ಬೆಂಗಳೂರು(ಮೇ.07): ರಾಜ್ಯದಲ್ಲಿ ಬುಧವಾರ ಮತ್ತೆ 20 ಮಂದಿಗೆ ಸೋಂಕು ದೃಢಪಟ್ಟಿದ್ದು, ಬಾಗಲಕೋಟೆಯ ಬಾದಾಮಿ ಒಂದರಲ್ಲೇ 13 ಮಂದಿಗೆ ಸೋಂಕು ವರದಿಯಾಗಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 693ಕ್ಕೆ ಏರಿಕೆಯಾಗಿದೆ.

ಬಾಗಲಕೋಟೆಯಲ್ಲಿ ಒಂದೇ ದಿನ 13 ಮಂದಿಗೆ ಸೋಂಕು ದೃಢಪಟ್ಟಿದ್ದು, ಈ ಪೈಕಿ ಒಬ್ಬ ಗರ್ಭಿಣಿಯಿಂದಲೇ 12 ಮಂದಿಗೆ ಸೋಂಕು ಹರಡಿರುವುದು ತೀವ್ರ ಆತಂಕ ಸೃಷ್ಟಿಸಿದೆ. ಈ ಪ್ರಕರಣದಿಂದಾಗಿ ಬಾಗಲಕೋಟೆಯಲ್ಲಿ ಸೋಂಕಿತರ ಸಂಖ್ಯೆ 48ಕ್ಕೆ ತಲುಪಿದೆ.

ಇನ್ನು ಬೆಂಗಳೂರಿನಲ್ಲಿ ಹೊಂಗಸಂದ್ರದ ಬಿಹಾರಿ ಸೋಂಕಿತನ ಸಂಪರ್ಕದಿಂದ ಸೋಂಕಿಗೆ ಗುರಿಯಾಗಿದ್ದ 654ನೇ ಸೋಂಕಿತನ ಪತ್ನಿ ಹಾಗೂ ಪುತ್ರನಿಗೂ ಬುಧವಾರ ಸೋಂಕು ದೃಢಪಟ್ಟಿದೆ. ಸೋಂಕು ದೃಢಪಟ್ಟಪುತ್ರ ಇ-ಕಾಮರ್ಸ್‌ ಕಂಪನಿ ಫ್ಲಿಪ್‌ಕಾರ್ಟ್‌ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುತ್ತಿದ್ದ.

ನಿಟ್ಟೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾದಾಮಿಯ ವಿದ್ಯಾರ್ಥಿನಿಗೆ ಕೊರೋನಾ

ರಾಜ್ಯದಲ್ಲಿ ಬುಧವಾರದವರೆಗೆ ವರದಿಯಾಗಿರುವ 693 ಪ್ರಕರಣಗಳ ಪೈಕಿ 30 ಮಂದಿ ಮೃತಪಟ್ಟಿದ್ದು, 354 ಮಂದಿ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಉಳಿದಂತೆ 309 ಮಂದಿ ಸಕ್ರಿಯ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದು, 6 ಮಂದಿ ಐಸಿಯುನಲ್ಲಿದ್ದಾರೆ ಎಂದು ಇಲಾಖೆ ಮಾಹಿತಿ ನೀಡಿದೆ.

ಬಾಗಲಕೋಟೆಗೆ ವೈರಸ್‌ ದಾಳಿ:

ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಒಂದೇ ದಿನ 13 ಸೋಂಕು ದೃಢಪಟ್ಟಿವೆ. ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿನಿಧಿಸುವ ಕ್ಷೇತ್ರವು ಸೋಂಕಿನ ಗೂಡಾಗಿ ಪರಿಣಮಿಸುತ್ತಿದೆ. ತೀವ್ರ ಉಸಿರಾಟ ತೊಂದರೆ (ಸಾರಿ) ಹಿನ್ನೆಲೆಯ 23 ವರ್ಷದ ಗರ್ಭಿಣಿ ಮಹಿಳೆಯಿಂದ (607ನೇ ಸೋಂಕಿತೆ) 12 ಮಂದಿಗೆ ಸೋಂಕು ಹರಡಿದೆ. ಆದರೆ, ಮಹಿಳೆಗೆ ಸೋಂಕು ತಗುಲಿದ್ದು ಹೇಗೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಇದಲ್ಲದೆ ಐಎಲ್‌ಐ ಹಿನ್ನೆಲೆಯ 18 ವರ್ಷದ ಯುವತಿಗೆ ಸೋಂಕು ದೃಢಪಟ್ಟಿದೆ.

ದಕ್ಷಿಣ ಕನ್ನಡಲ್ಲಿ ಮತ್ತೆ 3 ಮಂದಿಗೆ ಸೋಂಕು:

ದಕ್ಷಿಣ ಕನ್ನಡದಲ್ಲಿ 11 ವರ್ಷದ ಬಾಲಕಿ ಹಾಗೂ 35 ವರ್ಷದ ಮಹಿಳೆಗೆ ಸೋಂಕು ತಗುಲಿದ್ದು, ಈ ಇಬ್ಬರು ಸೋಂಕಿತೆ 536ರ ಪ್ರಾಥಮಿಕ ಸಂಪರ್ಕ ಹೊಂದಿದ್ದರು ಎಂದು ತಿಳಿದುಬಂದಿದೆ. ಜಿಲ್ಲೆಯ ಇನ್ನೊಂದು ಪ್ರಕರಣದಲ್ಲಿ ಬಂಟ್ವಾಳದಲ್ಲಿ ಏ.19ರಂದು ಸಾವಿಗೀಡಾಗಿದ್ದ ಮಹಿಳೆಯೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 16 ವರ್ಷದ ಯುವತಿಗೆ ಸೋಂಕು ತಗುಲಿದೆ.

ಮಂಗಳೂರಲ್ಲಿ ಹೆಚ್ಚಿದ ಕೊರೋನಾತಂಕ: ಉಡುಪಿಯಲ್ಲಿ ಸರ್ಕಾರಿ ಬಸ್ ಸೇವೆ ಆರಂಭ

ಉಳಿದಂತೆ ಕಲಬುರಗಿಯಲ್ಲಿ ಸೋಂಕಿತ 607ರ ಸಂಪರ್ಕದಿಂದ 52 ವರ್ಷದ ಪುರುಷ, ವಿಜಯಪುರದಲ್ಲಿ ಜಿಲ್ಲೆಯ ಮೊದಲ ಸೋಂಕಿತೆ ವೃದ್ಧೆಯಿಂದ 35 ವರ್ಷದ ಮತ್ತೊಬ್ಬ ಮಹಿಳೆಗೆ ಸೋಂಕು ತಗುಲಿದೆ.

23 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬೆಳಗಾವಿಯಿಂದ 8, ಬಾಗಲಕೋಟೆಯಿಂದ 4, ಕಲಬುರಗಿಯಿಂದ 5, ವಿಜಯಪುರದಿಂದ 1, ಮಂಡ್ಯದಿಂದ 4, ದಕ್ಷಿಣ ಕನ್ನಡ ಜಿಲ್ಲೆಯಿಂದ ಒಬ್ಬರು ಗುಣಮುಖರಾಗಿದ್ದು, ಬಾಗಲಕೋಟೆಯಿಂದ ಬಿಡುಗಡೆಯಾದ 4 ಮಂದಿ ಪೈಕಿ ಇಬ್ಬರು ಕೆಎಸ್‌ಆರ್‌ಪಿ ಪೇದೆಗಳಾಗಿದ್ದಾರೆ.