Asianet Suvarna News Asianet Suvarna News

ಜ್ಞಾನಯೋಗಿ ಸಿದ್ದೇಶ್ವರ ಶ್ರೀಗೆ 20 ಲಕ್ಷ ಭಕ್ತರಿಂದ ಅಂತಿಮ ನಮನ

ಕಣ್ಣು ಹಾಯಿಸಿದಷ್ಟುಉದ್ದ ಜನಸಾಗರ... ವಿಜಯಪುರ, ಬಾಗಲಕೋಟೆ, ಕಲಬುರಗಿ, ಬೀದರ್‌, ಬೆಳಗಾವಿ, ಗದಗ, ಹಾವೇರಿ ಸೇರಿ ರಾಜ್ಯದ ನಾನಾ ಭಾಗಗಳಿಂದ ಮಾತ್ರವಲ್ಲ, ಪಕ್ಕದ ಮಹಾರಾಷ್ಟ್ರದಿಂದಲೂ ಊಟ, ನಿದ್ದೆ ಬಿಟ್ಟು ಆಗಮಿಸಿದ 20 ಲಕ್ಷಕ್ಕೂ ಅಧಿಕ ಭಕ್ತಗಣ!

20 lakh devotees are visit siddheshwar swamijis final darshan gvd
Author
First Published Jan 4, 2023, 9:51 AM IST

ವಿಜಯಪುರ (ಜ.04): ಕಣ್ಣು ಹಾಯಿಸಿದಷ್ಟು ಉದ್ದ ಜನಸಾಗರ... ವಿಜಯಪುರ, ಬಾಗಲಕೋಟೆ, ಕಲಬುರಗಿ, ಬೀದರ್‌, ಬೆಳಗಾವಿ, ಗದಗ, ಹಾವೇರಿ ಸೇರಿ ರಾಜ್ಯದ ನಾನಾ ಭಾಗಗಳಿಂದ ಮಾತ್ರವಲ್ಲ, ಪಕ್ಕದ ಮಹಾರಾಷ್ಟ್ರದಿಂದಲೂ ಊಟ, ನಿದ್ದೆ ಬಿಟ್ಟು ಆಗಮಿಸಿದ 20 ಲಕ್ಷಕ್ಕೂ ಅಧಿಕ ಭಕ್ತಗಣ! ಇದು ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಅಂತಿಮ ದರ್ಶನದ ವೇಳೆ ವಿಜಯಪುರ ನಗರದಲ್ಲಿ ಮಂಗಳವಾರ ಕಂಡು ಬಂದ ದೃಶ್ಯ. ಲಕ್ಷಾಂತರ ಮಂದಿ ಊರು, ಪರವೂರು, ರಾಜ್ಯ, ಹೊರರಾಜ್ಯದಿಂದ ಆಗಮಿಸಿ ಉಕ್ಕಿಬರುತ್ತಿರುವ ಕಣ್ಣೀರಿನೊಂದಿಗೆ ನಡೆದಾಡುವ ದೇವರ ಅಂತಿಮ ದರ್ಶನ ಪಡೆದುಕೊಂಡರು.

ಶ್ರೀಗಳಲ್ಲಿ ನಡೆದಾಡುವ ದೇವರನ್ನೇ ಕಾಣುತ್ತಿದ್ದ ಭಕ್ತ ಸಮೂಹ ತಮ್ಮೆಲ್ಲ ಕೆಲಸಗಳನ್ನು ಪಕ್ಕಕ್ಕಿಟ್ಟು ಜ್ಞಾನಯೋಗಾಶ್ರಮಕ್ಕೆ ದೌಡಾಯಿಸಿತ್ತು. ಮಂಗಳವಾರ ಮುಂಜಾನೆಯಿಂದಲೇ ಶ್ರೀಗಳ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಶ್ರೀಗಳ ದರ್ಶನ ಪಡೆಯಬೇಕೆಂಬ ಮಹದಾಸೆಯಿಂದ ಸೈನಿಕ ಶಾಲೆ ಹೊರಗೆ ಸೋಮವಾರ ರಾತ್ರಿಯಿಂದಲೇ ಭಕ್ತರು ಕಾದುಕುಳಿತಿದ್ದರು. ರಾತ್ರಿ ಕಳೆದು ಬೆಳಕು ಹರಿಯುತ್ತಿದ್ದಂತೆ ಭಕ್ತರ ಸಂಖ್ಯೆ ಬೆಳೆಯುತ್ತಲೇ ಹೋಯಿತು. ಜ್ಞಾನಯೋಗಾಶ್ರಮದ ಆಜುಬಾಜು ಸುಮಾರು 3 ಕಿಮೀನಷ್ಟುಉದ್ದ ಜನಸಾಗರವೇ ಕಾಣುತ್ತಿತ್ತು.

ಸಿದ್ದೇಶ್ವರ ಶ್ರೀಗಳು ಇಚ್ಛಾ ಮರಣ ಬಯಸಿದ್ದರೆ?: ಶ್ರೀಗಳನ್ನು ಕಾಡಿತ್ತಾ‘ಪ್ರಾಸ್ಟೇಟ್‌’ಬಾಧೆ

ಒಡೆದ ದುಃಖದ ಕಟ್ಟೆ: ಸ್ವಾಮೀಜಿ ಅವರ ಪಾರ್ಥಿವ ಶರೀರವನ್ನು ಬೆಳಗಿನ ಜಾವ ಸೈನಿಕ ಶಾಲೆಯಲ್ಲಿ ಕೂರಿಸುತ್ತಿದ್ದಂತೆ ಭಕ್ತರು ಉಕ್ಕಿ ಬಂದ ದುಃಖವನ್ನು ನಿಯಂತ್ರಿಸಿಕೊಳ್ಳಲಾಗದೆ ಗಳಗಳನೇ ಅತ್ತರು. ಒಮ್ಮೆಲೇ ವೇದಿಕೆಯತ್ತ ನುಗ್ಗಲು ಆರಂಭಿಸಿದರು. ಈ ವೇಳೆ ಪೊಲೀಸರು ಎಲ್ಲರನ್ನೂ ಸಮರ್ಥವಾಗಿ ನಿಭಾಯಿಸಿದರು. ರಸ್ತೆಯ ಎರಡು ಬದಿ ನಿಂತು ಭಕ್ತರು ಸಾಲು ಸಾಲಾಗಿ ಬಂದು ಶ್ರೀಗಳ ಅಂತಿಮ ದರ್ಶನ ಪಡೆದುಕೊಂಡರು. ಈವರೆಗೆ ಅವರ ಪ್ರವಚನ ಕೇಳುತ್ತಿದ್ದ ಭಕ್ತರು ಅವರ ಪಾರ್ಥಿವ ಶರೀರ ನೋಡುತ್ತಿದ್ದಂತೆಯೇ ಕಣ್ಣೀರಾದರು.

ಮತ್ತೆ ಹುಟ್ಟಿಬನ್ನಿ ಸಿದ್ದಪ್ಪಾಜಿ, ಮರಳಿ ಬನ್ನಿ ಶ್ರೀಗಳೇ ಎಂದು ನೆರೆದಿದ್ದ ಭಕ್ತಸಮೂಹ ಜೈಕಾರ ಹಾಕುತ್ತಿರುವುದು ಕಂಡುಬಂತು. ಮಾತ್ರವಲ್ಲ, ಸಿದ್ದೇಶ್ವರ ಮಹಾರಾಜ ಕೀ ಜೈ ಎಂದು ಭಕ್ತರು ಘೋಷಣೆ ಕೂಡ ಕೂಗುತ್ತಿದ್ದರು. ಶ್ರೀಗಳ ಪಾರ್ಥಿವ ಶರೀರವನ್ನು ಜ್ಞಾನಯೋಗಾಶ್ರಮದಿಂದ ಸೈನಿಕ ಶಾಲೆ, ಸೈನಿಕ ಶಾಲೆಯಿಂದ ಜ್ಞಾನಯೋಗಾಶ್ರಮಕ್ಕೆ ಕರೆದೊಯ್ಯುವ ಮಾರ್ಗದಲ್ಲಿ ಬರುವ ಕಟ್ಟಡಗಳ ಮೇಲೆಲ್ಲ ನಿಂತು ಭಕ್ತರು ಶ್ರೀಗಳ ದರ್ಶನ ಪಡೆದರು.

ನೋಡುತ್ತಲೇ ಇದ್ದ ಭಕ್ತರು: ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನಕ್ಕೆ ಬಂದಿದ್ದ ಭಕ್ತರಿಗೆ ಹೆಚ್ಚಿನ ಹೊತ್ತು ಶ್ರೀಗಳ ದರ್ಶನ ಸಾಧ್ಯವಾಗಲಿಲ್ಲ. ಕಟ್ಟಕಡೆಯ ಭಕ್ತರಿಗೂ ದರ್ಶನ ಭಾಗ್ಯ ಸಿಗಬೇಕು ಎಂಬ ದೃಷ್ಟಿಯಿಂದ ಜಿಲ್ಲಾಡಳಿತ ಸಕಲ ರೀತಿಯ ವ್ಯವಸ್ಥೆ ಕಲ್ಪಿಸಿತ್ತು. ಆದರೆ, ಶ್ರೀಗಳನ್ನು ನೋಡುತ್ತಿದ್ದಂತೆ ಭಕ್ತರ ಹೃದಯದಂತೆ ಕಾಲು ಕೂಡ ಭಾರವಾಗಿ ಹೆಜ್ಜೆ ಮುಂದಡಿಯಿಡಲು ಹಿಂದೇಟು ಹಾಕುತ್ತಿತ್ತು. ಹೀಗಾಗಿ ಭಕ್ತರನ್ನು ಸಂತೈಸುತ್ತಲೇ ಎಲ್ಲರಿಗೂ ಶ್ರೀಗಳ ದರ್ಶನಕ್ಕೆ ಅವಕಾಶ ಮಾಡಿಕೊಡಲು ಪೊಲೀಸರು ಹರಸಾಹಸ ಪಡೆಯಬೇಕಾಯಿತು.

Vijayapura: ಆಶ್ರಮದಲ್ಲೇ ತಾಯಿಗೆ ಪೂಜೆ ಸಲ್ಲಿಸಿದ್ದ ಸಿದ್ದೇಶ್ವರ ಶ್ರೀ!

ಸ್ವತಃ ಫೀಲ್ಡಿಗೆ ಇಳಿದ ಯತ್ನಾಳ, ಶ್ರೀರಾಮುಲು: ಅಂತಿಮ ದರ್ಶನ ಪಡೆದುಕೊಳ್ಳಲು ಬಂದ ಲಕ್ಷಾಂತರ ಸಂಖ್ಯೆಯ ಭಕ್ತರನ್ನು ಸಂಭಾಳಿಸುವುದು ಪೊಲೀಸರು ತೀವ್ರ ಹರಸಾಹಸಪಡುತ್ತಿದ್ದಗಾ ಪರಿಸ್ಥಿತಿ ಅರಿತ ವಿಜಯಪುರ ನಗರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಕೂಡ ಅಂತಿಮ ದರ್ಶನ ಪಡೆದುಕೊಂಡವರು ಉಳಿದವರಿಗೆ ಅವಕಾಶ ಕಲ್ಲಿಸಬೇಕೆಂದು ಜನಸ್ತೋಮಕ್ಕೆ ಕೈ ಮುಗಿದು ಬೇಡಿಕೊಳ್ಳುತ್ತಿದ್ದರು. ಬೇಗ ಮುಂದೆ ಸಾಗಿ, ಇನ್ನೂ ಸಾಕಷ್ಟುಜನ ದರ್ಶನ ಪಡೆದುಕೊಳ್ಳುವವರು ಇದ್ದಾರೆ ಎಂದು ಕೈ ಮುಗಿದು ಮನವಿ ಮಾಡುತಿತದ್ದರು. ಇನ್ನು ಸಾರಿಗೆ ಸಚಿವ ಶ್ರೀರಾಮುಲು ಅವರೂ ನೆರೆದ ಭಕ್ತರನ್ನು ಮುಂದೆ ಸಾಗುವಂತೆ ಮನವಿ ಮಾಡುತ್ತಿದ್ದ, ಸೀಟಿ ಹೊಡೆದು ಮುಂದೆ ಸಾಗಿ ಎಂದು ಮನವಿ ಮಾಡಿ ಜನರನ್ನು ನಿಯಂತ್ರಿಸಲು ಪೊಲೀಸರಿಗೆ ನೆರವು ನೀಡಿದರು.

Follow Us:
Download App:
  • android
  • ios