣಗಳಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ಯಾವುದೇ ಸಾವು ಸಂಭವಿಸಿಲ್ಲ. ಕಂಟೈನ್ಮೆಂಟ್ ವಲಯಗಳ ಸಂಖ್ಯೆ 20 ಆಗಿದೆ. ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇ.4.76 ಆಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ ಅವರು ತಿಳಿಸಿದ್ದಾರೆ.
Corona Crisis: ಕೋವಿಡ್ ಸೋಂಕಿತರ ಸಾವು ಹೆಚ್ಚಳ: ಆತಂಕ
ಎಲ್ಲಿ ಎಷ್ಟು ಕೇಸ್?: ಶುಕ್ರವಾರ ಪತ್ತೆಯಾದ ಹೊಸ ಪ್ರಕರಣಗಳ ಪೈಕಿ ಬೆಂಗಳೂರಿನಲ್ಲಿ 1202 ಪತ್ತೆಯಾಗಿವೆ. ಉಳಿದಂತೆ ಅತಿ ಹೆಚ್ಚು ಮೈಸೂರು 132, ಹಾಸನ 77, ಧಾರವಾಡ 75, ಬೆಂಗಳೂರು ಗ್ರಾಮಾಂತರ 60 ಮಂದಿಗೆ ಸೋಂಕು ತಗುಲಿದೆ. ಆರು ಜಿಲ್ಲೆಗಳಲ್ಲಿ ಬೆರಳೆಣಿಕೆ, ಬೀದರ್‌ನಲ್ಲಿ ಶೂನ್ಯ ಪ್ರಕರಣಗಳು ವರದಿಯಾಗಿವೆ. ಸದ್ಯ ಸಕ್ರಿಯ ಸೋಂಕಿತರ ಸಂಖ್ಯೆ 10,395ಕ್ಕೆ ಹೆಚ್ಚಿವೆ. ಈ ಪೈಕಿ 65 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 5 ಮಂದಿ ಐಸಿಯು, 6 ಮಂದಿ ಆಕ್ಸಿಜನ್, 54 ಮಂದಿ ಸಾಮಾನ್ಯ ಹಾಸಿಗೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 10,335 ಮಂದಿ ಮನೆಯಲ್ಲಿ ಆರೈಕೆಯಲ್ಲಿದ್ದಾರೆ.