ಕುರಿಗಾರರಿಗೆ ತಲಾ 20 ಕುರಿ, 1 ಮೇಕೆ: ಸಿಎಂ ಬೊಮ್ಮಾಯಿ
ಪ್ರತಿಯೊಬ್ಬ ಕುರಿಗಾರರರಿಗೂ 20 ಕುರಿ, ಒಂದು ಮೇಕೆಯನ್ನು ನೀಡುವ ಮೂಲಕ ಕುರಿಗಾರರ ಕುಟುಂಬ ಸ್ವಾವಲಂಬಿ ಬದುಕು ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ಹಾವೇರಿ (ನ.09): ಪ್ರತಿಯೊಬ್ಬ ಕುರಿಗಾರರರಿಗೂ 20 ಕುರಿ, ಒಂದು ಮೇಕೆಯನ್ನು ನೀಡುವ ಮೂಲಕ ಕುರಿಗಾರರ ಕುಟುಂಬ ಸ್ವಾವಲಂಬಿ ಬದುಕು ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಮುಂದಿನ ತಿಂಗಳಿನಿಂದಲೇ ಈ ಯೋಜನೆ ಜಾರಿಗೆ ತರುತ್ತಿದ್ದೇವೆ. ಇದಕ್ಕಾಗಿ .324 ಕೋಟಿ ಮೀಸಲಿಟ್ಟಿದ್ದೇವೆ. ಯುವಕರು, ಬಡವರು, ರೈತರ ಪರವಾಗಿ ಕೆಲಸ ಮಾಡುವ ತಾಕತ್ತು, ದಮ್ ಯಾರಿಗಾದರೂ ಇದ್ದರೆ ಅದು ನಮ್ಮ ಸರ್ಕಾರಕ್ಕೆ ಮಾತ್ರ ಎಂದು ಹೇಳಿದ್ದಾರೆ.
ಹಾವೇರಿ ಜಿಲ್ಲೆ ಬ್ಯಾಡಗಿಯಲ್ಲಿ ಮಂಗಳವಾರ ಆಯೋಜಿಸಿದ್ದ ಬಿಜೆಪಿ ಜನಸಂಕಲ್ಪ ಯಾತ್ರೆ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ದೊಡ್ಡ ಸಂಖ್ಯೆಯಲ್ಲಿ ಕುರಿಗಾರರಿದ್ದಾರೆ. ಅವರಿಗೆ ಒಂದು ಒಳ್ಳೆಯ ಸುದ್ದಿ ನಾನು ಕೊಡುತ್ತಿದ್ದೇನೆ. ಪ್ರತಿಯೊಬ್ಬ ಕುರಿಗಾರರಿಗೂ 20 ಕುರಿ, ಒಂದು ಮೇಕೆ ನೀಡುವ ಯೋಜನೆಯನ್ನು ಬರುವ ತಿಂಗಳಿಂದ ಜಾರಿ ಮಾಡಲು ತೀರ್ಮಾನ ಮಾಡಿದ್ದೇವೆ. ಕುರಿಗಾರರ ಕುಟುಂಬ ಸ್ವಾವಲಂಬಿ ಬದುಕು ನಡೆಸಲು ಈ ಯೋಜನೆಯನ್ನು ಜಾರಿಗೆ ತರುತ್ತಿದ್ದೇವೆ. ಇದಕ್ಕಾಗಿ .324 ಕೋಟಿಗಳನ್ನು ಮೀಸಲಿಟ್ಟಿದ್ದೇವೆ.
ಕಾಂಗ್ರೆಸ್‌ಗೆ ಸಿಎಂ ಬೊಮ್ಮಾಯಿ, ಯಡಿಯೂರಪ್ಪ ಚಾಟಿ
ಇದನ್ನು ಜಾರಿ ಮಾಡಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಹಿಂದುಳಿದವರ ಹೆಸರಿನಲ್ಲಿ, ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ನಿಮಗೆ ಯಾಕೆ ಇದು ಹೊಳೆಯಲಿಲ್ಲ ಸಿದ್ರಾಮಣ್ಣ? ಕುರಿಗಾರರು ಬಿಸಿಲು ಮಳೆಯಲ್ಲಿ ಸಿಕ್ಕಿಕೊಂಡು ಬದುಕು ಕಷ್ಟವಾಗಿದೆ. ಅವರಿಗೆ ಸಹಾಯ ಮಾಡುವ ಕನಿಷ್ಠ ವಿಚಾರ ನಿಮ್ಮ ತಲೆಗೆ ಬರಲಿಲ್ಲ. ಈಗ ನಾವು ಅದನ್ನು ಮಾಡುತ್ತಿದ್ದೇವೆ. ಸಾಮಾಜಿಕ ನ್ಯಾಯ ಭಾಷಣದಿಂದ ಬರುವುದಿಲ್ಲ ಎಂದು ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಗಳು ತಿವಿದರು.
ಸತೀಶ್ ಹೇಳಿಕೆ ‘ಭಾರತ ತೋಡೋ’ ಮನಸ್ಥಿತಿ: ಅಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ‘ಭಾರತ್ ಜೋಡೋ’ ಯಾತ್ರೆ ಮಾಡುತ್ತಿದ್ದಾರೆ. ಆದರೆ ರಾಜ್ಯ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಹಿಂದೂ ಪದದ ಬಗ್ಗೆ ವಿವಾದಾತ್ಮಕ ಹೇಳಿಕೆ ಮೂಲಕ ‘ಭಾರತ ತೋಡೋ’ ಮಾಡುತ್ತಿದ್ದಾರೆ. ಇದು ಭಾರತ ಒಡೆಯುವ ಸಂಚಿನ ಮನಸ್ಥಿತಿಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದರು. ಮಂಗಳವಾರ ಜಿಲ್ಲೆಯ ಬ್ಯಾಡಗಿ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡ ಬಿಜೆಪಿ ಜನಸಂಕಲ್ಪ ಯಾತ್ರೆಗೆ ಆಗಮಿಸಿದ ಅವರು ಮೋಟೆಬೆನ್ನೂರಿನ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇದು ಅವರ ಕೊಳಕು ಮನಸ್ಥಿತಿಯಾಗಿದೆ ಎಂದ ವ್ಯಂಗ್ಯವಾಡಿದರು.
ಸಾಲ ಕಟ್ಟದಿದ್ದರೂ ರೈತರ ಆಸ್ತಿ ಜಪ್ತಿ ಮಾಡುವಂತಿಲ್ಲ: ಸಿಎಂ ಬೊಮ್ಮಾಯಿ
ಒಂದು ಸಮಗ್ರವಾಗಿ ಇರುವ ಪರಂಪರೆ ಬಗ್ಗೆ ಪದೇ ಪದೇ ಕೆಣಕುವುದು, ಅವಮಾನ ಅಪಮಾನ ಮಾಡೋದು ಎಷ್ಟುಸರಿ? ಇವರ ಹೇಳಿಕೆಯಿಂದ ಎಷ್ಟೊಂದು ಜನಕ್ಕೆ ನೋವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಅವರ ಆಡಳಿತ, ಅವರ ನೀತಿಯಿಂದಲೇ ದೇಶಕ್ಕೆ ಆಂತರಿಕ ಧಕ್ಕೆ ಬಂದಿದೆ. ಅರಾಜಕತೆ ಹುಟ್ಟಿಸಿ ಅಧಿಕಾರಕ್ಕೆ ಬರುವ ಮನಸ್ಥಿತಿ ಇವರದ್ದು ಎಂದರು. ಸತೀಶ್ ಹೇಳಿಕೆ ಕುರಿತಂತೆ ಯಾಕೆ ಸಿದ್ದರಾಮಯ್ಯ ಇನ್ನೂ ಮಾತಾಡಿಲ್ಲ? ಇದಕ್ಕೆ ರಾಹುಲ್ ಗಾಂಧಿ ಅಭಿಪ್ರಾಯ ಏನು? ಕಾರ್ಯಾಧ್ಯಕ್ಷರ ಹೇಳಿಕೆಗೆ ಕ್ರಮ ಜರುಗಿಸುತ್ತಾರಾ? ಎಂದು ಕಾಂಗ್ರೆಸ್ ಹೈಕಮಾಂಡ್‌ಗೆ ಸಿಎಂ ಬೊಮ್ಮಾಯಿ ಪ್ರಶ್ನೆಗಳ ಸುರಿಮಳೆಗರೆದರು.